Asianet Suvarna News Asianet Suvarna News

ಭಾರತದ ಭರವಸೆ-ಕನಸುಗಳನ್ನು ಹೊತ್ತ ಚಂದ್ರಯಾನ-3 ನೌಕೆ ಯಶಸ್ವಿ ಉಡಾವಣೆ!

ಭಾರತದ ಭರವಸೆ ಹಾಗೂ ಕನಸುಗಳನ್ನು ಹೊತ್ತ ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ನಭಕ್ಕೆ ಚಿಮ್ಮಿದ ನೌಕೆ, ಆ.23 ಅಥವಾ 24ರಂದು ಚಂದ್ರನ ಮೇಲೆ ಇಳಿಯಲಿದೆ.
 

Isro successfully launch chandrayaan 3 lunar mission from Satish Dhawan Space Centre andhra Pradesh ckm
Author
First Published Jul 14, 2023, 2:36 PM IST

ಶ್ರೀಹರಿಕೋಟಾ(ಜು.14) ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರಂತರ ಪ್ರಯತ್ನದ ಫಲದಿಂದ ಚಂದ್ರಯಾನ-3 ವ್ಯೋಮನೌಕೆಯನ್ನು ಹೊತ್ತ ಎಲ್‌ವಿಎಂ-3 ರಾಕೆಟ್‌ ನಭಕ್ಕೆ ಚಿಮ್ಮಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಮಧ್ಯಾಹ್ನ 2.35ಕ್ಕೆ ಸರಿಯಾಗಿ ನೌಕೆ ಪಯಣ ಆರಂಭಿಸಿತು. ಉಡಾವಣೆ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ನೌಕೆಯ ಹಂತ ಹಂತದ ಅಪ್‌ಡೇಟ್ ನೀಡಿದರು. ಪ್ರತಿಯೊಂದು ಸ್ಟೇಜ್ ದಾಟುತ್ತಿದ್ದಂತೆ ವಿಜ್ಞಾನಿಗಳು ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಉಡಾವಣೆ ಯಶಸ್ವಿಯಾದ ಬೆನ್ನಲ್ಲೇ ಶ್ರೀಹರಿಕೋಟಾದಲ್ಲಿ ನೆರೆದಿದ್ದ ಗಣ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇದೇ ವೇಳೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ , ನೌಕೆ ಮಾಡೆಲ್‌ನ್ನು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ವಿ ಸೋಮನಾಥ್, ಚಂದ್ರಯಾನ 3 ಮೊದಲ ಹಂತ ಯಶಸ್ವಿಯಾಗಿದೆ. ಮುಂದಿನ ಪಯಣಕ್ಕೆ ಶುಭವಾಗಲಿ. ಇದರ ಶ್ರೇಯಸ್ಸು ಇಡೀ ತಂಡಕ್ಕೆ ಸಲ್ಲಲಿದೆ ಎಂದರು.ಈಗಾಗಲೇ ರಾಕೆಟ್ ಕಕ್ಷೆಯತ್ತ ಸಾಗುತ್ತಿದೆ. ಮುಂದಿನ 2 ತಿಂಗಳ ನಿಯಂತ್ರಣ ಬೆಂಗಳೂರಿನ ಇಸ್ರೋ ಕೇಂದ್ರ ಮಾಡಲಿದೆ.

ಶ್ರೀಹರಿಕೋಟಾದ ವೀಕ್ಷಕ ಗ್ಯಾಲರಿಯಲ್ಲಿ 10,000 ಕ್ಕೂ ಹೆಚ್ಚು ಮಂದಿ ಚಂದ್ರಯಾನ ಉಡಾವಣೆ ವೀಕ್ಷಿಸಿ ಸಂಭ್ರಮಪಟ್ಟಿದ್ದಾರೆ. ಇದರಲ್ಲಿ ಶೇಕಡಾ 40 ರಷ್ಟು ಶಾಲಾ ವಿದ್ಯಾರ್ಥಿಗಳು. ಗ್ಯಾಲರಿಯಲ್ಲಿ ಕುಳಿತ್ದ ವೀಕ್ಷಕರು ನಿಮಿಷ ನಿಮಿಷಕ್ಕೂ ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವ ಮೂಲಕ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದರು. ಇಸ್ರೋ ವಿಜ್ಞಾನಿಗಳು ಚಂದ್ರಯಾನ ನೌಕೆ ಯಶಸ್ವಿ ಉಡಾವಣೆಗೆ ತಿರುಪತಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಚಂದ್ರಯಾನ -3 ನೌಕೆಯ ಸಣ್ಣ ಮಾಡೆಲ್‌ನ್ನು ದೇವಸ್ಥಾನಕ್ಕೆ ಒಯ್ದ ಇಸ್ರೋ ವಿಜ್ಞಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು.  

 ಚಂದ್ರಯಾನ 3 ಉಡಾವಣೆ ನೇರ ಪ್ರಸಾರ ದೃಶ್ಯಕ್ಕೆ ಇಲ್ಲಿ ಕ್ಲಿಕ್ ಮಾಡಿ

ಚಂದ್ರನ ಮೇಲೆ ಸುರಕ್ಷಿತವಾಗಿ ಚಂದ್ರಯಾನ-3ದ ವಿಕ್ರಮ್‌ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ಇಳಿಸುವುದಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ ಹಾಗೂ ನಂತರ ಚಂದ್ರನ ಮೇಲೆ ಪ್ರಗ್ಯಾನ್‌ ಹೆಸರಿನ ರೋವರ್‌ ಸುತ್ತಲಿದೆ ಹಾಗೂ ಇತ್ತೀಚಿನ ಪರಿಸ್ಥಿತಿ ಹಾಗೂ ತರಹೇವಾರಿ ಕುತೂಹಲಕರ ಮಾಹಿತಿಯನ್ನು ವಿಜ್ಞಾನಿಗಳಿಗೆ ನೀಡಲಿದೆ.

ಈಗ ಅಂದುಕೊಂಡಿರುವ ಪ್ರಕಾರ ಆ.23 ಅಥವಾ 24ರಂದು ಚಂದ್ರನ ಮೇಲೆ ವ್ಯೋಮನೌಕೆ ಲ್ಯಾಂಡ್‌ ಆಗಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ನೌಕೆ ಲ್ಯಾಂಡ್‌ ಆಗುವಲ್ಲಿ ವೈಪರೀತ್ಯಗಳ ಕಾರಣ ವ್ಯತ್ಯಾಸವಾದರೂ ಆದರೆ, ಪರ್ಯಾಯ ಮಾರ್ಗಗಳನ್ನು ಇಸ್ರೋ ಕಂಡುಕೊಂಡಿದ್ದು, ಒಂದಿಲ್ಲೊಂದು ಪರ್ಯಾಯ ಸ್ಥಳಗಳಲ್ಲಿ ನೌಕೆಯ ಭೂಸ್ಪರ್ಶಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಸಾಕಷ್ಟುಇಂಧನ ವ್ಯವಸ್ಥೆಯನ್ನೂ ಲ್ಯಾಂಡರ್‌ಗೆ ಮಾಡಲಾಗಿದೆ. ಅದಕ್ಕೆಂದೇ ಮುಂಜಾಗ್ರತಾ ಕ್ರಮವಾಗಿ ‘ವೈಫಲ್ಯ ಆಧರಿತ ವಿನ್ಯಾಸ’ ಮಾಡಲಾಗಿದೆ.

ಈವರೆಗೆ ಯಾವುದೇ ಉಪಕರಣಗಳು ಹೋಗದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ನೌಕೆಯನ್ನು ಇಳಿಸುವ ಸಾಹಸಕ್ಕೆ ಮುಂದಾಗಿದೆ. ಚಂದ್ರನ ಅಧ್ಯಯನಕ್ಕೆ 2019ರ ಜು.22ರಂದು ಇಸ್ರೋ ಕೈಗೊಂಡಿದ್ದ ಚಂದ್ರಯಾನ-2 ಯೋಜನೆ ವಿಫಲವಾದ ಕಾರಣ ಮತ್ತೊಂದು ಚಂದ್ರಯಾನ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ.  ಚಂದ್ರನ ದಕ್ಷಿಣ ಧ್ರುವದಲ್ಲಿ ಉಷ್ಣಾಂಶ -230 ಡಿ.ಸೆ.ಗಿಂತ ಕಡಿಮೆ ಇದ್ದು, ಇಲ್ಲಿ ಬಹುಕಾಲ ದವರಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆಗಳು ಇರುವ ಅಂದಾಜಿದೆ. ಅಲ್ಲದೆ, 2008ರಲ್ಲಿ ಕೈಗೊಂಡ ಚಂದ್ರಯಾನ-1 ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂಬುದು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಳ್ಳ ಲಾಗಿದೆ. ಅಲ್ಲದೆ, ದಕ್ಷಿಣ ಧ್ರುವದಲ್ಲಿ ಈವರೆಗೂ ಬೆಳಕನ್ನೇ ಕಾಣದ ಹಲವು ಪ್ರದೇಶಗಳಿರುವ ಕಾರಣ ಇದು ವಿಜ್ಞಾನಿಗಳಲ್ಲಿ ಸಾಕಷ್ಟುಕುತೂಹಲ ಮೂಡಿಸಿದೆ.

ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ದೇವಸ್ಥಾನ ಭೇಟಿಗೆ ಪರ ವಿರೋಧ!

ಚಂದ್ರಯಾನದ ನೌಕೆ ಸಾಫ್ಟ್ ಲ್ಯಾಂಡಿಂಗ್ ಆದರೆ ಈ ಯಶಸ್ಸು ಕಂಡ ವಿಶ್ವದ 4ನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಈ ಮುಂಚೆ ಅಮೆರಿಕ, ಚೀನಾ ಹಾಗೂ ಸೋವಿಯತ್‌ ರಷ್ಯಾಗಳು ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಯಶ ಕಂಡಿದ್ದವು.

Follow Us:
Download App:
  • android
  • ios