ಆಟವಾಡುವಾಗ 9 ತಿಂಗಳ ಮಗು ನುಂಗಿದ್ದ ಎಲ್‌ಇಡಿ ಬಲ್ಬ್ ಶ್ವಾಸನಾಳದಲ್ಲಿ ಸಿಲುಕಿತ್ತು. ಇದರಿಂದ ಶ್ವಾಸಕೋಶಕ್ಕೆ ಹಾನಿಯಾಗುವ ಅಪಾಯವಿದ್ದರೂ, ಪುಣೆಯ ಸೇನಾ ವೈದ್ಯರು ಯಾವುದೇ ದೊಡ್ಡ ಸರ್ಜರಿ ಇಲ್ಲದೆ 'ಬ್ರಾಂಕೋಸ್ಕೋಪಿಕ್' ಪ್ರಕ್ರಿಯೆ ಮೂಲಕ ಬಲ್ಬ್ ಯಶಸ್ವಿಯಾಗಿ ಹೊರತೆಗೆದು ಮಗುವಿನ ಪ್ರಾಣ ಉಳಿಸಿದ್ದಾರೆ.
ಆಟವಾಡುವಾಗ 9 ತಿಂಗಳ ಮಗು ಆಕಸ್ಮಿಕವಾಗಿ ನುಂಗಿದ್ದ ಎಲ್‌ಇಡಿ ಬಲ್ಬ್ (LED Bulb) ಅದರ ಶ್ವಾಸನಾಳದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದರಿಂದ ಮಗುವಿನ ಶ್ವಾಸಕೋಶಕ್ಕೆ ಹಾನಿಯಾಗಿ, ದೊಡ್ಡ ಸರ್ಜರಿ (Major Surgery) ಮಾಡಬೇಕಾದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಭಾರತೀಯ ಸೇನೆಯ ವೈದ್ಯರು (Indian Army Doctors) ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡು, ಯಾವುದೇ ದೊಡ್ಡ ಸರ್ಜರಿ ಇಲ್ಲದೆ ಮಗುವಿನ ಪ್ರಾಣ ಉಳಿಸಿದ್ದಾರೆ.
ಪುಣೆಯಲ್ಲಿರುವ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋ-ಥೊರಾಸಿಕ್ ಸೈನ್ಸಸ್ (AICTS) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಎಡ ಶ್ವಾಸಕೋಶಕ್ಕೆ ಹೋಗುವ ಶ್ವಾಸನಾಳದಲ್ಲಿ ತುಕ್ಕು ಹಿಡಿದ ತಂತಿಗಳಿದ್ದ ಎಲ್‌ಇಡಿ ಬಲ್ಬ್ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಹೊರತೆಗೆಯುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಕೊನೆಗೆ, ಸೇನಾ ವೈದ್ಯರು ಅತ್ಯಂತ ಸಂಕೀರ್ಣವಾದ 'ಬ್ರಾಂಕೋಸ್ಕೋಪಿಕ್' ಪ್ರಕ್ರಿಯೆ ಮೂಲಕ ಬಲ್ಬ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಬಗ್ಗೆ ಭಾರತೀಯ ಸೇನೆಯ ದಕ್ಷಿಣ ಕಮಾಂಡ್ (Southern Command) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್
'ಪುಣೆಯ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋ-ಥೊರಾಸಿಕ್ ಸೈನ್ಸಸ್‌ನ ತಜ್ಞರು 9 ತಿಂಗಳ ಮಗುವಿನ ಜೀವ ಉಳಿಸಿದ್ದಾರೆ. ಮಗುವಿನ ಎಡ ಶ್ವಾಸಕೋಶದ ಶ್ವಾಸನಾಳದಲ್ಲಿ ಆಳವಾಗಿ ಸಿಲುಕಿದ್ದ, ತುಕ್ಕು ಹಿಡಿದ ತಂತಿಗಳಿದ್ದ ಅಪಾಯಕಾರಿ ಎಲ್‌ಇಡಿ ಬಲ್ಬ್ ಅನ್ನು ಅತ್ಯಂತ ಸಂಕೀರ್ಣವಾದ 'ಬ್ರಾಂಕೋಸ್ಕೋಪಿಕ್' ಪ್ರಕ್ರಿಯೆಯ ಮೂಲಕ ಹೊರತೆಗೆಯಲಾಗಿದೆ. ಈ ಸ್ಥಿತಿಯಿಂದ ಶ್ವಾಸಕೋಶ ಕುಸಿಯುವ ಅಥವಾ ದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕಾದ ಅಪಾಯವಿತ್ತು. ಆದರೆ ನಮ್ಮ ವೈದ್ಯರು ಇದನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಿದ್ದಾರೆ. ಯಾವುದೇ ಸರ್ಜರಿ ಇಲ್ಲದೆ ಮಗುವಿನ ಉಸಿರಾಟವನ್ನು ಸಹಜ ಸ್ಥಿತಿಗೆ ತರಲಾಗಿದೆ' ಎಂದು ಸೇನೆ ತಿಳಿಸಿದೆ.
ಸೇನೆ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಮಗುವಿನ ಶ್ವಾಸನಾಳದಿಂದ ತೆಗೆದ ಎಲ್‌ಇಡಿ ಬಲ್ಬ್‌ನ ಫೋಟೋ ಕೂಡ ಇದೆ. ಜೊತೆಗೆ, ಬಲ್ಬ್ ಸಿಕ್ಕಿಹಾಕಿಕೊಂಡಿದ್ದಾಗಿನ ಎಕ್ಸ್-ರೇ ಮತ್ತು ಅದನ್ನು ತೆಗೆದ ನಂತರದ ಎಕ್ಸ್-ರೇ ಚಿತ್ರಗಳನ್ನೂ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ನೋಡಿದ ಅನೇಕರು ಕಮೆಂಟ್ ಬಾಕ್ಸ್‌ನಲ್ಲಿ ಸೇನಾ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


