4 ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಆದರೆ, ಆರೆಸ್ಸೆಸ್ ಭದ್ರಕೋಟೆಯಾದ ನಾಗ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ನಾಗ್ಪುರ ಇನ್ಮುಂದೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆಯಾ?

ದೆಹಲಿ (ಅ.29) ಕರ್ನಾಟಕ ಸೇರಿದಂತೆ ದೇಶದ ನಾಲ್ಕು ದೊಡ್ಡ ರಾಜ್ಯಗಳ 28 ವಿಧಾನ ಪರಿಷತ್ (MLC) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲನುಭವಿಸಿದೆ.

ಇನ್ನು ಮಹಾರಾಷ್ಟ್ರದ ಆರೆಸ್ಸೆಸ್ ಭದ್ರಕೋಟೆಯಾಗಿರುವ ನಾಗ್ಪುರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಅಚ್ಚರಿ ತರಿಸಿದ್ದಲ್ಲದೆ ಇದೀಗ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮುಂದಿನ ಎಲ್ಲಾ ಚುನಾವಣೆ ಬ್ಯಾಲೆಟ್‌ ಮೂಲಕವೇ ಮಾಡೋಣ: ವಿಧಾನ ಪರಿಷತ್ ಚುನಾವಣೆ ಸೋಲಿನ ಬಳಿಕ ಬಿಜೆಪಿಗೆ ಪ್ರಿಯಾಂಕ್ ಹೊಸ ಸವಾಲ್

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷ 12 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಒಬ್ಬ ಅಭ್ಯರ್ಥಿ ಮಾತ್ರ ಗೆದ್ದರು. ಅದೂ ಈ ಗೆಲುವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ಕ್ಷೇತ್ರದಲ್ಲೇ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ತವರು ಕ್ಷೇತ್ರ ಅಷ್ಟೇ ಅಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಭದ್ರಕೋಟೆಯಾಗಿರುವ ನಾಗ್ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಪಡೆದಿರುವುದು ಅಚ್ಚರಿ ಇದೆ. ಅಭಿಜೀತ್ ವಂಜಾರಿ ಎಂಬುವವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಅಭಿಜಿತ್ ವಂಜಾರಿ ಗೆಲುವು ಆರೆಸ್ಸೆಸ್‌ಗೆ ಶಾಕ್

ಅಭಿಜಿತ್ ವಂಜಾರಿ ಈ ಚುನಾವಣೆಯಲ್ಲಿ ನಾಗ್ಪುರ ಪದವೀಧರ ಎಂಎಲ್‌ಸಿ ಸ್ಥಾನವನ್ನು ಗೆಲ್ಲುವ ಮೂಲಕ ಒಂದು ರೀತಿಯಲ್ಲಿ ಕಾಂಗ್ರೆಸ್ ಮಾನ ಉಳಿಸಿದ್ದಾರೆ. ಏಕೆಂದರೆ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಒಬ್ಬರೂ ಗೆಲುವು ಪಡೆದಿಲ್ಲ. ಹೀಗಾಗಿ ನಾಗ್ಪುರ ಕ್ಷೇತ್ರ ಅದರಲ್ಲೂ ಆರೆಸ್ಸೆಸ್ ಭದ್ರಕೋಟೆ ಎನಿಸಿರುವ ಇಲ್ಲಿನ ಗೆಲುವು ಕಾಂಗ್ರೆಸ್‌ ಒಂದು ಕಡೆ ಹೊಸ ಭರವಸೆ ಮೂಡಿಸಿದೆ. ಅಂದಹಾಗೆ ಇದು ಅಭಿಜಿತ್ ವಂಜಾರಿ ಅವರ ಸತತ ಎರಡನೇ ಗೆಲುವು. 2020 ರ ಚುನಾವಣೆಯಲ್ಲಿ ನಾಗ್ಪುರ ಪದವೀಧರ ಕ್ಷೇತ್ರದ ಸ್ಥಾನವನ್ನು ಸಹ ವಂಜಾರಿ ಗೆದ್ದಿದ್ದರು!

ಇದನ್ನೂ ಓದಿ: ನವೆಂಬರ್ 1ರ ಕಾಂಗ್ರೆಸ್‌ನ ದೆಹಲಿ ಚಲೋ ರ್ಯಾಲಿ ಪ್ಲಾನ್ ಹಾಳುಮಾಡಿದ ವಿಧಾನಪರಿಷತ್ ಚುನಾವಣಾ ಫಲಿತಾಂಶ!

ಅಭಿಜಿತ್ ವಂಜಾರಿ ಯಾರು?

ಅಭಿಜಿತ್ ವಂಜಾರಿ ನಾಗ್ಪುರದ ರಾಜಕೀಯ ಕುಟುಂಬದಿಂದ ಬಂದವರು. ಅವರ ತಂದೆ ಗೋವಿಂದರಾವ್ ಮರೋತರಾವ್ ವಂಜಾರಿ ದಕ್ಷಿಣ ನಾಗ್ಪುರದಿಂದ ಎರಡು ಬಾರಿ ಶಾಸಕರಾಗಿದ್ದರು. ಅವರ ತಂದೆಯಿಂದ ಪ್ರಭಾವಿತರಾಗಿ ಅಭಿಜಿತ್ ಕೂಡ ರಾಜಕೀಯ ಪ್ರವೇಶಿಸಿದರು. ವಂಜಾರಿ ರಾಷ್ಟ್ರಸಂತ್ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಿಂದ ಬಿಎ ಪದವೀಧರಾಗಿ ನಂತರ ಅವರು ಕಾನೂನು ಪದವಿ ಪಡೆದರು. ಅವರು ನಾಗ್ಪುರ ವಿಶ್ವವಿದ್ಯಾಲಯದ ಸೆನೆಟ್ ಮತ್ತು ನಿರ್ವಹಣಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅಭಿಜೀತ್ ಅವರು ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ NSUI ನ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ನಂತರ ಅವರು ಮಹಾರಾಷ್ಟ್ರ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅಭಿಜೀತ್ ಉತ್ತರ ಪ್ರದೇಶ ಮತ್ತು ಬಿಹಾರದ ಕಾಂಗ್ರೆಸ್ ಚುನಾವಣಾ ವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಾಗ್ಪುರ ಇನ್ಮುಂದೆ ಬಿಜೆಪಿ ಅಲ್ಲ, ಕಾಂಗ್ರೆಸ್‌ನ ಭದ್ರಕೋಟೆ

ನಾಗ್ಪುರದಲ್ಲಿ ಸತತ ಎರಡೂ ಬಾರಿ ಗೆಲುವು ಪಡೆದು ಆತ್ಮವಿಶ್ವಾಸದಲ್ಲಿ ಪ್ರತಿಕ್ರಿಯಿಸಿರುವ ಅಭಿಜಿತ್, ನಾಗ್ಪುರ ಇನ್ಮುಂದೆ ಆರೆಸ್ಸೆಸ್ ಭದ್ರಕೋಟೆಯಾಗಿ ಇರುವುದಿಲ್ಲ. ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಲಿದೆ ಎಂದು ಭವಿಷ್ಯ ನುಡಿದರು.

ಆರು ವರ್ಷಗಳ ಹಿಂದೆ ಪದವೀಧರ ಕ್ಷೇತ್ರಕ್ಕೆ ಆಯ್ಕೆಯಾದಾಗ, ಅಲ್ಲಿ ಯಾವುದೂ ಸರಿಯಿರಲಿಲ್ಲ. ಪದವೀಧರರಿಗೆ ಪ್ರತ್ಯೇಕ ಕ್ಷೇತ್ರವಿದೆ. ಅಭಿಜಿತ್ ಆ ಕ್ಷೇತ್ರಕ್ಕೆ ಅನುಗುಣವಾಗಿ ಕೆಲಸ ಮಾಡಲು ಪ್ರಯತ್ನಿಸಿದರು. ಅವರು ಯುವಕರು ಮತ್ತು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದರು, ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದರು. ಇದು ಅವರು ಎರಡನೇ ಬಾರಿಯೂ ಚುನಾವಣೆ ಗೆಲ್ಲುವಲ್ಲಿ ಪ್ರಮುಖ ಕಾರಣವಾಯ್ತು.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೇಲಿ ಕಾಂಗ್ರೆಸ್ ಮುಖಭಂಗಕ್ಕೆ ಬೋಸರಾಜು ಹೇಳಿಕೆ ಸಂಚಲನ! ಕೊಪ್ಪಳ ಕಾಂಗ್ರೆಸ್‌ನಲ್ಲಿ ಬಿಕೆ ಹರಿಪ್ರಸಾದ್ ಫೋಟೋವೇ ಮಾಯ!

ಅಭಿಜಿತ್ ವಂಜಾರಿ ಹೇಳುವಂತೆ, ನಾಗ್ಪುರ ಇನ್ನು ಮುಂದೆ ಬಿಜೆಪಿಯ ಭದ್ರಕೋಟೆಯಲ್ಲ. ಇದು ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿಯುತ್ತದೆ. ದೇಶ ಮತ್ತು ರಾಜ್ಯದ ಯುವಕರು ಕಾಂಗ್ರೆಸ್ ಪಕ್ಷದೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ ಎಂಬುದನ್ನು ಪದವೀಧರ ಮತದಾರರ ಸಂಘ ಮತ್ತೊಮ್ಮೆ ತೋರಿಸಿಕೊಟ್ಟಿದೆ ಎಂದರು. ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ಹೊಗಳಿದ ಅಭಿಜಿತ್ ವಂಜಾರಿ, ಕಳೆದ ಕೆಲವು ವರ್ಷಗಳಿಂದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರು ಒಗ್ಗೂಡಿಸುವ, ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ದೇಶದ ಯುವಕರು ರಾಹುಲ್ ಗಾಂಧಿಯತ್ತ ಒಲವು ತೋರಿಸುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.