ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಆರ್‌ಬಿಐ, ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ. ಬ್ಯಾಂಕಿನ ವ್ಯವಹಾರವನ್ನು ನಿಷೇಧಿಸಲಾಗಿದೆ

ಠೇವಣಿದಾರರಿಗೆ ಹಣ ಮರಳಿಸಲು ಕ್ರಮ

ಪಿಟಿಐ ಮುಂಬೈ (ಜೂ.19): ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಕರ್ನಾಟಕ ಬೆಳಗಾವಿ ಜಿಲ್ಲೆ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ(Sri Mahalakshmi Urban Co-operative Credit Bank) ಪರವಾನಗಿಯನ್ನು ರಿಸರ್ವ್ ಬ್ಯಾಂಕ್(RBI) ರದ್ದುಗೊಳಿಸಿದೆ. ಅದರಂತೆ ಗುರುವಾರದಿಂದಲೇ ಠೇವಣಿ ಸ್ವೀಕಾರ ಮತ್ತು ಠೇವಣಿ ಮರುಪಾವತಿ ಸೇರಿದಂತೆ ಎಲ್ಲ ಬ್ಯಾಂಕಿಂಗ್ ವ್ಯವಹಾರವನ್ನು ನಿಷೇಧಿಸಲಾಗಿದೆ.

ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ

ಬ್ಯಾಂಕ್ ವ್ಯವಹಾರ ಅಂತ್ಯಗೊಳಿಸಲು ಮತ್ತು ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ ಹೊರಡಿಸುವಂತೆ ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಕೋರಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ದಿವಾಳಿಯ ನಂತರ, ಸುಮಾರು ಶೇ.97.9ರಷ್ಟು ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ನಿಂದ ಪಡೆಯಲಿದ್ದಾರೆ ಎಂದು ಅದು ಹೇಳಿದೆ.

ಬ್ಯಾಂಕ್‌ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳನ್ನು ಹೊಂದಿಲ್ಲ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಕೆಲವು ನಿಬಂಧನೆಗಳನ್ನು ಅದು ಪಾಲಿಸಲು ಸಾಧ್ಯವಿಲ್ಲ ಎಂದು ಲೈಸೆನ್ಸ್‌ ರದ್ದತಿಗೆ ಆರ್‌ಬಿಐ ಕಾರಣ ನೀಡಿದೆ.

‘ಈಗಿನ ಆರ್ಥಿಕ ಸ್ಥಿತಿಯನ್ನು ನೋಡಿದರೆ ಬ್ಯಾಂಕ್ ತನ್ನ ಪ್ರಸ್ತುತ ಠೇವಣಿದಾರರಿಗೆ ಪೂರ್ಣವಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನ ಮುಂದುವರಿಕೆಯು ಅದರ ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ’ ಎಂದೂ ಅದು ಹೇಳಿದೆ.