- Home
- News
- State
- ಬಿಡದಿ ಟೌನ್‌ಶಿಪ್ ವಿವಾದ:ಭೂ ಮಾಫಿಯಾ ಖಂಡಿಸಿ ಹೋರಾಟಕ್ಕಿಳಿದ ಹೆಚ್‌ಡಿಡಿ, ಸೋನಿಯಾ ಗಾಂಧಿ, ರಾಹುಲ್‌ಗೆ ದೇವೇಗೌಡ ಪತ್ರ
ಬಿಡದಿ ಟೌನ್‌ಶಿಪ್ ವಿವಾದ:ಭೂ ಮಾಫಿಯಾ ಖಂಡಿಸಿ ಹೋರಾಟಕ್ಕಿಳಿದ ಹೆಚ್‌ಡಿಡಿ, ಸೋನಿಯಾ ಗಾಂಧಿ, ರಾಹುಲ್‌ಗೆ ದೇವೇಗೌಡ ಪತ್ರ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯು ರೈತರ ಜಮೀನು ಕಬಳಿಸುವ ಭೂ ದಂಧೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟ ಘೋಷಿಸಿರುವ ಅವರು, ಕಾಂಗ್ರೆಸ್ ವರಿಷ್ಠರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.

ಅನ್ಯಾಯದ ವಿರುದ್ಧ ತಾನು ಹೋರಾಟಕ್ಕೆ ದುಮುಕಿದ್ದೇನೆ
ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಭುಗಿಲೆದ್ದಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆರೋಪಗಳನ್ನು ಹೊರಿಸಿದ್ದಾರೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನನ್ನು ಕಬಳಿಸಿ ಭೂ ದಂಧೆ ನಡೆಸಲು ಯತ್ನಿಸಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿ, ಈ ಅನ್ಯಾಯದ ವಿರುದ್ಧ ತಾನು ಹೋರಾಟಕ್ಕೆ ದುಮುಕಿದ್ದೇನೆ ಎಂದು ಘೋಷಿಸಿದ್ದಾರೆ. ರಾಮನಗರ ಪ್ರದೇಶದಲ್ಲಿ ಭೂ ವ್ಯವಹಾರಗಳು ಮತ್ತು ಅಭಿವೃದ್ಧಿ ಪ್ರಾಧಿಕಾರಗಳ ಪುನರ್ರಚನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.

ಬಿಡದಿ ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ
ಈ ಕುರಿತು ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಶ್ರಯದಲ್ಲಿ ಭೂ ಮಾಫಿಯಾ ಬಲವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಡದಿಯನ್ನು ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳ ಕೇಂದ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ. ಈ ವಿವಾದದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧ ಮಾಡಿದ ಆರೋಪಗಳ ನಂತರವೇ ದೇವೇಗೌಡರ ಪ್ರತಿಕ್ರಿಯೆ ಮತ್ತಷ್ಟು ಪುಷ್ಠಿ ನೀಡಿದೆ
ನಾನು ಪ್ರಧಾನಿ ಆದ ಊರಿನಲ್ಲಿ ನನಗೆ ನೋವುಂಟು ಮಾಡುತ್ತಿವೆ
ರಾಮನಗರ ಪ್ರದೇಶದ ಭೂ ವ್ಯವಹಾರಗಳು ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ಪುನರ್‌ರಚನೆ ಬಗ್ಗೆ ಆತಂಕ ವ್ಯಕ್ತಪಡಿಸಿದ ದೇವೇ ಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಅವರಿಗೆ ಪತ್ರ ಬರೆದಿದ್ದಾರೆ. ನಾನು ರಾಮನಗರದಿಂದಲೇ ರಾಜಕೀಯವಾಗಿ ಬೆಳೆದವನು. ಜನರ ಬೆಂಬಲದಿಂದ ಪ್ರಧಾನಿಯೂ ಆಗಿದ್ದೆ. ಆದರೆ ಈಗ ಅದೇ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನನಗೆ ನೋವುಂಟುಮಾಡುತ್ತಿವೆ, ಎಂದರು.
ಡಿಕೆಶಿ ಹೆಸರು ಉಲ್ಲೇಖಿಸದೆ ಆರೋಪ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಐದು ನಿಗಮಗಳ ರಚನೆ ಮತ್ತು ಅವುಗಳ ನಿಯಂತ್ರಣವನ್ನು ಭೂ ವ್ಯವಹಾರಗಳೊಂದಿಗೆ ಸಂಪರ್ಕಿಸಿ ದೇವೇಗೌಡರು ಪರೋಕ್ಷವಾಗಿ ಟೀಕಿಸಿದರು. ನೀರಾವರಿ ಸಚಿವರ ಅಧೀನದಲ್ಲಿರುವ ಈ ನಿಗಮಗಳ ಮೂಲಕ ಭೂ ಮಾಫಿಯಾ ಚಟುವಟಿಕೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ನಡೆಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಒಬ್ಬರು ರೈತರಿಂದ ಹೊಡೆಸಿಕೊಳ್ಳುವೆ ಎಂದು ಹೇಳುತ್ತಾರೆ. ಮೊದಲು ಅವರು ಹೋಗಿ ಹೊಡೆಸಿಕೊಂಡು ಬರಲಿ, ನಂತರ ನಾನು ರೈತರನ್ನು ಭೇಟಿಯಾಗುತ್ತೇನೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಅಳುತ್ತೇನೆ ಎಂದು ಕೆಲವರು ವ್ಯಂಗ್ಯ ಮಾಡುತ್ತಾರೆ
ಇದೇ ಸಂದರ್ಭದಲ್ಲಿ, ತಮ್ಮ ವಿರುದ್ಧ ಆಗಿದ್ದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ನಾನು ಅಳುತ್ತೇನೆ ಎಂದು ಕೆಲವರು ವ್ಯಂಗ್ಯ ಮಾಡುತ್ತಾರೆ. ಆದರೆ ಇಂತಹ ವ್ಯವಸ್ಥೆಯನ್ನು ನೋಡಿ ನಾನು ನಗುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಹಳೆಯ ಸ್ನೇಹಿತರು. ಆದರೆ ನಡೆಯುತ್ತಿರುವ ಅನ್ಯಾಯವನ್ನು ಅವರು ಗಮನಿಸುತ್ತಿಲ್ಲ ಎಂಬುದು ನೋವು ತಂದಿದೆ ಎಂದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು. ಹಿಂದೆ ಕುಮಾರಸ್ವಾಮಿ ಅವರು ಐದು ಟೌನ್‌ಶಿಪ್ ಯೋಜನೆಗಳನ್ನು ಪ್ರಸ್ತಾಪಿಸಿದಾಗ ಕಾಂಗ್ರೆಸ್ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಸತ್ಯಶೋಧನಾ ಸಮಿತಿಯೂ ರಚಿಸಲಾಯಿತು. ಆ ವರದಿಯಲ್ಲಿ ಏನು ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಜನರ ವಿರೋಧದ ಹಿನ್ನೆಲೆ ಆ ಯೋಜನೆಗಳನ್ನು ಕೈಬಿಡಲಾಯಿತು. ಈಗಲೂ ಬಿಡದಿಯಲ್ಲಿ ಜನರ ತೀವ್ರ ವಿರೋಧ ಇದೆ ಎಂದು ಹೇಳಿದರು.
ಬೆಂಗಳೂರು ಸುತ್ತಮುತ್ತ ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿದೆ
ಇನ್ನೂ ಮುಂದುವರಿದು, ಬೆಂಗಳೂರು ಸುತ್ತಮುತ್ತ ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತನಿಖೆ ನಡೆಸಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೀವು, ಜನರ ಸಮಸ್ಯೆಯನ್ನು ಕೇಳಬೇಕು. ಬಿಡದಿಯ ರೈತರ ಕಷ್ಟವನ್ನು ಯಾರಾದರೂ ಕೇಳಿದ್ದೀರಾ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಬಿಡದಿಗೆ ಭೇಟಿ ನೀಡಲು ಆಹ್ವಾನ
ಕೊನೆಗೆ, ಸಿಎಂ ಸಿದ್ದರಾಮಯ್ಯ ಅವರನ್ನು ಬಿಡದಿಗೆ ಭೇಟಿ ನೀಡಲು ಆಹ್ವಾನಿಸಿದ ದೇವೇಗೌಡರು, “ನಾನು ಕೂಡ ಬರುತ್ತೇನೆ. ನೀವು ಬನ್ನಿ, ರೈತರ ಸಮಸ್ಯೆಯನ್ನು ಸ್ಥಳದಲ್ಲೇ ನೋಡೋಣ. ಸ್ಥಳೀಯ ಅಧಿಕಾರಿಗಳು ಕೂಡ ಜನರ ಅಹವಾಲುಗಳನ್ನು ಕೇಳುತ್ತಿಲ್ಲ. ಇಲ್ಲಿ ಭಾರೀ ದಂಧೆ ನಡೆಯುತ್ತಿದೆ,” ಎಂದು ಆರೋಪಿಸಿದರು. ಕನಕಪುರ ಪ್ರದೇಶದಲ್ಲಿಯೂ ಭೂಸ್ವಾಧೀನದ ಕುರಿತು ತಮ್ಮ ಬಳಿ ಮಾಹಿತಿ ಇದೆ ಎಂದು ಸೂಚಿಸಿ, ಸರ್ಕಾರದ ವಿರುದ್ಧ ತಮ್ಮ ಹೋರಾಟ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

