ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ನಿಧನರಾಗಿದ್ದಾರೆ. 91ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಮಗ ಮುಖ್ಯಮಂತ್ರಿ ಆಗಿದ್ದರೂ ಅವರ ಅಪ್ಪ-ಅಮ್ಮ ಬದುಕಿದ ಪರಿ ಎಂಥವರಿಗೂ ಮಾದರಿ.

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಅವರು ಇಂದು ತಮ್ಮ 91 ನೇ ವಯಸ್ಸಿನಲ್ಲಿ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ತಮ್ಮ ಪೂರ್ವಜರ ಗ್ರಾಮವಾದ ಪಂಚೂರ್‌ನಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಅವರು ರಾಜಕೀಯ ಗದ್ದಲದಿಂದ ದೂರವಿದ್ದು, ತಮ್ಮ ಕಿರಿಯ ಮಗನೊಂದಿಗೆ ಗ್ರಾಮದಲ್ಲಿ ಸರಳ ಜೀವನ ನಡೆಸುತ್ತಿದ್ದರು. ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಷ್ಟ್ ಅವರು 2020ರಲ್ಲಿ ನಿಧನರಾಗಿದ್ದರು. ವರದಿಗಳ ಪ್ರಕಾರ, ತಾಯಿಯ ಅಂತ್ಯಕ್ರಿಯೆಯನ್ನು ನಾಳೆ ಹರಿದ್ವಾರದಲ್ಲಿ ನಡೆಸಲಾಗುವುದು. ಅವರ ನಿಧನದ ಸುದ್ದಿ ತಿಳಿದ ಹಲವಾರು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅವರು ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದರು ಮತ್ತು ದುಃಖಿತ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಈ ಸುದ್ದಿ ಬಂದಿದೆ. 2020ರಲ್ಲಿ ತಂದೆ ಆನಂದ್ ಸಿಂಗ್ ಬಿಷ್ಟ್ ನಿಧನರಾದಾಗ ಉತ್ತರ ಪ್ರದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಮತ್ತು ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಆಡಳಿತಾತ್ಮಕ ಜವಾಬ್ದಾರಿಗಳಿಂದಾಗಿ ಯೋಗಿ ಅವರಿಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಯೋಗಿ ಅವರು 22ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರವೂ ಇವರ ನಡುವೆ ಸರಳ ಹಾಗೂ ಗೌರವಯುತ ಬಾಂಧವ್ಯವಿತ್ತು.

ಸರಳ ಕೃಷಿ ಜೀವನ

ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರು ರಾಜಕೀಯ ಜೀವನಕ್ಕೆ ಪ್ರವೇಶಿದರೆ ಅವರ ನಾಲ್ಕೈದು ಪೀಳಿಗೆ ಕುಳಿತು ಊಟ ಮಾಡುವಷ್ಟು ಹಣ ಮಾಡುವುದು ಸರ್ವೇ ಸಾಮಾನ್ಯ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಬದುಕಿನಂತೆ, ಯೋಗಿ ಆದಿತ್ಯನಾಥ ಅವರ ಬದುಕು ಕೂಡ ಅಷ್ಟೇ ಕುತೂಹಲ. ಯೋಗಿ ಅವರ ತಂದೆ ಆನಂದ್ ಸಿಂಗ್ ಬಿಷ್ಟ್ ಅವರು ಉತ್ತರಾಖಂಡದ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ರೇಂಜರ್ (ಅರಣ್ಯ ಅಧಿಕಾರಿ) ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಗ ಮುಖ್ಯಮಂತ್ರಿಯಾದ ನಂತರವೂ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಸರಳ ಕೃಷಿ ಜೀವನ ನಡೆಸುತ್ತಿದ್ದರು. 1993-94ರ ಅವಧಿಯಲ್ಲಿ ಅಜಯ್ ಸಿಂಗ್ ಬಿಷ್ಟ್ ಅವರು ಮನೆ ತೊರೆದು ಗೋರಖ್‌ನಾಥ ಮಠದ ಮಹಂತ್ ಅವೈದ್ಯನಾಥ್ ಅವರ ಶಿಷ್ಯರಾಗಿ ಸನ್ಯಾಸ ದೀಕ್ಷೆ ಪಡೆದರು. ಪತ್ರಿಕೆಗಳ ಮೂಲಕ ಈ ವಿಷಯ ತಿಳಿದ ತಂದೆ-ತಾಯಿ ಆರಂಭದಲ್ಲಿ ತೀವ್ರ ಬೇಸರಗೊಂಡಿದ್ದರು. ನಂತರ ಗುರುಗಳಾದ ಅವೈದ್ಯನಾಥ್ ಅವರು ಪೋಷಕರೊಂದಿಗೆ ಮಾತನಾಡಿ ಸಮಾಧಾನಪಡಿಸಿದ ಮೇಲೆ ಅವರು ಮಗನ ನಿರ್ಧಾರವನ್ನು ಒಪ್ಪಿಕೊಂಡರು. ಸನ್ಯಾಸ ಧರ್ಮದ ನಿಯಮಗಳಂತೆ ಯೋಗಿ ಆದಿತ್ಯನಾಥ್ ಅವರು ಕುಟುಂಬದ ವ್ಯವಹಾರಗಳಿಂದ ದೂರವಿದ್ದರು. ಇವರ ತಂದೆ-ತಾಯಿ ಎಂದಿಗೂ ಮಗನ ರಾಜಕೀಯ ಅಧಿಕಾರ ಅಥವಾ ಪ್ರಭಾವವನ್ನು ಬಳಸಿಕೊಳ್ಳದೆ ಹಳ್ಳಿಯಲ್ಲೇ ಸಾಮಾನ್ಯರಂತೆ ಬದುಕಿದರು.

ಮುಖ್ಯಮಂತ್ರಿಯಾದ ಬಳಿಕ ಹಲವು ವರ್ಷಗಳ ನಂತರ ಮೇ 2022ರಲ್ಲಿ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದ ಯೋಗಿ ಅವರು, ತಾಯಿ ಸಾವಿತ್ರಿ ದೇವಿ ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು. ಅಲ್ಲದೆ, ಜೂನ್ 2024ರಲ್ಲಿ ತಾಯಿ ಅನಾರೋಗ್ಯದಿಂದ ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಮೃತ ಸಾವಿತ್ರಿ ದೇವಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಾನೇಂದ್ರ ಸಿಂಗ್, ಮಹೇಂದ್ರ ಸಿಂಗ್ ಮತ್ತು ಶೈಲೇಂದ್ರ ಮೋಹನ್ ಯೋಗಿ ಅವರ ಸಹೋದರರಾಗಿದ್ದರೆ, ಪುಷ್ಪಾ ದೇವಿ, ಕೌಶಲ್ಯ ಮತ್ತು ಶಶಿ ದೇವಿ ಸಹೋದರಿಯರಾಗಿದ್ದಾರೆ. ಸದ್ಯ ಸಾವಿತ್ರಿ ದೇವಿ ಅವರ ಪಾರ್ಥಿವ ಶರೀರವನ್ನು ಪಂಚೂರ್ ಗ್ರಾಮದಲ್ಲಿರುವ ಅವರ ಪೂರ್ವಿಕರ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ನಾಳೆ ಹರಿದ್ವಾರದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.