21ನೇ ವಯಸ್ಸಿನಲ್ಲಿ ತಂದೆಯ ನಿಧನದಿಂದ ಶಿಕ್ಷಣ ಮೊಟಕುಗೊಳಿಸಿದ ಅಜೀಂ ಪ್ರೇಮ್‌ಜಿ, ಅಡುಗೆ ಎಣ್ಣೆ ಕಂಪನಿಯನ್ನು ವಹಿಸಿಕೊಂಡರು. ತಮ್ಮ ದೂರದೃಷ್ಟಿಯಿಂದ ಅವರು ವಿಪ್ರೋವನ್ನು ಜಾಗತಿಕ ಐಟಿ ದೈತ್ಯ ಸಂಸ್ಥೆಯಾಗಿ ಬೆಳೆಸಿದರು. ಪ್ರಾಮಾಣಿಕತೆ ಮತ್ತು ನೈತಿಕತೆಯೊಂದಿಗೆ ಅವರು ನಿರ್ಮಿಸಿದ ಬಿಲಿಯನ್ ಸಾಮ್ರಾಜ್ಯದ ರೋಚಕ ಕಥೆ ಇಲ್ಲಿದೆ.

ದೆಹಲಿ: ಬಹುತೇಕ ಎಲ್ಲಾ ಯಶಸ್ವಿ ಉದ್ಯಮಿಗಳು, ವಿಶ್ವದ, ಭಾರತದ ಟಾಪೆಸ್ಟ್​ ಶ್ರೀಮಂತರ ಹಿನ್ನೆಲೆ ನೋಡಿದಾಗ ಅವರು ಜೀರೋದಿಂದ ಬಂದವರು ಇಲ್ಲವೇ ಏನೂ ಅರಿಯದ ಸ್ಥಿತಿಯಲ್ಲಿ ಉದ್ಯಮ ಕ್ಷೇತ್ರಕ್ಕೆ ಧುಮುಕಿ, ಕಷ್ಟಪಟ್ಟು ದುಡಿದು ಬಿಲಿಯನ್​ ಸಾಮ್ರಾಜ್ಯ ಕಟ್ಟಿದವರೇ ಆಗಿದ್ದಾರೆ. ಬಹುತೇಕರಿಗೆ ಶಿಕ್ಷಣವೇ ಇಲ್ಲದೇ ಈಗ ದೊಡ್ಡ ದೊಡ್ಡ ಡಿಗ್ರಿ ಪಡೆದವರಿಗೆ ಉದ್ಯೋಗದಾತರಾಗಿದ್ದಾರೆ. ಅಂಥವರಲ್ಲಿ ಒಬ್ಬರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ವಿಪ್ರೋ (Wipro) ಸಂಸ್ಥಾಪಕ ಅಜೀಂ ಪ್ರೇಮ್​ಜಿ. 21ನೇ ವಯಸ್ಸಿನಲ್ಲಿ ನಡೆದ ಆಘಾತಕಾರಿ ಘಟನೆ ಹೇಗೆ ಅಜೀಂ ಪ್ರೇಮ್​ ಅವರ ಇಡೀ ಜೀವನವನ್ನೇ ಬದಲಾಯಿಸಿತು. ಹೇಗೆ ಅವರು ಹಂತಹಂವಾಗಿ ಮೇಲಕ್ಕೆ ಬಂದು ವಿಪ್ರೋ ಕಟ್ಟಿದರು ಎನ್ನುವ ಹಿಂದಿದೆ ರೋಚಕ ಸ್ಟೋರಿ.

ಅದು 1966ನೇ ಇಸ್ವಿ. ಆಗ ಅಮೆರಿಕದ ಸ್ಟ್ಯಾನ್‌ಫೋರ್ಡ್‌ನಲ್ಲಿ 21 ವರ್ಷದ ಅಜೀಂ ಪ್ರೇಮ್​ ಓದುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಒಂದು ಕಾಲ್​ ಬಂತು. ಅದು ಅವರ ತಂದೆಯ ನಿಧನದ ಸುದ್ದಿ. ಆ ಒಂದು ಫೋನ್​ ಕಾಲ್​ ಅವರ ಎದುರು ಕಗ್ಗತ್ತಲು ತುಂಬುವಂತೆ ಮಾಡಿತು. ಆದರೆ ಅದೇ ಫೋನ್​ ಕಾಲ್​ ಅವರ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. 1966 ರಲ್ಲಿ ತಂದೆಯ ಹಠಾತ್ ನಿಧನದ ನಂತರ ಅಜೀಂ ಪ್ರೇಮ್‌ಜಿ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ಮರಳಿದರು. ಆಗ ಅವರ ತಂದೆ ಅಡುಗೆ ಎಣ್ಣೆ ಕಂಪೆನಿಯನ್ನು ನಿರ್ವಹಿಸುತ್ತಿದ್ದರು. ಕೇವಲ 21 ನೇ ವಯಸ್ಸಿನಲ್ಲಿ ಅಡುಗೆ ಎಣ್ಣೆ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡ ಅಜೀಂ ಪ್ರೇಮ್​ಜಿ, ದೂರದೃಷ್ಟಿಯ ನಿರ್ಧಾರಗಳ ಮೂಲಕ ವಿಪ್ರೋವನ್ನು (Wipro) ಜಾಗತಿಕ ಐಟಿ ದೈತ್ಯ ಸಂಸ್ಥೆಯನ್ನಾಗಿ ನಿರ್ಮಿಸಿದರು.

ಎಣ್ಣೆ ತಯಾರಿಸುತ್ತಿದ್ದ ಕಂಪೆನಿ

ಅಜೀಂ ಪ್ರೇಮ್‌ಜಿ ಅಧಿಕಾರ ವಹಿಸಿಕೊಂಡಾಗ ಕಂಪನಿಯ ಹೆಸರು 'ವೆಸ್ಟರ್ನ್ ಇಂಡಿಯಾ ವೆಜಿಟೆಬಲ್ ಪ್ರಾಡಕ್ಟ್ಸ್ ಲಿಮಿಟೆಡ್' ಆಗಿತ್ತು ಮತ್ತು ಅದು ಮುಖ್ಯವಾಗಿ ವನಸ್ಪತಿ (ಅಡುಗೆ ಎಣ್ಣೆ) ತಯಾರಿಸುತ್ತಿತ್ತು. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ 21ರ ಯುವಕ ಯಾವುದೇ ಪದವಿ ಇಲ್ಲದೇ ಅಪ್ಪನ ಈ ಕಂಪೆನಿಯನ್ನು ನಡೆಸಬಲ್ಲರೇ ಎಂದು ಷೇರುದಾರರು ಅನುಮಾನಿಸಿದರು. ಆದರೆ ಅಜೀಂ ಅವರ ಜ್ಞಾನದ ಮುಂದೆ ಪದವಿ ಲೆಕ್ಕವೇ ಬರಲಿಲ್ಲ. ಹಂತಹಂತವಾಗಿ ಅದನ್ನು ಮೇಲಕ್ಕೆ ತಂದರು. ನಂತರ ಅದಕ್ಕೆ ವಿಪ್ರೋ ಎಂದು ಮರುನಾಮಕರಣ ಮಾಡಿದರು. ಬಳಿಕ ಅವರು, ಕೇವಲ ಅಡುಗೆ ಎಣ್ಣೆಗೆ ಸೀಮಿತಗೊಳಿಸದೆ, ಅವರು ಸಾಬೂನುಗಳು (ಉದಾಹರಣೆಗೆ: ಸಂತೂರ್), ಬೇಬಿ ಕೇರ್ ಉತ್ಪನ್ನಗಳು ಮತ್ತು ಬೇಕರಿ ಉತ್ಪನ್ನಗಳ ಮಾರುಕಟ್ಟೆಗೆ ವಿಸ್ತರಿಸಿದರು. ಇದರಿಂದ ಕಂಪನಿಗೆ ಉತ್ತಮ ಲಾಭ ಮತ್ತು ಬಂಡವಾಳ ಹರಿದುಬರಲು ಶುರುವಾಯಿತು

ಮತ್ತು 1980 ರ ದಶಕದಲ್ಲಿ, ವಿದೇಶಿ ಕಂಪನಿಗಳು ಭಾರತವನ್ನು ತೊರೆದಾಗ, ಅಜೀಂ ಪ್ರೇಮ್​ಜೀ ಅವರು ಕಂಪ್ಯೂಟರ್‌ಗಳು ಮತ್ತು ನಂತರ ಸಾಫ್ಟ್‌ವೇರ್ ಅನ್ನು ಪ್ರವೇಶಿಸಿದರು. 1977 ರಲ್ಲಿ ಭಾರತ ಸರ್ಕಾರದ ನೀತಿಗಳಿಂದಾಗಿ ಅಮೆರಿಕದ ದೈತ್ಯ ಕಂಪನಿ 'IBM' ಭಾರತವನ್ನು ತೊರೆಯಬೇಕಾಯಿತು. ಈ ನಿರ್ವಾತವನ್ನು ಅಜೀಂ ಪ್ರೇಮ್‌ಜಿ ಒಂದು ದೊಡ್ಡ ವ್ಯಾಪಾರ ಅವಕಾಶವಾಗಿ ಕಂಡರು. 1980 ರಲ್ಲಿ ಕಂಪನಿಯ ಹೆಸರನ್ನು 'ವಿಪ್ರೋ' (Wipro) ಎಂದು ಬದಲಾಯಿಸಿ, ಬೆಂಗಳೂರಿನಲ್ಲಿ ಐಟಿ ವಿಭಾಗವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅಮೆರಿಕದ 'ಸೆಂಟಿನೆಲ್ ಕಂಪ್ಯೂಟರ್ ಕಾರ್ಪೊರೇಷನ್' ಜೊತೆ ಸೇರಿ ಮಿನಿ ಕಂಪ್ಯೂಟರ್‌ಗಳನ್ನು ತಯಾರಿಸಿ ಮಾರಾಟ ಮಾಡಲು ಶುರು ಮಾಡಿದರು.

ಸಾಫ್ಟ್​ವೇರ್​ ಸೇವೆಗಳಿಗೆ ಒತ್ತು

1990 ರ ದಶಕದಲ್ಲಿ ಭಾರತದಲ್ಲಿ ಆರ್ಥಿಕ ಉದಾರೀಕರಣ ಜಾರಿಯಾದಾಗ, ಪ್ರೇಮ್‌ಜಿ ಅವರು ಹಾರ್ಡ್‌ವೇರ್‌ಗಿಂತ ಸಾಫ್ಟ್‌ವೇರ್ ಸೇವೆಗಳಿಗೆ ಹೆಚ್ಚಿನ ಒತ್ತು ನೀಡಿದರು. ಅಮೆರಿಕ ಮತ್ತು ಯುರೋಪ್‌ನ ದೊಡ್ಡ ಕಂಪನಿಗಳಿಗೆ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಐಟಿ ಸೇವೆಗಳನ್ನು (Outsourcing) ನೀಡಲು ಪ್ರಾರಂಭಿಸಿದರು. Y2K ಸಮಸ್ಯೆಯ ಪರಿಹಾರದ ಸಮಯದಲ್ಲಿ ವಿಪ್ರೋ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿತು. ವಿಪ್ರೋ ದೇಶದ ಅತಿದೊಡ್ಡ ತಂತ್ರಜ್ಞಾನ ಕಂಪೆನಿಗಳಲ್ಲಿ ಒಂದಾಯಿತು ಮತ್ತು ಪ್ರೇಮ್‌ಜಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರು.

ವ್ಯಾಪಾರದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನೈತಿಕತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಲಂಚ ಅಥವಾ ಅಡ್ಡದಾರಿಗಳನ್ನು ಎಂದಿಗೂ ಅಜೀಂ ಪ್ರೇಮ್​ಜೀ ಪ್ರೋತ್ಸಾಹಿಸಲಿಲ್ಲ. ದೇಶದ ಅತ್ಯುತ್ತಮ ಎಂಜಿನಿಯರ್‌ಗಳನ್ನು ನೇಮಿಸಿಕೊಂಡು, ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸಿದರು. ಆದರೆ 2001 ರಲ್ಲಿ ಅವರು ಭಾರತದ ಸಾರ್ವಜನಿಕ ಶಾಲೆಗಳನ್ನು ಸುಧಾರಿಸಲು ಒಂದು ಪ್ರತಿಷ್ಠಾನವನ್ನು ರಚಿಸಿದರು ಮತ್ತು ಅದಕ್ಕೆ ತಮ್ಮ ಷೇರುಗಳನ್ನು ವರ್ಗಾಯಿಸಲು ಪ್ರಾರಂಭಿಸಿದರು. ಮಾರ್ಚ್ 2019 ರಲ್ಲಿ ಅವರು ಸುಮಾರು $7.5 ಬಿಲಿಯನ್ ಮೌಲ್ಯದ ಮತ್ತೊಂದು ದೇಣಿಗೆಯನ್ನು ಘೋಷಿಸಿದರು. ಇದರೊಂದಿಗೆ, ಫೋರ್ಬ್ಸ್ ಪ್ರಕಾರ, ಅವರ ಒಟ್ಟು ದೇಣಿಗೆಗಳು ಸುಮಾರು $21 ಬಿಲಿಯನ್ ತಲುಪಿವೆ. ಇದು ವಿಶ್ವದ ಒಬ್ಬ ವ್ಯಕ್ತಿಯಿಂದ ದೇಣಿಗೆ ಪಡೆದ ಅತಿದೊಡ್ಡ ಮೊತ್ತಗಳಲ್ಲಿ ಒಂದಾಗಿದೆ. ಅವರು ತಮ್ಮ ಕಠಿಣ ಪರಿಶ್ರಮಕ್ಕೂ ಹೆಸರುವಾಸಿಯಾಗಿದ್ದಾರೆ: ವರ್ಷಗಳ ಕಾಲ ಅವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಸರಳ ಕಾರುಗಳನ್ನು ಓಡಿಸುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಅಡುಗೆ ಎಣ್ಣೆ ತಯಾರಿಸುತ್ತಿದ್ದ ಸಣ್ಣ ಕಂಪನಿಯನ್ನು, ಇಂದು ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಮತ್ತು ಜಗತ್ತಿನಾದ್ಯಂತ ಶಾಖೆಗಳನ್ನು ಹೊಂದಿರುವ ಬಹುರಾಷ್ಟ್ರೀಯ ಐಟಿ ಸಂಸ್ಥೆಯನ್ನಾಗಿ ಬೆಳೆಸಿದ್ದು ಅಜೀಂ ಪ್ರೇಮ್‌ಜಿ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ.