ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ದೋವಲ್ ಮಾತನಾಡುತ್ತಿದ್ದರು.
ನವದೆಹಲಿ (ಜು.11): ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದನ್ನು ಟೀಕಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತದ ಯಾವುದೇ ಪ್ರದೇಶಗಳಿಗೆ ಆಗಿರುವ ಹಾನಿಯ ಒಂದೇ ಒಂದು ಚಿತ್ರವನ್ನು ಸಹ ಇವರುಗಳು ತೋರಿಸಲು ಸಾಧ್ಯವಿಲ್ಲಎಂದು ಹೇಳಿದರು. ನಿರ್ದಿಷ್ಟವಾಗಿ ನ್ಯೂಯಾರ್ಕ್ ಟೈಮ್ಸ್ ಅನ್ನು ಹೆಸರಿಸಿದ ಅಜಿತ್ ಧೋವಲ್, "ಅವರು ಕೆಲವೊಂದು ವಿಷಯಗಳನ್ನು ಬರೆದಿದ್ದಾರೆ. ನ್ಯೂಯಾರ್ಕ್ ಟೈಮ್ಸ್. ಆದರೆ ಚಿತ್ರಗಳಲ್ಲಿ ಅವರು ಮೇ 10 ರ ಮೊದಲು ಮತ್ತು ನಂತರ ಪಾಕಿಸ್ತಾನದ 13 ವಾಯುನೆಲೆಗಳನ್ನು ತೋರಿಸಿವೆ..." ಎಂದು ಹೇಳಿದರು.
ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ್ ಸಮಯದಲ್ಲಿ ವ್ಯಾಪಕವಾಗಿ ಬಳಸಲಾದ ಭಾರತದ ಸ್ಥಳೀಯ ತಂತ್ರಜ್ಞಾನದ ಪರಾಕ್ರಮವನ್ನು ಶ್ಲಾಘಿಸಿದರು.
"ಅಲ್ಲಿ ಎಷ್ಟೊಂದು ಸ್ಥಳೀಯ ಸಾಮಗ್ರಿಗಳಿದ್ದವು ಎಂಬುದರ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ. ಬ್ರಹ್ಮೋಸ್‌ನಿಂದ ರಾಡಾರ್‌ಗಳವರೆಗೆ, ನಾವು ಸಂಪೂರ್ಣವಾಗಿ ಭಾರತೀಯ ಯುದ್ಧ ಸಾಮಗ್ರಗಳನ್ನು ಬಳಸಿದ್ದೇವೆ. ಪಾಕಿಸ್ತಾನದಾದ್ಯಂತ 9 ಭಯೋತ್ಪಾದಕ ಗುರಿಗಳನ್ನು ಟಾರ್ಗೆಟ್ ಮಾಡಲು ನಾವು ನಿರ್ಧರಿಸಿದ್ದೆವು. ಯಾವುದೂ ಕೂಡ ನಮ್ಮಿಂದ ತಪ್ಪಿಸಿಕೊಂಡಿಲ್ಲ. ಅದನ್ನು ಹೊರತುಪಡಿಸಿ ನಾವು ಬೇರೆಲ್ಲಿಯೂ ದಾಳಿ ಮಾಡಿಲ್ಲ." ಎಂದು ಹೇಳಿದ್ದಾರೆ.
"ನಾವು ಒಂದು ದೇಶಕ್ಕೆ ಸೇರಿದವರು, ಸಾವಿರ ವರ್ಷಗಳಿಂದ ತೊಂದರೆಗೊಳಗಾದ, ರಕ್ತಸಿಕ್ತ, ಅವಮಾನಕ್ಕೊಳಗಾದ ನಾಗರಿಕತೆಗೆ ಸೇರಿದವರು. ನಾವು ಬಹಳಷ್ಟು ಅನುಭವಿಸಿದ್ದೇವೆ. ನಮ್ಮ ಪೂರ್ವಜರು ಅನುಭವಿಸಿದ್ದಾರೆ. ನಮ್ಮ ಪಿತೃಗಳು ಕೂಡ ಇದನ್ನು ಎದುರಿಸಿದ್ದಾರೆ. ಈ ನಾಗರಿಕತೆಯನ್ನು ಜೀವಂತವಾಗಿಡಲು, ಈ ರಾಷ್ಟ್ರದ ಕಲ್ಪನೆಯನ್ನು ಜೀವಂತವಾಗಿಡಲು ಅವರು ಎಷ್ಟು ಅವಮಾನ, ಕಷ್ಟಗಳನ್ನು ಅನುಭವಿಸಿದ್ದಾರೆಂದು ನನಗೆ ತಿಳಿದಿಲ್ಲ" ಎಂದು ಅಜಿತ್ ಧೋವಲ್ ಹೇಳಿದ್ದಾರೆ.
ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವ ಕಾರ್ಯತಂತ್ರದ ಮಹತ್ವವನ್ನು ದೋವಲ್ ಒತ್ತಿ ಹೇಳಿದರು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಮತ್ತು ದತ್ತಾಂಶ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ತನ್ನ ಸಂವಹನ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ದೇಶೀಯಗೊಳಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬಾಹ್ಯ ಬೆದರಿಕೆಗಳನ್ನು ಎದುರಿಸಲು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ಬಲಪಡಿಸಲು ಈ ಉಪಕ್ರಮ ಅತ್ಯಗತ್ಯ ಎಂದು ಅವರು ಗುರುತಿಸಿದರು. ಹೆಚ್ಚುವರಿಯಾಗಿ, ದೋವಲ್ ಕೃತಕ ಬುದ್ಧಿಮತ್ತೆಯ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು, ಇದನ್ನು "ಗೇಮ್-ಚೇಂಜರ್" ಎಂದು ಉಲ್ಲೇಖಿಸಿದರು ಮತ್ತು ವಿದೇಶಿ ಮೂಲಗಳನ್ನು ಅವಲಂಬಿಸದೆ ಭಾರತವು ಉದಯೋನ್ಮುಖ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
"5G ಅಭಿವೃದ್ಧಿಪಡಿಸಲು ಚೀನಿಯರು 12 ವರ್ಷಗಳನ್ನು ತೆಗೆದುಕೊಂಡು 300 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದಾರೆ. ನಮ್ಮಲ್ಲಿ ಆ ಸಮಯವೂ ಇಲ್ಲ, ಹಣವೂ ಇಲ್ಲ. ಕೇವಲ ಎರಡೂವರೆ ವರ್ಷಗಳಲ್ಲಿ, ನಾವು ಸ್ಥಳೀಯ ಪರ್ಯಾಯವನ್ನು ಸೃಷ್ಟಿಸಿದ್ದೇವೆ. ಈ ಸಾಧನೆಗೆ ನಾವು ನಮ್ಮ ಖಾಸಗಿ ವಲಯಕ್ಕೆ ಋಣಿಯಾಗಿದ್ದೇವೆ" ಎಂದು ಅವರು ಹೇಳಿದರು.
