ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಿದರೆ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದರು.  ಚುನಾವಣಾ ಟ್ರೆಂಡ್‌ಗಳು ಟಿವಿಕೆ ಪಕ್ಷದ ಮುನ್ನಡೆಯನ್ನು ತೋರಿಸುತ್ತಿದ್ದು, ಕಿಶೋರ್ ಅವರ ತಂತ್ರಗಾರಿಕೆ ನಿಜವಾಗುವ ಸೂಚನೆ ನೀಡಿವೆ.

ಚೆನ್ನೈ (ಮೇ.4): ತಮಿಳುನಾಡು ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳು ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿವೆ. ಈ ನಡುವೆ, ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ "ಬುಲ್ಸ್ ಐ" (ನಿಖರ ಗುರಿ) ತಲುಪಿದಂತೆ ಕಾಣುತ್ತಿದೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಏಕಾಂಗಿಯಾಗಿ ಸ್ಪರ್ಧಿಸಿದರೆ ಗೆಲುವು ಸಾಧಿಸಬಹುದು ಎಂಬ ಕಿಶೋರ್ ಅವರ ಭವಿಷ್ಯವಾಣಿ ಈಗ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತಂತಿ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದೇನು?

ವಿಜಯ್ ಅವರ ಪಕ್ಷಕ್ಕೆ ವಿಶೇಷ ರಾಜಕೀಯ ಸಲಹೆಗಾರರಾಗಿದ್ದ ಪ್ರಶಾಂತ್ ಕಿಶೋರ್ ಅವರು ಈ ಹಿಂದೆ ತಮಿಳುನಾಡಿನ 'ತಂತಿ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, 'ತಮಿಳುನಾಡಿನಲ್ಲಿ ವಿಜಯ್ ಏಕಾಂಗಿಯಾಗಿ ಕಣಕ್ಕಿಳಿದರೆ ಅವರಿಗೆ ಗೆಲ್ಲುವ ಅತ್ಯಂತ ಉತ್ತಮ ಅವಕಾಶವಿದೆ' ಎಂದಿದ್ದರು. ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ಕಿಶೋರ್ ಅವರು "ಖಂಡಿತವಾಗಿಯೂ ಇಲ್ಲ" ಎಂದು ಉತ್ತರಿಸಿದ್ದರು.

"ಫಲಿತಾಂಶ ಬಂದಾಗ ಈ ವಿಡಿಯೋ ಪ್ಲೇ ಮಾಡಿ"

"ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆಯೇ ಅವರು ಯೋಚಿಸಬೇಕು ಮತ್ತು ಅದು ಬದಲಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಅವರು ಒಬ್ಬಂಟಿಯಾಗಿ ಸ್ಪರ್ಧಿಸಿದರೆ ಜಯದ ಅವಕಾಶಗಳು ಹೆಚ್ಚಿವೆ" ಎಂದು ಅವರು ಹೇಳಿದ್ದರು. "ಅತ್ಯುತ್ತಮ ಅವಕಾಶ ಎಂದರೆ ಏನು?" ಎಂದು ಪ್ರಶ್ನಿಸಿದಾಗ, "ತಮಿಳುನಾಡನ್ನು ಗೆಲ್ಲುವ ಉತ್ತಮ ಅವಕಾಶ" ಎಂದು ಕಿಶೋರ್ ನೇರವಾಗಿ ಉತ್ತರಿಸಿದ್ದರು. ಅಲ್ಲದೆ, ಸರ್ಕಾರ ರಚಿಸಲು ಬೇಕಾದ ಬಹುಮತದ ಸಂಖ್ಯೆ 118 ಅನ್ನು ವಿಜಯ್ ತಲುಪಲು ಸಾಧ್ಯವೇ ಎಂಬ ಪ್ರಶ್ನೆಗೆ, "ಖಂಡಿತವಾಗಿಯೂ ಸಾಧ್ಯ. ಈ ವಿಡಿಯೋವನ್ನು ಎತ್ತಿಟ್ಟುಕೊಳ್ಳಿ ಮತ್ತು ಫಲಿತಾಂಶ ಬಂದಾಗ ಪ್ಲೇ ಮಾಡಿ" ಎಂದು ಅತ್ಯಂತ ಆತ್ಮವಿಶ್ವಾಸದಿಂದ ಸವಾಲು ಹಾಕಿದ್ದರು.

ಸದ್ಯದ ಮಾಹಿತಿಯ ಪ್ರಕಾರ, ತಮಿಳುನಾಡಿನ 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಟಿವಿ ಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದು ರಾಜ್ಯದ ಬಲಿಷ್ಠ ಮೈತ್ರಿಕೂಟಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಹಿಂದಿಕ್ಕಿರುವುದು ಅಚ್ಚರಿ ಮೂಡಿಸಿದೆ.

ವಿಜಯ್ ಮತ್ತು ಪ್ರಶಾಂತ್ ಕಿಶೋರ್ ತಂತ್ರ

ದೇಶದ ಹಲವು ಪಕ್ಷಗಳಿಗೆ ಚುನಾವಣಾ ವಿಜಯದ ಸ್ಕ್ರಿಪ್ಟ್ ಬರೆದಿರುವ ಪ್ರಶಾಂತ್ ಕಿಶೋರ್ ಅವರನ್ನು ವಿಜಯ್ ಅವರು ತಮ್ಮ ಮೊದಲ ಚುನಾವಣಾ ಕಣಕ್ಕಿಳಿಯುವ ಮುನ್ನವೇ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು. ಕೆಲ ವರದಿಯ ಪ್ರಕಾರ, ಕಿಶೋರ್ ಅವರ ಇನ್‌ಪುಟ್‌ಗಳು ಮತ್ತು ತಂತ್ರಗಳು ಚುನಾವಣೆಯಲ್ಲಿ ಅತ್ಯಂತ ಮೌಲ್ಯಯುತವಾಗಲಿವೆ ಎಂಬ ನಂಬಿಕೆ ವಿಜಯ್ ಅವರಿಗಿತ್ತು. ಅದರಂತೆಯೇ ವಿಜಯ್ ಯಾವುದೇ ದೊಡ್ಡ ಮೈತ್ರಿಕೂಟಗಳ ಜೊತೆ ಕೈಜೋಡಿಸದೆ ಎಲ್ಲಾ 234 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಈಗ ಆರಂಭಿಕ ಟ್ರೆಂಡ್‌ಗಳು ಕಿಶೋರ್ ಅವರ ತಂತ್ರಗಾರಿಕೆ ಫಲ ನೀಡುತ್ತಿರುವುದನ್ನು ಸೂಚಿಸುತ್ತಿವೆ.

Scroll to load tweet…