ಲೋನಾವಾಲ ಬಳಿಯ ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಕೃತ್ಯ ಎಸಗಿದ್ದು, ಮದುವೆ ಪ್ರಸ್ತಾಪ ತಂದಿದ್ದ 'ಮಿತ್ತಲ್ ಕುಟುಂಬ'ದ ಪಾತ್ರ ಈಗ ಮುನ್ನೆಲೆಗೆ ಬಂದಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸಿಯಾಳ ಕುಟುಂಬವನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋನಾವಾಲ ಬಳಿಯ ಲೋಹಗಡ ಕೋಟೆಯಲ್ಲಿ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ನಿಗೂಢ ಹತ್ಯೆಯ ಹಿಂದೆ ಪ್ರೇಮ ವೈಫಲ್ಯ ಹಾಗೂ ಆಸ್ತಿಯ ಆಸೆ ಅಡಗಿದೆಯೇ ಎಂಬ ನಿಖರವಾದ ಉದ್ದೇಶವನ್ನು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಆದರೆ, ಸಿಯಾಗೆ ಕೇತನ್‌ನನ್ನು ಮದುವೆಯಾಗಲು ಕಿಂಚಿತ್ತೂ ಇಷ್ಟವಿರಲಿಲ್ಲ ಮತ್ತು ಆಕೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಚೇತನ್ ಜೊತೆ ರಹಸ್ಯ ಸಂಬಂಧ ಹೊಂದಿದ್ದಳು ಎಂಬುದು ಈಗಾಗಲೇ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮಧ್ಯೆ, ಸಿಯಾ ಮತ್ತು ಕೇತನ್ ಕುಟುಂಬಗಳನ್ನು ಮದುವೆಗಾಗಿ ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ಮಿತ್ತಲ್ ಕುಟುಂಬ'ದ ಹೆಸರು ಈಗ ಮುಂಚೂಣಿಗೆ ಬಂದಿದ್ದು, ತಮ್ಮ ಸೊಸೆಯ ಮೇಲಿನ ಈ ಗಂಭೀರ ಆರೋಪಗಳಿಂದ ಅವರು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಯಾ-ಕೇತನ್ ಹೊಂದಾಣಿಕೆಯಲ್ಲಿ 'ಮಿತ್ತಲ್ ಕುಟುಂಬದ' ಪಾತ್ರವೇನು?

ಗೋಯಲ್ ಕುಟುಂಬದ ಅತ್ಯಪ್ತರಾಗಿದ್ದ ನರೇಂದ್ರ ಮಿತ್ತಲ್ ಮತ್ತು ರೇಣು ಮಿತ್ತಲ್ ದಂಪತಿಗಳು, ಕೇತನ್ ಜೊತೆ ಸಿಯಾಳ ವಿವಾಹ ಪ್ರಸ್ತಾಪವನ್ನು ತಂದಿದ್ದರು. ಆದರೆ, ಚೇತನ್ ಜೊತೆ ಸಿಯಾಗೆ ಮೊದಲೇ ಪ್ರೇಮ ಸಂಬಂಧವಿತ್ತು ಎಂಬ ವಿಷಯ ಗೋಯಲ್ ಕುಟುಂಬದ ಉಳಿದ ಸದಸ್ಯರಂತೆ ತಮಗೂ ತಿಳಿದಿರಲಿಲ್ಲ ಎಂದು ಮಿತ್ತಲ್ ದಂಪತಿಗಳು ಸ್ಪಷ್ಟಪಡಿಸಿದ್ದಾರೆ. ತನಿಖೆಯ ಭಾಗವಾಗಿ ನರೇಂದ್ರ ಮಿತ್ತಲ್ ಅವರು ಪೊಲೀಸರ ಮುಂದೆ ಹಾಜರಾಗಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಸಿಯಾ ಇಂತಹ ಘೋರ ಅಪರಾಧದಲ್ಲಿ ಭಾಗಿಯಾಗಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಸಿಯಾ ಮತ್ತು ಕೇತನ್ ಇಬ್ಬರೂ ತುಂಬಾ ಒಳ್ಳೆಯ ನಡತೆ ಉಳ್ಳವರಾಗಿದ್ದರು. ತೀರಾ ಸಾಧು ಸ್ವಭಾವದ ಈ ಜೋಡಿ ನಮಗೆ ಅತ್ಯಂತ ಪ್ರೀತಿಪಾತ್ರವಾಗಿತ್ತು ಎಂದು ನರೇಂದ್ರ ಮಿತ್ತಲ್ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಸಿಯಾಳನ್ನು ಬಾಲ್ಯದಿಂದಲೂ ನೋಡಿದ್ದೇವೆ. ಅವಳು ಇಂತಹ ಕ್ರೂರ ಹೆಜ್ಜೆ ಇಡುತ್ತಾಳೆ ಎಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಜನವರಿಯಲ್ಲಿ ಶುರುವಾದ ಮಾತುಕತೆ

ಸಿಯಾ ಮತ್ತು ಕೇತನ್ ವಿವಾಹದ ಬಗ್ಗೆ ಎರಡು ಕುಟುಂಬಗಳ ನಡುವೆ ಮಾತುಕತೆ 2026 ರ ಜನವರಿಯಲ್ಲಿ ಪ್ರಾರಂಭವಾಗಿತ್ತು. ನಂತರ ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥ ಅತ್ಯಂತ ವಿಜೃಂಭಣೆಯಿಂದ ನಡೆದಿತ್ತು. ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್‌ನಲ್ಲಿ ಇವರ ವಿವಾಹವನ್ನು ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿದ್ದವು. ತಾವು ಕೇವಲ ಎರಡು ಕುಟುಂಬಗಳನ್ನು ಪರಿಚಯಿಸಿ, ಮದುವೆಯ ಬಗ್ಗೆ ಚರ್ಚಿಸಲು ಅವರು ಭೇಟಿಯಾಗಲು ಸಹಾಯ ಮಾಡುವುದಕ್ಕಷ್ಟೇ ಸೀಮಿತವಾಗಿದ್ದಾಗಿ ಮಿತ್ತಲ್ ಪೊಲೀಸರಿಗೆ ತಿಳಿಸಿದ್ದಾರೆ.

ತೀವ್ರಗೊಂಡ ಪೊಲೀಸ್ ವಿಚಾರಣೆ, ಕಸ್ಟಡಿಯಲ್ಲಿ ಸಿಯಾ

ಲೋಹಗಡ್ ಕೋಟೆ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಶುಕ್ರವಾರ ಸಿಯಾ ಗೋಯಲ್ ಅವರ ಪೋಷಕರಾದ ಪ್ರವೀಣ್ ಗೋಯಲ್, ಪೂಜಾ ಗೋಯಲ್ ಮತ್ತು ಆಕೆಯ ಸಹೋದರ ಸಾಹಿಲ್ ಗೋಯಲ್ ಅವರನ್ನು ಲೋನಾವಾಲ ಪೊಲೀಸ್ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಆರೋಪಿ ಚೇತನ್ ಚೌಧರಿ ಜೊತೆಗಿನ ಸಿಯಾಳ ಸಂಬಂಧದ ಬಗ್ಗೆ ಆಕೆಯ ಸಹೋದರ ಸಾಹಿಲ್‌ಗೆ ಏನಾದರೂ ಮಾಹಿತಿ ಇತ್ತೇ ಎಂಬ ಹಿನ್ನೆಲೆಯಲ್ಲಿ ಕೂಡ ಪೊಲೀಸರು ಸುಮಾರು 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸದ್ಯಕ್ಕೆ ಸಿಯಾ ಗೋಯಲ್ ಜೂನ್ 29 ರವರೆಗೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ.

ಆಕ್ರೋಶ ಹೊರಹಾಕಿದ ಕೇತನ್ ತಂದೆ

ಇತ್ತ ಮಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿರುವ ಕೇತನ್ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ನನ್ನ ಮಗನನ್ನು ಯಾವುದೇ ಕಾರಣವಿಲ್ಲದೆ, ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ಅಂತಹ ದಾರುಣ ಅಂತ್ಯಕ್ಕೆ ಅರ್ಹನಾಗಲು ಅವನು ಯಾವುದೇ ತಪ್ಪು ಮಾಡಿರಲಿಲ್ಲ. ನನ್ನ ಮಗನ ನಿರಪರಾಧಿ ಜೀವ ತೆಗೆದ ಆ ಇಬ್ಬರೂ ಆರೋಪಿಗಳಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಬೇಕು ಎಂದು ವಿಶಾಲ್ ಅಗರ್ವಾಲ್ ಆಕ್ರೋಶಭರಿತ ಕಣ್ಣೀರು ಹಾಕಿದ್ದಾರೆ.

ಅಸಲಿಗೆ ಜೂನ್ 18 ರಂದು ನಡೆದಿದ್ದೇನು?

ಜೂನ್ 18 ರಂದು ಪುಣೆ ಜಿಲ್ಲೆಯ ಲೋಹಗಡ್ ಕೋಟೆಗೆ ಕೇತನ್‌ನನ್ನು ಸಿಯಾ ಪ್ರವಾಸದ ನೆಪದಲ್ಲಿ ಕರೆಸಿಕೊಂಡಿದ್ದಳು. ಅಲ್ಲಿ ಮೊದಲೇ ಸಿದ್ಧನಾಗಿದ್ದ ಆಕೆಯ ಪ್ರಿಯಕರ ಚೇತನ್ ಚೌಧರಿ (22) ಜೊತೆ ಸೇರಿ, 20 ವರ್ಷದ ಸಿಯಾ ಯೋಜಿತವಾಗಿ ಕೇತನ್‌ನನ್ನು ಕಡಿದಾದ ಬಂಡೆಯ ಮೇಲಿಂದ ಕೆಳಗೆ ತಳ್ಳಿದ್ದಾಳೆ. ನೂರಾರು ಅಡಿ ಆಳದ ಪ್ರಪಾತಕ್ಕೆ ಬಿದ್ದ ಕೇತನ್ ಸ್ಥಳದಲ್ಲೇ ಸಾವನ್ನಪ್ಪಿದ್ದ . ಕೇತನ್‌ನನ್ನು ಮದುವೆಯಾಗಲು ಇಷ್ಟವಿಲ್ಲದ ಕಾರಣ, ಆತನನ್ನು ತನ್ನ ದಾರಿಯಿಂದ ಶಾಶ್ವತವಾಗಿ ದೂರ ಮಾಡಲು ಸಿಯಾ ಮತ್ತು ಚೇತನ್ ಈ ಭೀಕರ ಹತ್ಯೆಯ ಸ್ಕೆಚ್ ಹಾಕಿದ್ದರು. ಸದ್ಯ ಇಬ್ಬರೂ ಆರೋಪಿಗಳು ಕಠಿಣ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ.