ನಟಿ ಸ್ವರಾ ಭಾಸ್ಕರ್, ರಜಪೂತ ಮಹಿಳೆಯರ ಜೋಹರ್ ಪದ್ಧತಿಯನ್ನು ಟೀಕಿಸಿ, ಜೀವ ತ್ಯಾಗ ಮಾಡಿದವರನ್ನು 'ಹೇಡಿಗಳು' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ಣಿ ಸೇನೆಯು, ಸ್ವರಾಗೆ ಧೈರ್ಯವಿದ್ದರೆ ಇಸ್ಲಾಂನ ಹಲಾಲಾ ಪದ್ಧತಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಿನಿಮಾಗಳಿಗಿಂತ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗಿದ್ದು ಹೆಚ್ಚು. ಇದೀಗ ಮತ್ತೆ ಅಂತಹದ್ದೊಂದು ಹೇಳಿಕೆಯಿಂದ ವಿವಾದಕ್ಕೊಳಗಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ರಜಪೂತ ಮಹಿಳೆಯರ ಧೈರ್ಯದ ಬಗ್ಗೆ ಹಗುರವಾಗಿ ಮಾತನಾಡಿ ಜೀವ ತ್ಯಾಗ ಮಾಡಿದ ಮಹಿಳೆಯರನ್ನ 'ಹೇಡಿ'ಗಳೆಂದು ಕರೆದಿರುವುದು ರಾಜಸ್ಥಾನದ ಕರ್ಣಿ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಿನಗೆ ಧೈರ್ಯವಿದ್ದರೆ ಇಸ್ಲಾಂನ ಹಲಾಲಾ ಪದ್ಧತಿ ಬಗ್ಗೆ ಮಾತಾಡು
ಜೋಹರ್ ಬಗ್ಗೆ ಸ್ವರಾ ಭಾಸ್ಕರ್ ಕೀಳು ಹೇಳಿಕೆ ವಿರುದ್ಧ ಸಿಡಿದೆದ್ದಿರುವ ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಕೀರ್ತಿ ರಾಥೋಡ್, ಸ್ವರಾ ಭಾಸ್ಕರ್ ಅವರಿಗೆ ರಜಪೂತ ಇತಿಹಾಸದ ಬಗ್ಗೆ ಯಾವುದೇ ಜ್ಞಾನವಿಲ್ಲ, ಬಾಯಿಗೆ ಬಂದಂತೆ ಮಾತನಾಡ್ತಾರೆ. ಇಂತಹ ಹೇಳಿಕೆಗಳನ್ನ ನೀಡುವ ಮೂಲಕ ಕ್ಷತ್ರಿಯ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಇದು ರಜಪೂತ ಧೈರ್ಯಶಾಲಿ ಮಹಿಳೆಯರ ತ್ಯಾಗಕ್ಕೆ ಮಾಡಿದ ಅವಮಾನ. ಸ್ವರಾ ಭಾಸ್ಕರ್‌ಗೆ ಧೈರ್ಯವಿದ್ದರೆ ಇಸ್ಲಾಂನಲ್ಲಿರುವ ಹಲಾಲಾ ಪದ್ಧತಿ ಬಗ್ಗೆ ಪ್ರಶ್ನಿಸಲಿ ಎಂದು ಸವಾಲು ಹಾಕಿದ್ದಾರೆ.
ಸ್ವರ ಭಾಸ್ಕರ್‌ಗೆ ಕರ್ಣಿಸೇನೆ ಎಚ್ಚರಿಕೆ
ಸ್ವರ ಭಾಸ್ಕರ್ ನಾಲಗೆ ಇದೆ ಅಂತಾ ಮನಸಿಗೆ ಬಂದಂತೆ ಹೇಳಿಕೆ ಕೊಡೋದು ನಿಲ್ಲಿಸಬೇಕು. ಭಾಷೆಯನ್ನ ಸುಧಾರಿಸಿಕೊಳ್ಳಬೇಕು ಎಂದು ಕರ್ಣಿ ಸೇನೆ ಎಚ್ಚರಿಕೆ ನೀಡಿದೆ. ಈ ರೀತಿ ಹಿಂದೂ ಕ್ಷತ್ರಿಯರ ಬಗ್ಗೆ ಅಸಭ್ಯ ಭಾಷೆ ಬಳಸಿದರೆ ಕರ್ಣಿ ಸೇನೆ ನಿಮ್ಮ ಕ್ಷಮಿಸುವುದಿಲ್ಲ. ಎರಡನೆಯದಾಗಿ, ಸ್ವರ ಭಾಸ್ಕರ್ ಊರು ಉಸಾಬರಿ ಬಿಟ್ಟು ಮೊದಲು ತನ್ನ ಮನೆಕೆಲಸ ಮಾಡಿಕೊಳ್ಳಲಿ. ನಮ್ಮ ರಜಪೂತ ಕ್ಷತ್ರಿಯ ಮಹಿಳೆಯರಿಗೆ ಅದ್ಭುತ ಇತಿಹಾಸವಿದೆ. ನಮ್ಮ ಪೂಜ್ಯ ತಾಯಿ ಪದ್ಮಿನಿ 16 ಸಾವಿರ ಕ್ಷತ್ರಿಯ ಮಹಿಳೆಯರೊಂದಿಗೆ ತನ್ನ ಪ್ರಾಣವನ್ನು ಹೇಗೆ ತ್ಯಾಗ ಮಾಡಿದರು ಎಂಬುದನ್ನು ಇತಿಹಾಸ ಹೇಳುತ್ತದೆ. ಕ್ಷತ್ರಿಯ ಮಹಿಳೆಯರು ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂದು ಅವರು ಎಲ್ಲರಿಗೂ ತೋರಿಸಿದ್ದರು. ನೀವು ಎಷ್ಟೇ ಪ್ರಯತ್ನಿಸಿದರೂ ಕ್ಷತ್ರಿಯರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಮೊಘಲರಿಗೆ ತಿಳಿಸಲು ಜೌಹರ್ ಅನ್ನು ಪ್ರದರ್ಶಿಸಲಾಯಿತು.


