ಬಿಹಾರ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿರುವ ಪ್ರಶಾಂತ್ ಕಿಶೋರ್‌ ಅವರ ಜನ ಸುರಾಜ್‌ ಪಕ್ಷ 51 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವೈದ್ಯರು, ವಕೀಲರು, ಮಾಜಿ ಸರ್ಕಾರಿ ಅಧಿಕಾರಿಗಳು, ನಿವೃತ್ತ ಪೊಲೀಸರಿಗೂ ಟಿಕೆಟ್‌ ನೀಡಲಾಗಿದೆ.

ಪಟನಾ: ಬಿಹಾರ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿರುವ ಪ್ರಶಾಂತ್ ಕಿಶೋರ್‌ ಅವರ ಜನ ಸುರಾಜ್‌ ಪಕ್ಷ 51 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವೈದ್ಯರು, ವಕೀಲರು, ಮಾಜಿ ಸರ್ಕಾರಿ ಅಧಿಕಾರಿಗಳು, ನಿವೃತ್ತ ಪೊಲೀಸರಿಗೂ ಟಿಕೆಟ್‌ ನೀಡಲಾಗಿದೆ. 

243 ವಿಧಾನಸಭಾ ಕ್ಷೇತ್ರಗಳ ಪೈಕಿ 53 ಜನರ ಹೆಸರನ್ನು ಪ್ರಕಟಿಸಲಾಗಿದ್ದು, ಆ ಪೈಕಿ ಶೇ.16ರಷ್ಟು ಮುಸ್ಲಿಮರು ಮತ್ತು ಶೇ.17ರಷ್ಟು ಹಿಂದುಳಿದ ಸಮುದಾಯದವರಿಗೆ ಮೀಸಲಿಟ್ಟಿದೆ.

ಈ ಪಟ್ಟಿಯಲ್ಲಿ ಪ್ರಶಾಂತ್‌ ಕಿಶೋರ್‌ ಹೆಸರಿಲ್ಲದಿರುವುದರಿಂದ ಕುತೂಹಲ ಮೂಡಿಸಿದ. ಪ್ರಶಾಂತ್‌ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕ್ಷೇತ್ರ ರಾಘೋಪುರ ಅಥವಾ ತವರು ಕ್ಷೇತ್ರ ಕಾರ್ಗಹರ್‌ನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

ಬಿಹಾರದಲ್ಲಿ 25 ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ, ಬಿಜೆಪಿಗೆ ಚಿರಾಗ್‌ ಬಳಿಕ ಮಾಂಝಿ ಕಾಟ!

 ಪಟನಾ : ಬಿಹಾರದ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬುಧವಾರ 25 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಇಲ್ಲಿನ ಇಂದಿರಾ ಭವನದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿದ್ದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು ಎಂದು ಗೊತ್ತಾಗಿದೆ. ಆದರೆ, ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ.

2 ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್ ಸ್ಪರ್ಧೆ ಸಾಧ್ಯತೆ

ಪಟನಾ: ಆರ್‌ಜೆಡಿ ನಾಯಕ ತೇಜಸ್ವಿಯಾದವ್ ಬಿಹಾರದ 2 ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ರಾಘೋಪುರ ಹಾಗೂ ಫೂಲ್ ಪರಾಸ್ ಎಂಬ ಕ್ಷೇತ್ರಗಳಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಹಾಗೂ ಪಕ್ಷದ ನಾಯಕರು ಈ ಬಗ್ಗೆ ಸಭೆ ಸೇರಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವು ಹೇಳಿವೆ. ತೇಜಸ್ವಿ ಅವರು ಆರ್‌ಜೆಡಿ-ಕಾಂಗ್ರೆಸ್ ಮಹಾಮೈತ್ರಿಕೂಟದ ಪ್ರಮುಖ ಮುಖವಾಗಿದ್ದು, ಸಿಎಂ ಆಗುವ ಆಸೆ ಹೊಂದಿದ್ದಾರೆ. ಚುನಾವಣೆ ನ.6 ಹಾಗೂ 11 ರಂದು ನಡೆಯಲಿದ್ದು, ನ.14ಕ್ಕೆ ಎಣಿಕೆ ನಡೆಯಲಿದೆ.

ಬಿಜೆಪಿಗೆ ಚಿರಾಗ್ ಬಳಿಕ ಮಾಂಝಿ ಕಾಟ

ಪಟನಾ: ಬಿಹಾರ ಚುನಾವಣೆಯ ಸೀಟು ಹಂಚಿಕೆ ಎನ್‌ಡಿಎಗೆ ತಲೆನೋವಾಗುವ ಸಾಧ್ಯತೆ ಇದೆ. ಕೂಟದ ಪಾಲುದಾರ ಪಕ್ಷವಾದ ಎಲ್‌ಜೆಪಿ ನೇತಾರ ಚಿರಾಗ್ ಪಾಸ್ವಾನ್ ಬಳಿಕ, ಹಮ್ ನಾಯಕ ಹಾಗೂ ಕೇಂದ್ರ ಸಚಿವ ಜೀತನ್‌ರಾಂ ಮಾಂಝಿ ಕೂಡ ಸೀಟು ಹಂಚಿಕೆ ಬಗ್ಗೆ ಬಂಡೇಳುವ ಮುನ್ಸೂಚನೆ ನೀಡಿದ್ದಾರೆ. ಮಾಂಝಿ ಅವರ ಪಕ್ಷಕ್ಕೆ ಕೇವಲ 5-6 ಸೀಟುಗಳನ್ನು ನೀಡುವ ಚಿಂತನೆಯನ್ನು ಕೂಟದ ಪ್ರಮುಖ ಪಕ್ಷಗಳಾದ ಜೆಡಿಯು-ಬಿಜೆಪಿ ಹೊಂದಿವೆ. ಆದರೆ ಇದಕ್ಕೆ ಬುಧವಾರ ಆಕ್ಷೇಪಿಸಿರುವ ಮಾಂಝಿ, 'ನಮಗೆ 15 ಸ್ಥಾನ ಕೊಡಬೇಕು. ಇಲ್ಲದಿದ್ದರೆ ಚುನಾವಣೆಗೆ ನಮ್ಮ ಪಕ್ಷ ಸ್ಪರ್ಧಿಸಲ್ಲ' ಎಂದಿದ್ದಾರೆ.