ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಚುನಾವಣಾ ಪ್ರಣಾಳಿಕೆ ಉಸ್ತುವಾರಿ ಹೊತ್ತಿದ್ದ ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ನಾಯಕನ ಜೊತೆ ಬೆಂಬಲಿಗರೂ ಬಿಜೆಪಿ ಸೇರಿದ್ದಾರೆ.

ನವದೆಹಲಿ (ನ.20) ಹಲವು ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ದ ಮತ ಕಳ್ಳತನ, ಅಕ್ರಮವಾಗಿ ಪ್ರಧಾನಿ ಹುದ್ದೆಗೆ ಸೇರಿದಂತೆ ಹಲವು ಗಂಭೀರ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಗೆ ತಲೆನೋವು ಹೆಚ್ಚಾಗಿದೆ. ತಮ್ಮ ಪಕ್ಷದ ನಾಯಕರ ಒಬ್ಬರ ಹಿಂದೆ ಒಬ್ಬರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಇದೀಗ ಪಂಜಾಬ್ ಚುನಾವಣಾ ಪ್ರಣಾಳಿಕೆ ಜವಾಬ್ದಾರಿ ಹೊತ್ತಿದ್ದ ನಾಯಕ ಹರ್ದಿಯಲ್ ಸಿಂಗ್ ಕಂಬೋಜ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸೇರಿಕೊಂಡಿದ್ದಾರೆ. ಪಂಜಾಬ್ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ನಾಯಕನ ನಡೆಯಿಂದ ಕಾಂಗ್ರೆಸ್ ಕಂಗಾಲಾಗಿದೆ.

ಪಂಜಾಬ್ ವಿಧಾನಸಭಾ ಚುನಾವಣೆ 2027ಕ್ಕೆ ಎಲ್ಲಾ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿದೆ. ಪಂಜಾಬ್‌ನಲ್ಲಿ ಗಟ್ಟಿಯಾಗಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು 5 ವರ್ಷ ಉರುಳಿದೆ. ಮತ್ತೆ ಅಧಿಕಾರಿ ಹಿಡಿಯುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಹರ್ದಿಯಲ್ ಸಿಂಗ್ ಕಂಬೋಜ್ ರಾಜೀನಾಮೆ ಪಂಜಾಬ್ ಕಾಂಗ್ರೆಸ್ ಮಾತ್ರವಲ್ಲ ದೆಹಲಿ ಕಾಂಗ್ರೆಸ್ ಹೈಕಮಾಂಡ್‌ನಲ್ಲೂ ತಳಮಳ ಸೃಷ್ಟಿಸಿದೆ. ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕನಾಗಿರುವ ಹರ್ದಿಯಲ್ ಸಿಂಗ್ ಕಂಬೋಜ್ 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಜವಾಬ್ದಾರಿ ಹೊತ್ತಿದ್ದರು.

ಬಿಜೆಪಿ ಸೇರಿಕೊಳ್ಳಲು ಕಾರಣವೇನು?

ಹರ್ಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಹಾಗೂ ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ದಿಲ್ಲೋನ್ ಸಮ್ಮುಖದಲ್ಲಿ ಹರ್ದಿಯಲ್ ಸಿಂಗ್ ಕಂಬೋಜ್ ಬಿಜೆಪಿ ಸೇರಿಕೊಂಡಿದ್ದಾರೆ. ಪಂಜಾಬ್ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಉಚಿತ ಘೋಷಣೆಗಳು, ಕೆಲಸಕ್ಕೆ ಬಾರದ ಯೋಜನಗಳೇ ಜಾಸ್ತಿ ಇವೆ. ಆದರೆ ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್ ಯುದ್ಧ ಹೆಚ್ಚಾಗಿದೆ. ಪಂಜಾಬ್ ರಾಜ್ಯವನ್ನು ಗ್ಯಾಂಗ್‌ಸ್ಟರ್‌ಗಳಿಂದ ರಕ್ಷಿಸಬೇಕಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ಪಟ್ಟ ಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಪಂಜಾಬ್ ರಾಜ್ಯವನ್ನು ರಕ್ಷಿಸಲು ಬಿಜೆಪಿಗೆ ಮಾತ್ರ ಸಾಧ್ಯ ಎಂದು ಹರ್ದಿಯಲ್ ಸಿಂಗ್ ಕಂಬೋಜ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಬಿಜೆಪಿ ಬಲವರ್ಧನೆ

2012 ಹಾಗೂ 2017ರ ಪಂಜಾಬ್ ಚುನಾವಣೆಯಲ್ಲಿ ಗರಿಷ್ಠ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಹರ್ದಿಯಲ್ ಸಿಂಗ್ ಕಂಬೋಜ್ ಪಾತ್ರರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಕಂಬೋಜ್ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ಕಂಬೋಜ್ ಸೇರ್ಪಡೆಯಿಂದ ಪಂಜಾಬ್‌ನಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿದೆ. ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿಯಿಂದ ಕೆಲ ನಾಯಕರು ಬಿಜೆಪಿ ಸೇರಿಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪಂಜಾಬ್‌ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಸತತ ಪ್ರಯತ್ನದಲ್ಲಿದೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿಸಿ ಚರಣಜಿತ್ ಸಿಂಗ್ ಚನ್ನಿಗೆ ಪಟ್ಟ ನೀಡಲಾಗಿತ್ತು. ಬಳಿಕ ಕಾಂಗ್ರೆಸ್ ಪತನ ಆರಂಭಗೊಂಡಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದ್ದರೆ,ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೇರಿತು. ಆದರೆ ಆಮ್ ಆದ್ಮಿ ಪಾರ್ಟಿ ಆಡಳಿತದಲ್ಲಿ ಗ್ಯಾಂಗ್‌ವಾರ್, ಡ್ರಗ್ಸ್ ಸೇರಿದಂತೆ ಇತರ ಪ್ರಮುಖ ಸಮಸ್ಯೆಗಳು ತೀವ್ರಗೊಂಡಿತ್ತು. ಇದರ ನಡುವೆ ಬಿಜೆಪಿ ಕಳೆದ ಕೆಲ ವರ್ಷಗಳಿಂದ ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಇದೇ ವೇಳೆ 2027ರ ಚುನಾವಣಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಎಲ್ಲಾ ತಯಾರಿ ಮಾಡಿಕೊಂಡಿದೆ.