ಚಂದ್ರಯಾನ-3 ಯಶಸ್ವಿ ಉಡಾವಣೆ, ಪ್ರಧಾನಿ ಮೋದಿ ಅಭಿನಂದನೆ
ಚಂದ್ರಯಾನ-3 ಯಶಸ್ವಿ ಉಡಾವಣೆಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು (ಜು.14): ಚಂದ್ರಯಾನ-3 ಯಶಸ್ವಿ ಉಡಾವಣೆಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ , ಚಂದ್ರಯಾನ-3 ಭಾರತದ ಬಾಹ್ಯಾಕಾಶ ಸಾಹಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತದೆ. ಇದು ಪ್ರತಿ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎತ್ತರಕ್ಕೆ ಏರಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ನಾನು ಅವರ ಚೈತನ್ಯ ಮತ್ತು ಜಾಣ್ಮೆಯನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಚಂದ್ರಯಾನ-3 ಉಡಾವಣೆಗೂ ಮುನ್ನ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡಲಿದೆ ಚಂದ್ರಯಾನ-3, ನಮ್ಮ ಮೂರನೇ ಚಂದ್ರಯಾನ, ಅದರ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಟ್ವೀಟ್ ಮಾಡಿದ್ದರು.
ಭಾರತದ ಭರವಸೆ-ಕನಸುಗಳನ್ನು ಹೊತ್ತ ಚಂದ್ರಯಾನ-3 ನೌಕೆ ಯಶಸ್ವಿ ಉಡಾವಣೆ!
ಈ ಯಾನವು ಚಂದ್ರಯಾನ 2 ರ ಪ್ರಮುಖ ವೈಜ್ಞಾನಿಕ ಫಲಿತಾಂಶಗಳು ಚಂದ್ರನ ಸೋಡಿಯಂಗಾಗಿ ಮೊಟ್ಟಮೊದಲ ಜಾಗತಿಕ ನಕ್ಷೆ, ಕುಳಿಯ ಗಾತ್ರದ ವಿತರಣೆಯ ಜ್ಞಾನವನ್ನು ಹೆಚ್ಚಿಸುವುದು, IIRS ಉಪಕರಣದೊಂದಿಗೆ ಚಂದ್ರನ ಮೇಲ್ಮೈ ನೀರಿನ ಮಂಜುಗಡ್ಡೆಯ ನಿಸ್ಸಂದಿಗ್ಧವಾಗಿ ಪತ್ತೆಹಚ್ಚುವಿಕೆ ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಚಂದ್ರಯಾನ-3 ವ್ಯೋಮನೌಕೆಯನ್ನು ಹೊತ್ತ ಎಲ್‌ವಿಎಂ-3 ರಾಕೆಟ್ ನಭಕ್ಕೆ ಚಿಮ್ಮಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಮಧ್ಯಾಹ್ನ 2.35ಕ್ಕೆ ಸರಿಯಾಗಿ ನೌಕೆ ಪಯಣ ಆರಂಭಿಸಿದೆ.
ಈಗ ಅಂದುಕೊಂಡಿರುವ ಪ್ರಕಾರ ಆ.23 ಅಥವಾ 24ರಂದು ಚಂದ್ರನ ಮೇಲೆ ವ್ಯೋಮನೌಕೆ ಲ್ಯಾಂಡ್ ಆಗಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ನೌಕೆ ಲ್ಯಾಂಡ್ ಆಗುವಲ್ಲಿ ವೈಪರೀತ್ಯಗಳ ಕಾರಣ ವ್ಯತ್ಯಾಸವಾದರೂ ಆದರೆ, ಪರ್ಯಾಯ ಮಾರ್ಗಗಳನ್ನು ಇಸ್ರೋ ಕಂಡುಕೊಂಡಿದ್ದು, ಒಂದಿಲ್ಲೊಂದು ಪರ್ಯಾಯ ಸ್ಥಳಗಳಲ್ಲಿ ನೌಕೆಯ ಭೂಸ್ಪರ್ಶಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಸಾಕಷ್ಟುಇಂಧನ ವ್ಯವಸ್ಥೆಯನ್ನೂ ಲ್ಯಾಂಡರ್‌ಗೆ ಮಾಡಲಾಗಿದೆ. ಅದಕ್ಕೆಂದೇ ಮುಂಜಾಗ್ರತಾ ಕ್ರಮವಾಗಿ ‘ವೈಫಲ್ಯ ಆಧರಿತ ವಿನ್ಯಾಸ’ ಮಾಡಲಾಗಿದೆ.
Chandrayaan 3 ಮಷಿನ್ ಮುಂದಾಳತ್ವ ವಹಿಸಿದ ಮಹಿಳೆ ಯಾರು?
ಈವರೆಗೆ ಯಾವುದೇ ಉಪಕರಣಗಳು ಹೋಗದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ನೌಕೆಯನ್ನು ಇಳಿಸುವ ಸಾಹಸಕ್ಕೆ ಮುಂದಾಗಿದೆ. ಚಂದ್ರನ ಅಧ್ಯಯನಕ್ಕೆ 2019ರ ಜು.22ರಂದು ಇಸ್ರೋ ಕೈಗೊಂಡಿದ್ದ ಚಂದ್ರಯಾನ-2 ಯೋಜನೆ ವಿಫಲವಾದ ಕಾರಣ ಮತ್ತೊಂದು ಚಂದ್ರಯಾನ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಉಷ್ಣಾಂಶ -230 ಡಿ.ಸೆ.ಗಿಂತ ಕಡಿಮೆ ಇದ್ದು, ಇಲ್ಲಿ ಬಹುಕಾಲ ದವರಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆಗಳು ಇರುವ ಅಂದಾಜಿದೆ. ಅಲ್ಲದೆ, 2008ರಲ್ಲಿ ಕೈಗೊಂಡ ಚಂದ್ರಯಾನ-1 ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂಬುದು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಳ್ಳ ಲಾಗಿದೆ.