ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಲು ನಿರ್ಧರಿಸಿದ್ದು, ಪರಿಷ್ಕೃತ ದರವು ನವೆಂಬರ್ 1ರಿಂದ ಜಾರಿಗೆ ಬರಲಿದೆ. ಹೆಚ್ಚಿಸಿದ ಮೊತ್ತದಲ್ಲಿ 7 ರೂಪಾಯಿ ಹಾಲು ಉತ್ಪಾದಕ ರೈತರಿಗ, 1 ರೂಪಾಯಿ ಕೆಎಂಎಫ್‌ಗೆ ಸಿಗಲಿದೆ. ಹೊಸ ಹಾಲಿನ ದರದ ಪಟ್ಟಿ ಇಲ್ಲಿದೆ.

ಬೆಂಗಳೂರು (ಅ.30): ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು.ಹೆಚ್ಚಿಸಲು ನಿರ್ಧರಿಸಿದ್ದು ಪರಿಷ್ಕೃತ ದರ ನ.1ರಂದು ಜಾರಿಗೆ ಬರಲಿದೆ. ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ಹೊಸದರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡುವಾಗಿ ಕೆಎಂಎಫ್‌ ಮೂಲಗಳು ಮಾಹಿತಿ ನೀಡಿವೆ.

16 ಹಾಲು ಒಕ್ಕೂಟಗಳು ಪರಿಷ್ಕೃತ ದರಪಟ್ಟಿ ಇಲ್ಲಿದೆ

16 ಹಾಲು ಒಕ್ಕೂಟಗಳು ಪರಿಷ್ಕೃತ ದರದಂತೆ ಹಾಲು ಉತ್ಪಾದಕರಿಗೆ ನ.1ರಿಂದ 7 ರು.ಹೆಚ್ಚುವರಿ ಹಣ ಸೇರಿಸಿ ಕೊಡಬೇಕಿದೆ. ವಿವಿಧ ಒಕ್ಕೂಟಗಳಿಂದ ರೈತರಿಗೆ ಪ್ರತೀ ಲೀಟರ್ ಹಾಲಿಗೆ ಸಿಗುವ ದರ ಇಂತಿದೆ.

  • ದಕ್ಷಿಣ ಕನ್ನಡ ಹಾಲು ಒಕ್ಕೂಟ (DKMUL) 47.10 ರು.(ಪ್ರಸ್ತುತ ದರ- 40.10 ರು.), ಬಮೂಲ್‌ 43.15 ರು. (36.15 ರು.).
  • ಮೈಮೂಲ್‌ 43.10 ರು.( 36.10 ರು.).
  • ತುಮೂಲ್‌ 43 ರು. (36 ರು.).
  • ಚಿಮೂಲ್‌ 42.40 ರು. (35.40 ರು.).
  • ಕೊಮೂಲ್‌ 42.20 ರು.(35.40 ರು.).
  • ಮನ್‌ಮೂಲ್‌ 42.30 ರು. (35.30 ರು.).
  • ಚಮೂಲ್‌ 42.20 ರು. (35.20 ರು.).
  • ಧಮೂಲ್‌ 42 ರು. (35 ರು.).
  • ಹಾಮೂಲ್‌ 41.50 ರು. (34.50 ರು.).
  • ಹಾವೆಮೂಲ್‌ 41.50 ರು.(34.50 ರು.).
  • ಕಲಬುರಗಿ-ಬೀದರ್‌-ಯಾದಗಿರಿ ಒಕ್ಕೂಟ (ಕೆಬಿವೈ ಮೂಲ್‌) 41.41 ರು. (34.41 ರು.).
  • ಶಿಮೂಲ್‌ 41.21 ರು. (34.21 ರು.).
  • ಆರ್‌ಬಿಕೆವಿಮೂಲ್‌ 41.10 ರು.(34.10 ರು.).
  • ಬೆಳಗಾವಿ- ಬೆಮೂಲ್‌ 41 ರು. (34 ರು.).

ವಿಮೂಲ್‌ 40.40ರು (33.40 ರು) ನಂತೆ ಡೈರಿ ಕೋಆಪರೇಟಿವ್‌ ಸೊಸೈಟಿಗಳು ಹಾಲು ಉತ್ಪಾದಕರಿಗೆ ಹಣ ನೀಡಲಿವೆ. ಅಂದರೆ ಸರಾಸರಿ ಹಾಲು ಉತ್ಪಾದಕರಿಗೆ ಲೀಟರ್‌ ಹಾಲಿಗೆ 42.24 ರು. ಸಿಗಲಿದೆ. ಇದರೊಂದಿಗೆ ರಾಜ್ಯ ಸರ್ಕಾರವು ಪ್ರತೀ ಲೀ. ಹಾಲಿಗೆ ನೀಡುವ ಪ್ರೋತ್ಸಾಹ ಧನ 5 ರು.ಕೂಡ ಸೇರಲಿದೆ.

7 ರೂಪಾಯಿ ರೈತರಿಗೆ 1 ರೂಪಾಯಿ ಕೆಎಂಎಫ್‌ಗೆ

ರಾಜ್ಯ ಸಚಿವ ಸಂಪುಟವು ಪ್ರತಿ ಲೀಟರ್‌ ಹಾಲಿನ ದರವನ್ನು 8 ರು.ಹೆಚ್ಚಿಸಿದ್ದು ಈ ಪೈಕಿ 7 ರು. ಹಾಲು ಉತ್ಪಾದಕರಿಗೆ ಮತ್ತು 1 ರು. ಕೆಎಂಎಫ್‌ಗೆ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ದರ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ಕೆಎಂಎಫ್‌ ಅಧಿಕಾರಿಗಳು ನಿರತರಾಗಿದ್ದು ಶುಕ್ರವಾರ ಹೊಸ ದರಪಟ್ಟಿ ಪ್ರಕಟಿಸಲಿದ್ದಾರೆ.