Electric Scooter: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಬದಲಿಸೋದು ಕಷ್ಟವೇ? ಸತ್ಯ ಏನು? ಸುಳ್ಳೇನು?
Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಆದರೂ, ಇವುಗಳ ಬಗ್ಗೆ ಜನರಲ್ಲಿ ಇನ್ನೂ ಕೆಲವು ತಪ್ಪು ಕಲ್ಪನೆಗಳಿವೆ. ಅಂತಹ ಕೆಲವು ಪ್ರಮುಖ ತಪ್ಪುಗ್ರಹಿಕೆಗಳು ಯಾವುವು? ಮತ್ತು ನಿಜವಾದ ಸತ್ಯಾಂಶಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ದೂರ ಹೋಗಲ್ಲ
ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ದೂರ ಹೋಗಲ್ಲ ಅನ್ನೋದು ಸಾಮಾನ್ಯವಾದ ತಪ್ಪು ಕಲ್ಪನೆ. ಒಮ್ಮೆ ಚಾರ್ಜ್ ಮಾಡಿದರೆ ಕೆಲವು ಕಿಲೋಮೀಟರ್ ಮಾತ್ರ ಚಲಿಸುತ್ತೆ ಅಂತ ಹಲವರು ಅಂದುಕೊಂಡಿದ್ದಾರೆ. ಆದರೆ, ಈಗಿನ ಹೊಸ ಮಾಡೆಲ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ.
ಉದಾಹರಣೆಗೆ, VIDA EVOOTER ಸ್ಕೂಟರ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ, IDC ಮಾನದಂಡಗಳ ಪ್ರಕಾರ 142 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ. ದಿನನಿತ್ಯದ ಕಚೇರಿ ಕೆಲಸ, ವ್ಯಾಪಾರ ಅಥವಾ ನಗರದೊಳಗಿನ ಓಡಾಟಕ್ಕೆ ಈ ರೇಂಜ್ ಸಾಕಾಗುತ್ತದೆ. ಬ್ಯಾಟರಿ ತಂತ್ರಜ್ಞಾನ ಬೆಳೆದಂತೆ ಈ ರೇಂಜ್ ಇನ್ನಷ್ಟು ಹೆಚ್ಚಾಗಲಿದೆ.
ಬ್ಯಾಟರಿ ಚಾರ್ಜ್ ಆಗಲು ಗಂಟೆಗಟ್ಟಲೆ ಕಾಯಬೇಕು
ಪೆಟ್ರೋಲ್ ಬಂಕ್‌ನಲ್ಲಿ ನಿಮಿಷಗಳಲ್ಲಿ ಟ್ಯಾಂಕ್ ಫುಲ್ ಮಾಡಬಹುದು, ಆದರೆ ಇ-ಸ್ಕೂಟರ್ ಚಾರ್ಜ್ ಮಾಡಲು ಗಂಟೆಗಟ್ಟಲೆ ಬೇಕು ಎಂದು ಹಲವರು ಭಾವಿಸುತ್ತಾರೆ. ಆದರೆ, ಈಗ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಬಂದಿರುವುದರಿಂದ ಈ ಸಮಸ್ಯೆ ಬಹುತೇಕ ಬಗೆಹರಿದಿದೆ.
ಕೆಲವು ಸುಧಾರಿತ ಸ್ಕೂಟರ್‌ಗಳಲ್ಲಿ, ಬ್ಯಾಟರಿಯು ಕೇವಲ 62 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಅಲ್ಲದೆ, ತೆಗೆಯಬಹುದಾದ ಬ್ಯಾಟರಿಗಳ (removable batteries) ಆಯ್ಕೆ ಇರುವುದರಿಂದ, ಅವುಗಳನ್ನು ಮನೆಗೆ ಅಥವಾ ಕಚೇರಿಗೆ ತೆಗೆದುಕೊಂಡು ಹೋಗಿ ಆರಾಮವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಚಾರ್ಜಿಂಗ್ ಸ್ಟೇಷನ್ ಹುಡುಕುವ ಅಗತ್ಯ ಬೀಳುವುದಿಲ್ಲ.
ಎಲೆಕ್ಟ್ರಿಕ್ ಸ್ಕೂಟರ್‌ಗಳು ತುಂಬಾ ದುಬಾರಿ
ಎಲೆಕ್ಟ್ರಿಕ್ ಸ್ಕೂಟರ್‌ಗಳ ಆರಂಭಿಕ ಬೆಲೆ ಹೆಚ್ಚು ಎಂದು ಹಲವರು ಖರೀದಿಸಲು ಹಿಂಜರಿಯುತ್ತಾರೆ. ಆದರೆ, ಕೇವಲ ಖರೀದಿ ಬೆಲೆಯನ್ನಲ್ಲ, ಒಟ್ಟಾರೆ ನಿರ್ವಹಣಾ ವೆಚ್ಚವನ್ನೂ ಪರಿಗಣಿಸಬೇಕು. ಸದ್ಯ, ಬೇಸಿಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ 44,990 ರೂ.ಗಳಿಂದ ಆರಂಭವಾಗುತ್ತದೆ. ಒಮ್ಮೆ ಖರೀದಿಸಿದ ನಂತರ ಪೆಟ್ರೋಲ್ ಖರ್ಚು ಇರುವುದಿಲ್ಲ. ಇಂಜಿನ್ ಆಯಿಲ್ ಬದಲಾಯಿಸುವ ಅಗತ್ಯವಿಲ್ಲ.
ಸರ್ವಿಸಿಂಗ್ ವೆಚ್ಚವೂ ಕಡಿಮೆ. ಇದರ ಜೊತೆಗೆ, ಕೆಲವು ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿಗಳು ಗ್ರಾಹಕರಿಗೆ ಮತ್ತಷ್ಟು ಪ್ರಯೋಜನ ನೀಡುತ್ತವೆ. ದೀರ್ಘಾವಧಿಯಲ್ಲಿ ನೋಡಿದರೆ, ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಆರ್ಥಿಕವಾಗಿ ಲಾಭದಾಯಕ.
ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುರಕ್ಷಿತವಲ್ಲ
ಬ್ಯಾಟರಿಗೆ ಸಂಬಂಧಿಸಿದ ಕೆಲವು ಘಟನೆಗಳಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸುರಕ್ಷತೆಯ ಬಗ್ಗೆ ಅನುಮಾನಗಳು ಮೂಡಿವೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಮಾಡೆಲ್‌ಗಳು ಸುಧಾರಿತ ಸುರಕ್ಷತಾ ತಂತ್ರಜ್ಞಾನವನ್ನು ಬಳಸುತ್ತಿವೆ.
ಕೆಲವು ಸ್ಕೂಟರ್‌ಗಳಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್, ವಿಭಿನ್ನ ರೈಡಿಂಗ್ ಮೋಡ್‌ಗಳು ಮತ್ತು ಸ್ಮಾರ್ಟ್ ಕಂಟ್ರೋಲ್ ಫೀಚರ್‌ಗಳಂತಹ ಸೌಲಭ್ಯಗಳಿವೆ. ಇವು ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿಸಲು ಸಹಾಯ ಮಾಡುತ್ತವೆ. ಸರಿಯಾದ ಗುಣಮಟ್ಟದ ಮಾನದಂಡಗಳೊಂದಿಗೆ ತಯಾರಾದ ವಾಹನ ಬಳಸಿದರೆ ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಬ್ಯಾಟರಿ ಬದಲಾಯಿಸಲು ಭಾರಿ ಖರ್ಚು
ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬ್ಯಾಟರಿ ಬದಲಾವಣೆ ತುಂಬಾ ದುಬಾರಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಬ್ಯಾಟರಿಯ ಬಾಳಿಕೆ ಹಲವು ವರ್ಷಗಳವರೆಗೆ ಇರುತ್ತದೆ. ಕೆಲವು ಕಂಪನಿಗಳು ಬ್ಯಾಟರಿಗಳಿಗೆ ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಮತ್ತು ಐದು ವರ್ಷಗಳ ವಿಸ್ತರಿತ ವಾರಂಟಿ ಆಯ್ಕೆಯನ್ನು ನೀಡುತ್ತಿವೆ.
ಅಷ್ಟೇ ಅಲ್ಲ, ಪೆಟ್ರೋಲ್, ಇಂಜಿನ್ ಆಯಿಲ್ ಮತ್ತು ಇತರ ನಿರ್ವಹಣಾ ವೆಚ್ಚಗಳಲ್ಲಿ ಉಳಿತಾಯವಾಗುವ ಹಣವನ್ನು ಲೆಕ್ಕ ಹಾಕಿದರೆ, ಬ್ಯಾಟರಿ ಬದಲಾವಣೆಯ ಖರ್ಚು ದೊಡ್ಡ ಹೊರೆಯಾಗುವುದಿಲ್ಲ.
ಚಾರ್ಜಿಂಗ್ ಸ್ಟೇಷನ್‌ಗಳು ತುಂಬಾ ಕಡಿಮೆ
ಒಂದು ಕಾಲದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ ದೊಡ್ಡ ಸಮಸ್ಯೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ದೇಶಾದ್ಯಂತ ಚಾರ್ಜಿಂಗ್ ಮೂಲಸೌಕರ್ಯ ವೇಗವಾಗಿ ವಿಸ್ತರಿಸುತ್ತಿದೆ.
ಪ್ರಸ್ತುತ, ಎಲ್ಲಾ ಪ್ರಮುಖ ಕಂಪನಿಗಳು ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿವೆ. ಇದರ ಜೊತೆಗೆ, ಮನೆಯಲ್ಲೇ ಚಾರ್ಜ್ ಮಾಡಿಕೊಳ್ಳುವ ಅವಕಾಶ ಇರುವುದರಿಂದ ಚಾರ್ಜಿಂಗ್‌ಗಾಗಿ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

