ಪಾದರಸವನ್ನು ಚಿನ್ನವಾಗಿ ಪರಿವರ್ತಿಸಲು ಸಾಧ್ಯವೇ? ಇಂತಹ ಕುತೂಹಲಕಾರಿ ಪ್ರಯೋಗವೊಂದನ್ನು ಬೆಂಗಳೂರಿನ ಭಾರತೀಯ ಸಂಶೋಧಕರೊಬ್ಬರು ನಡೆಸಿದ್ದು, ತಮ್ಮ ತಂತ್ರಜ್ಞಾನಕ್ಕೆ ಇದೀಗ ಪೇಟೆಂಟ್ ಪಡೆದುಕೊಂಡಿದ್ದಾರೆ.

ಪಾದರಸವನ್ನು ಚಿನ್ನವಾಗಿ ಪರಿವರ್ತಿಸಲು ಸಾಧ್ಯವೇ? ಇಂತಹ ಕುತೂಹಲಕಾರಿ ಪ್ರಯೋಗವೊಂದನ್ನು ಬೆಂಗಳೂರಿನ ಭಾರತೀಯ ಸಂಶೋಧಕರೊಬ್ಬರು ನಡೆಸಿದ್ದು, ತಮ್ಮ ತಂತ್ರಜ್ಞಾನಕ್ಕೆ ಇದೀಗ ಪೇಟೆಂಟ್ ಪಡೆದುಕೊಂಡಿದ್ದಾರೆ. ರಾಜಾ ವಿಜಯ್ ಕುಮಾರ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನಕ್ಕೆ 'ಗ್ರಾವಿಟೋರೇಡಿಯೋಫಿಸಿಕಲ್ ನ್ಯೂಕ್ಲಿಯರ್ ಟ್ರಾನ್ಸ್‌ಮ್ಯುಟೇಷನ್' (GNT) ಎಂದು ಹೆಸರಿಡಲಾಗಿದೆ. ಈ ಪ್ರಯೋಗದಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಮೂಲವಸ್ತುಗಳು ಪತ್ತೆಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜಾ ವಿಜಯ್ ಕುಮಾರ್ ಅವರು ಸ್ಕೇಲೀನ್ ಎನರ್ಜಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಹಾಗೂ ಮುಖ್ಯ ವೈಜ್ಞಾನಿಕ ಅಧಿಕಾರಿಯಾಗಿದ್ದಾರೆ. ಈ ಸಂಶೋಧನೆಗೆ ಭಾರತೀಯ ಪೇಟೆಂಟ್ ಸಂಖ್ಯೆ 5683222 ದೊರೆತಿದೆ. 2017ರ ನವೆಂಬರ್ 21ರಂದು ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಸುಮಾರು ಎಂಟು ವರ್ಷಗಳ ಬಳಿಕ 2025ರ ದ್ವಿತೀಯಾರ್ಧದಲ್ಲಿ ಪೇಟೆಂಟ್ ಮಂಜೂರಾಗಿದೆ.

ಏನಿದು GNT ತಂತ್ರಜ್ಞಾನ?

ಸಾಮಾನ್ಯವಾಗಿ ಚಿನ್ನದ ಪರಮಾಣುವಿನಲ್ಲಿ 79 ಪ್ರೋಟಾನ್‌ಗಳಿದ್ದರೆ, ಪಾದರಸದಲ್ಲಿ 80 ಪ್ರೋಟಾನ್‌ಗಳಿರುತ್ತವೆ. ಹೀಗಾಗಿ ಪಾದರಸವನ್ನು ಚಿನ್ನವಾಗಿ ಪರಿವರ್ತಿಸಬೇಕಾದರೆ ಅದರ ಪರಮಾಣು ನ್ಯೂಕ್ಲಿಯಸ್‌ನಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಇದನ್ನು ನ್ಯೂಕ್ಲಿಯರ್ ಟ್ರಾನ್ಸ್‌ಮ್ಯುಟೇಷನ್ ಎಂದು ಕರೆಯಲಾಗುತ್ತದೆ.

ಸಂಶೋಧಕರ ಪ್ರಕಾರ, GNT ತಂತ್ರಜ್ಞಾನವು ಸಾಂಪ್ರದಾಯಿಕ ನ್ಯೂಕ್ಲಿಯರ್ ರಿಯಾಕ್ಟರ್‌ಗಳು, ಫಿಷನ್ ಅಥವಾ ಫ್ಯೂಷನ್ ಪ್ರಕ್ರಿಯೆಗಳನ್ನು ಬಳಸದೆ ವಿಶೇಷ ಆವರ್ತನಗಳ ಮೂಲಕ ಈ ಬದಲಾವಣೆ ತರಲು ಪ್ರಯತ್ನಿಸುತ್ತದೆ.

ಈ ವ್ಯವಸ್ಥೆಯ ಪ್ರಮುಖ ಭಾಗವೇ 'ಬೂಮ್ ಟ್ಯೂಬ್' ಎಂಬ ವಿಶೇಷ ಕೊಳವೆಯಾಕಾರದ ರಿಯಾಕ್ಟರ್. ಇದರಲ್ಲಿ ಅಲ್ಯೂಮಿನಿಯಂ ಮಿಶ್ರಲೋಹದ ಆಂಟೆನಾಗಳು, ಹೆಚ್ಚಿನ ಆವರ್ತನದ ಜನರೇಟರ್ ಹಾಗೂ ತಾಪಮಾನ ಮತ್ತು ಒತ್ತಡ ನಿಯಂತ್ರಣ ವ್ಯವಸ್ಥೆಗಳಿವೆ.

ಈ ಪ್ರಕ್ರಿಯೆಯಲ್ಲಿ ಎರಡು ಹಂತಗಳಿವೆ. ಮೊದಲಿಗೆ ನಿರ್ದಿಷ್ಟ ಆವರ್ತನ ಬಳಸಿ ರಾಸಾಯನಿಕ ಸಂಯುಕ್ತದಿಂದ ಬೇಕಾದ ಮೂಲವಸ್ತುವನ್ನು ಬೇರ್ಪಡಿಸಲಾಗುತ್ತದೆ. ನಂತರ ಆ ಮೂಲವಸ್ತುವಿಗೆ ಹೊಂದಿಕೆಯಾಗುವ ವಿಶೇಷ ಆವರ್ತನವನ್ನು ಅನ್ವಯಿಸಿ ಅದರ ನ್ಯೂಕ್ಲಿಯಸ್‌ನಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತದೆ.

ಪ್ರಯೋಗದಲ್ಲಿ ಚಿನ್ನ, ಬೆಳ್ಳಿ ಪತ್ತೆ

ಪೇಟೆಂಟ್ ದಾಖಲೆಗಳ ಪ್ರಕಾರ, ಪಾದರಸ ಹೊಂದಿರುವ ಮರ್ಕ್ಯುರಿಕ್ ಸಲ್ಫೇಟ್ ಅನ್ನು ಬಟ್ಟಿ ಇಳಿಸಿದ ನೀರಿನೊಂದಿಗೆ ಬೆರೆಸಿ ಪ್ರಯೋಗ ನಡೆಸಲಾಗಿದೆ. ಸಂಸ್ಕರಿಸಿದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಮೊದಲ ಮಾದರಿಯಲ್ಲಿ ಪ್ರತಿ ಲೀಟರ್‌ಗೆ 1.91 ಮಿಲಿಗ್ರಾಂ ಹಾಗೂ ಎರಡನೇ ಮಾದರಿಯಲ್ಲಿ 2.3 ಮಿಲಿಗ್ರಾಂ ಚಿನ್ನ ಪತ್ತೆಯಾಗಿದೆ. ಎರಡನೇ ಮಾದರಿಯಲ್ಲಿ 11 ಮಿಲಿಗ್ರಾಂ ಬೆಳ್ಳಿಯೂ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇದರ ಜೊತೆಗೆ ಮೆಗ್ನೀಸಿಯಂ, ಮ್ಯಾಂಗನೀಸ್, ರಂಜಕ ಮತ್ತು ಸತುವಿನಂತಹ ಮೂಲವಸ್ತುಗಳೂ ಪತ್ತೆಯಾಗಿವೆ. ಪ್ರಯೋಗದ ಬಳಿಕ ಪಾದರಸದ ಪ್ರಮಾಣ 33.45 ಗ್ರಾಂನಿಂದ 8.67 ಗ್ರಾಂಗೆ ಇಳಿದಿದೆ ಎಂದು ದಾಖಲೆಗಳು ತಿಳಿಸಿವೆ.

ಆದರೆ ವಿಜ್ಞಾನಿಗಳು ಹೇಳುವುದೇನು?

ಮಾದರಿಯಲ್ಲಿ ಚಿನ್ನ ಪತ್ತೆಯಾಗಿದೆ ಎಂದ ಮಾತ್ರಕ್ಕೆ ಪಾದರಸವೇ ಚಿನ್ನವಾಗಿ ಪರಿವರ್ತನೆಯಾಗಿದೆ ಎಂದು ಸಾಬೀತಾಗುವುದಿಲ್ಲ. ಬಳಸಿರುವ ICP-AES ಪರೀಕ್ಷೆಯು ಮಾದರಿಯಲ್ಲಿರುವ ಮೂಲವಸ್ತುಗಳನ್ನು ಗುರುತಿಸಬಲ್ಲದು. ಆದರೆ ಅವು ಹೇಗೆ ಉತ್ಪತ್ತಿಯಾದವು ಎಂಬುದನ್ನು ಖಚಿತಪಡಿಸುವುದಿಲ್ಲ.

ಹೀಗಾಗಿ ಈ ಸಂಶೋಧನೆಯ ನೈಜ ಕಾರ್ಯವಿಧಾನವನ್ನು ದೃಢಪಡಿಸಲು ಸ್ವತಂತ್ರ ವಿಜ್ಞಾನಿಗಳಿಂದ ಹೆಚ್ಚಿನ ಪರೀಕ್ಷೆಗಳು, ಪುನರಾವರ್ತಿತ ಪ್ರಯೋಗಗಳು ಮತ್ತು ಹೆಚ್ಚುವರಿ ವೈಜ್ಞಾನಿಕ ಪುರಾವೆಗಳು ಅಗತ್ಯವಾಗಿವೆ. ಈ ತಂತ್ರಜ್ಞಾನವನ್ನು ದೊಡ್ಡ ಮಟ್ಟದಲ್ಲಿ ಬಳಸುವ ಮೊದಲು ಇನ್ನಷ್ಟು ಸಂಶೋಧನೆ ನಡೆಸಬೇಕಿದೆ.