ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ್ ಮತ್ತು ಪಹಲ್ಗಾಂ ದಾಳಿ ಕುರಿತು ಚರ್ಚೆಗಳು ನಡೆಯುತ್ತಿವೆ. ಸಂಸದ ಅಖಿಲೇಶ್ ಯಾದವ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದಾಳಿಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ನವದೆಹಲಿ: ಇಂದಿನ ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ (Operation Sindoor) ಮತ್ತು ಪಹಲ್ಗಾಂ ದಾಳಿ (Pahlagam Attack) ಕುರಿತು ಚರ್ಚೆಗಳು ನಡೆಯುತ್ತಿವೆ. ಅಧಿವೇಶನ ಆರಂಭಕ್ಕೂ ಮುನ್ನ ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ (MP Akhilesh yadav), ಮೋದಿ ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಅಖಿಲೇಶ್ ಯಾದವ್, ಆಪರೇಷನ್ ಸಿಂದೂರ್ ನಡೆಸಿದ ಸೇನಾಪಡೆ ಕಾರ್ಯವನ್ನು ಕೊಂಡಾಡಿದರು. ನಂತರ ಕೇಂದ್ರ ಸರ್ಕಾರ (Modi Government) ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಒಂದಾದ ನಂತರ ಒಂದಂರಂತೆ ಭಯೋತ್ಪಾದಕ ದಾಳಿ ನಡೆಯುತ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿದರು.
ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಆಪರೇಷನ್ ಸಿಂದೂರ ಕಾರ್ಯಚರಣೆ ನಡೆಸಿರುವ ನಮ್ಮ ವೀರ ಯೋಧರಿಗೆ ಸಲಾಂ ಮಾಡುತ್ತೇವೆ. ಒಂದು ವೇಳೆ ಸೈನಿಕರಿಗೆ ಅವಕಾಶ ನೀಡಿದ್ರೆ ಅವರು ಪಿಓಕೆ ತಲುಪುತ್ತಿದ್ದರು. ಪಹಲ್ಗಾಂ ದಾಳಿಗೂ ಮುನ್ನ ಆ ಸ್ಥಳದಲ್ಲಿ ಏನು ನಡೆಯಿತು ಎಂಬದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಉತ್ತರ ನೀಡಬೇಕು: ಅಖಿಲೇಶ್ ಆಗ್ರಹ
ಪಹಲ್ಗಾಂ ದಾಳಿ ಮತ್ತು ಆಪರೇಷನ್ ಸಿಂದೂರ ಕಾರ್ಯಚರಣೆ ಎರಡೂ ಪ್ರತ್ಯೇಕ ವಿಷಯಗಳು ಎಂದು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಪಹಲ್ಲಾಂ ದಾಳಿ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಪ್ರಶ್ನೆ ಮಾಡಿದ್ರೆ ಯೋಧರನ್ನು ಅವಮಾನಿಸಿದಂತೆ ಅಲ್ಲ. ದಾಳಿ ನಡೆದು ಇಷ್ಟು ದಿನವಾದರೂ ದಾಳಿ ನಡೆಸಿದ ಉಗ್ರರು ಎಲ್ಲಿದ್ದಾರೆ ಎಂಬವುದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಪಹಲ್ಗಾಂ ದಾಳಿಗೂ ಮುನ್ನ ಒಂದು ದೊಡ್ಡ ಘಟನೆ ನಡೆದಿದೆ. ಈ ಕುರಿತು ದೇಶದ ಜನತೆಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಪ್ರಶ್ನೆ ಮುನ್ನಲೆಗೆ ಬರುತ್ತಿರೋದು ಯಾಕೆ ಎಂದು ಸಮಾಜವಾದಿ ಪಕ್ಷದ ಸಂಸದ ಯಾದವ್ ಪ್ರಶ್ನೆ ಮಾಡಿದರು.
ಉಗ್ರರು ಎಲ್ಲಿಂದ ಬಂದರು? ನಾಪತ್ತೆಯಾಗಿದ್ದು ಹೇಗೆ?
ಪಹಲ್ಗಾಂ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಎಲ್ಲಿಂದ ಬಂದರು? ನಂತರ ಈ ದಾಳಿ ಬಳಿಕ ಎಲ್ಲಿ ಹೋದರು? ಉಗ್ರರು ಕಣ್ಮರೆಯಾಗಿದ್ದು ಹೇಗೆ? ಈ ಪ್ರಶ್ನೆಗಳಿಗೆ ಮೋದಿ ಸರ್ಕಾರ ಉತ್ತರ ನೀಡಬೇಕಿದೆ. ಗಡಿಯಲ್ಲಿ ದೊಡ್ಡಮಟ್ಟದ ಸುರಕ್ಷತೆಯುನ್ನು ಭಾರತ ಹೊಂದಿದ್ದರೂ ದೇಶದೊಳಗೆ ನುಸಳಿದ್ದು ಹೇಗೆ? ಬಂದವರು ವಾಪಸ್ ಹೋಗಿದ್ದೆಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೇಳುತ್ತಾರೆ.
ಕೆಲವು ಮಾಹಿತಿಯ ಮೂಲ ಹೊಂದಿರಬಹುದು
ಪಹಲ್ಗಾಮ್ ದಾಳಿಯ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂಬ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿಕೆಗೆ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದರು. ಈ ಹಿಂದೆ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಇಲ್ಲದ ಮಾಹಿತಿ ಚಿದಂಬರಂ ಅವರ ಬಳಿಯಲ್ಲಿರಬಹುದು. ಚಿದಂಬರಂ ಅವರು ಕೆಲವು ಮಾಹಿತಿಯ ಮೂಲಗಳನ್ನು ಹೊಂದಿರುವ ಸಾಧ್ಯತೆಯಿದೆ. ಆದರೆ ಇಂದಿನ ಪ್ರಶ್ನೆಯಂದ್ರೆ ಸರ್ಕಾರ ದೇಶಕ್ಕೆ ಸತ್ಯವನ್ನು ಹೇಳಬೇಕಿದೆ ಎಂದರು.
