ಕರ್ನಾಟಕದಲ್ಲಿರುವ 20 ಲಕ್ಷ ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಭದ್ರತೆ ಬೇಕಿದ್ದರೆ, ಸಂಘಟನೆಯು ಮೊದಲು ನೋಂದಣಿ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ. ನೋಂದಣಿ ಮಾಡಿಕೊಳ್ಳದಿದ್ದರೆ ಅವರಿಂದ ಹೇಗೆ ಉತ್ತರ ಪಡೆಯಬೇಕೆಂದು ತಮಗೆ ತಿಳಿದಿದೆ ಎಂದೂ ಅವರು ಖಡಕ್ ಎಚ್ಚರಿಕೆ
ನವದೆಹಲಿ (ಜು.30): ‘ಕರ್ನಾಟಕದಲ್ಲಿ 20 ಲಕ್ಷ ಆರ್‌ಎಸ್‌ಎಸ್ ಸ್ವಯಂಸೇವಕರು ಕೈಯಲ್ಲಿ ಲಾಠಿ ಹಿಡಿದು, ಸಮವಸ್ತ್ರ ತೊಟ್ಟು ಬೀದಿ ಬೀದಿ ಸುತ್ತುತ್ತಿದ್ದಾರೆ. ಅವರಿಗೆ ಗೃಹ ಇಲಾಖೆ ಭದ್ರತೆ ನೀಡಬೇಕೆಂದರೆ, ಮೊದಲು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರಿಂದ ಹೇಗೆ ಉತ್ತರ ಪಡೆಯಬೇಕೆಂಬುದು ನನಗೆ ಗೊತ್ತಿದೆ’ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ ಖರ್ಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ರಾಜ್ಯದಲ್ಲಿ 20 ಲಕ್ಷ ಜನ ಲಾಠಿ ಹಿಡಿದು ರಸ್ತೆ ರಸ್ತೆಯಲ್ಲಿ ತಿರುಗುತ್ತಿದ್ದಾರೆ. ಅವರಿಗೆ ಗೃಹ ಇಲಾಖೆ ಭದ್ರತೆ ನೀಡಬೇಕು ಎಂದು ನಿರೀಕ್ಷಿಸಿದರೆ, ಅವರು ಯಾರು ಎಂಬುದನ್ನು ನನಗೆ ತಿಳಿಸಬೇಕು. ಅವರು ಯಾವುದೇ ಕಾನೂನುಬಾಹಿರ ಕೃತ್ಯ ಮಾಡಿದರೂ ನೆಲದ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳಬೇಕು’ ಎಂದು ಪುನರುಚ್ಚರಿಸಿದರು.
ಉತ್ತರ ಪಡೆಯುವುದು ಗೊತ್ತಿದೆ:
‘ಸರ್ಕಾರ ಮತ್ತು ಗೃಹ ಇಲಾಖೆ ಯಾವ ಸಂಘಟನೆಯ ಸೇವಕನೂ ಅಲ್ಲ. ಮೊದಲು ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳಲಿ. ಅವರು ಯಾರು, ಏನು ಮಾಡುತ್ತಿದ್ದಾರೆ ಎಂಬುದನ್ನು ನಮಗೆ ತಿಳಿಸಲಿ. ಹೊಣೆಗಾರಿಕೆ ನೀಡಲಿ. ಆಮೇಲೆ ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರು ಉತ್ತರ ಕೊಡುವುದಿಲ್ಲ ಎಂದು ನನಗೆ ಗೊತ್ತಿದೆ. ಏಕೆಂದರೆ ಅವರು ಹೇಡಿಗಳು. ಅವರಿಂದ ಹೇಗೆ ಉತ್ತರ ಪಡೆಯಬೇಕೆಂಬುದು ನನಗೆ ಗೊತ್ತಿದೆ. ನಾನು ದೇಶದ ಅತ್ಯಂತ ಅಭಿವೃದ್ಧಿಶೀಲ ರಾಜ್ಯವೊಂದರ ಗೃಹ ಸಚಿವ. ಏನು ಮಾಡಬೇಕೆಂಬುದು ನನಗೆ ತಿಳಿದಿದೆ’ ಎಂದು ಎಚ್ಚರಿಸಿದರು.
ಬಿಜೆಪಿಗರ ಮಕ್ಕಳು ಸಂಘದಲ್ಲೇಕಿಲ್ಲ?
‘ಆರ್‌ಎಸ್‌ಎಸ್ ಸಿದ್ಧಾಂತ ಅಷ್ಟೊಂದು ಉತ್ತಮವಾಗಿದ್ದರೆ, ಏಕೆ ಬಿಜೆಪಿಗರ ಮಕ್ಕಳು ಆರ್‌ಎಸ್‌ಎಸ್‌ನಲ್ಲಿಲ್ಲ? ಸ್ವಯಂಸೇವಕರಾಗಿಲ್ಲ? ಶಾಖೆಗೆ ಹೋಗುವುದಿಲ್ಲ? ಗೋಮೂತ್ರ ಕುಡಿಯುವುದಿಲ್ಲ? ಈ ಚಿಂತನಾ ಕ್ರಮದ ವಿರುದ್ಧವೇ ನಾವು ಹೋರಾಡುತ್ತಿರುವುದು’ ಎಂದು ವಾಗ್ದಾಳಿ ನಡೆಸಿದರು.


