ಫ್ರೆಂಚ್ ಫ್ರೈಸ್ ಹಲವರ ನೆಚ್ಚಿನ ತಿನಿಸು. ಇದೀಗ ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡಿದ್ದಾರೆ. ದಿಢೀರ್ ಮೋದಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡು ಹಂಗಾಮ ಸೃಷ್ಟಿಸಿದ್ದಾರೆ.

ನವದೆಹಲಿ (ಅ.30) ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದರೂ ಸಂಚಲನ ಸೃಷ್ಟಿಯಾಗುತ್ತದೆ. ಭಾರತದ ಪ್ರಗತಿ, ಅಭಿವೃದ್ಧಿ ಯೋಜನೆ, ಅಂತಾರಾಷ್ಟ್ರೀಯ ನಾಯಕರ ಭೇಟಿ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದರ ನಡುವೆ ಮೋದಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡಿದ್ದಾರೆ. ಇದು ಹಂಗಾಮ ಸೃಷ್ಟಿಸಿದೆ. ಮೋದಿ ದಿಢೀರ್ ಹಲವರ ನೆಚ್ಚಿನ ತಿನಿಸಾಗಿರುವ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡಿದ್ದೇಕೆ ಅನ್ನೋ ಪ್ರಶ್ನೆಗಳು ಮೂಡಿದೆ.

ಏನಿದು ಫ್ರೆಂಚ್ ಫ್ರೈಸ್ ಫೋಸ್ಟ್

ಪ್ರಧಾನಿ ಮೋದಿ ಗುಜರಾತ್‌ನ ಬನಾಸಕಾಂತ ಜಿಲ್ಲೆಯ ದಿಯೋದರ್ ತಾಲೂಕಿನ ಸನಾದರ್‌ನಲ್ಲಿನ ಬನಾಸ್ ಡೈರಿಯ ಬೃಹತ್ 'ಫ್ರೆಂಚ್ ಫ್ರೈಸ್' (French Fries) ಸಂಸ್ಕರಣಾ ಘಟಕದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫ್ರೆಂಚ್ ಫ್ರೈಸ್ ವಿಸ್ತರಣಾ ಘಚಕದ ಉದ್ಘಾಟನೆಯನ್ನು ಪ್ರಧಾನಿ ಮೋದಿ ವರ್ಚುವಲ್ ಆಗಿ ಮಾಡಿದ್ದಾರೆ. ಉದ್ಘಾಟನೆ ಬಳಿಕ ಘಟಕ ವಿಶೇಷತೆ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿ ಗಂಟೆಗೆ 5 ಟನ್ ಫ್ರೆಂಚ್ ಫ್ರೈಸ್

ಇದು ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಧುನಿ ಮಿಶನರಿ ಹೊಂದಿದ ಸಂಸ್ಕರಣಾ ಘಟಕವಾಗಿದೆ. ಇಲ್ಲಿನ ಮತ್ತೊಂದು ವಿಶೇಷತೆ ಅಂದರೆ ಪ್ರತಿ ಗಂಟೆಗೆ ಬರೋಬ್ಬರಿ 5 ಟನ್ ಫ್ರೆಂಚ್ ಫ್ರೈಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದೇಶದ ಅತೀ ದೊಡ್ಡ ಫ್ರೆಂಚ್ ಫ್ರೈಸ್ ಘಟಕ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮೇಡ್ ಇನ್ ಇಂಡಿಯಾ ಫ್ರೈಸ್

ಸುಮಾರು 51.65 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ಲಾಂಟ್‌ನ ವಿಸ್ತರಣೆ ಮತ್ತು ನವೀಕರಣ ಮಾಡಲಾಗಿದೆ. ಈ ಹಿಂದೆ ಗಂಟೆಗೆ 2 ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದ ಈ ಘಟಕವನ್ನು ಈಗ ಗಂಟೆಗೆ 5 ಟನ್‌ಗೆ ಏರಿಸಲಾಗಿದೆ. ಇನ್‌ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಕ್ಟರಿಯ ಹೈಟೆಕ್ ಯಂತ್ರಗಳ ಕಾರ್ಯವೈಖರಿಯ ಫೋಟೋಗಳನ್ನು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ರೈತರಿಂದ ನೇರವಾಗಿ ಫ್ಯಾಕ್ಟರಿಗೆ, ಮೇಡ್ ಇನ್ ಇಂಡಿಯಾ ಫ್ರೈಸ್ ಜಗತ್ತಿಗೆ ವಿತರಣೆಯಾಗಲಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಭಾರತದ ಅತೀ ಹೆಚ್ಚು ಆಲುಗಡ್ಡೆ ಬೆಳೆಯುವ ಪ್ರದೇಶದಲ್ಲಿ ಫ್ಯಾಕ್ಟರಿ

ಉತ್ತರ ಗುಜರಾತ್‌ನ ಬನಾಸಕಾಂತ ಜಿಲ್ಲೆಯು ಭಾರತದಲ್ಲಿಯೇ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುವಂತೆ ಮಾಡಲು ಬನಾಸ್ ಡೈರಿಯು 'ಕಾಂಟ್ರಾಕ್ಟ್ ಫಾರ್ಮಿಂಗ್' ಮತ್ತು ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸಿದೆ. ಇದರಿಂದ ಸ್ಥಳೀಯ ರೈತರಿಗೆ ತಮ್ಮ ಬೆಳೆ ಅಂತಾರಾಷ್ಟ್ಕೀಯ ಮಟ್ಟದಲ್ಲಿ ವಿತರಣೆಯಾಗುವ ಅವಕಾಶ ಸಿಕ್ಕಿದೆ. ಉತ್ತಮ ಬೆಲೆಯೊಂದಿಗೆ ರೈತರು ತಮ್ಮ ಆದಾಯಕ್ಕೂ ನೆರವಾಗಿದೆ.

ಬನಾಸ್ ಡೈರಿಯ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಹಲವು ಬಯೋ ಪ್ರಾಡಕ್ಟ್ ಕೂಡ ಉತ್ಪಾದಿಸುತ್ತಿದೆ. ಫ್ರೆಂಚ್ ಫ್ರೈಸ್ ತಯಾರಿಕಾ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಬಯೋ-ಸಿಎನ್‌ಜಿ (Bio-CNG) ಮತ್ತು ಜೈವಿಕ ಅನಿಲ ತಯಾರಿಕೆಗೆ ಬಳಸಲಾಗುತ್ತಿದೆ. ಅಲ್ಲದೆ, ಉಳಿದ ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿಸಲಾಗುತ್ತದೆ. ಈ ಗೊಬ್ಬರಗಳನ್ನು ರೈತರ ಜಮೀನುಗಳಿಗೆ ನೀಡಲಾಗುತ್ತದೆ.