ಸೈನಿಕರ ಕುಟುಂಬಗಳಿಗೆ ಉಚಿತ ಕಾನೂನು ನೆರವು ನೀಡಲು ಸರ್ಕಾರ ಮುಂದಾಗಿದೆ. ಭೂ ವ್ಯಾಜ್ಯ, ಕೌಟುಂಬಿಕ ಕಲಹಗಳಂತಹ ವಿಷಯಗಳಲ್ಲಿ ಯೋಧರಿಗೆ ಉಚಿತ ನೆರವು ದೊರೆಯಲಿದೆ. ಈ ಯೋಜನೆಯನ್ನು ನ್ಯಾ. ಸೂರ್ಯಕಾಂತ್ ಅವರು ರೂಪಿಸಿದ್ದಾರೆ.

ನವದೆಹಲಿ: ದೇಶಸೇವೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ, ಅವರ ಪರಿವಾರಗಳಿಗೆ ಉಚಿತವಾಗಿ ಕಾನೂನು ನೆರವನ್ನು ಕೊಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಲ್ಸಾ)ವು ವೀರ ಪರಿವಾರ ಸಹಾಯತಾ ಯೋಜನೆ 2025 ಅಡಿಯಲ್ಲಿ ಹಾಲಿ ಮತ್ತು ನಿವೃತ್ತ ಯೋಧರಿಗೆ ಭೂ ವ್ಯಾಜ್ಯ, ಕೌಟುಂಬಿಕ ಕಲಹ ಮೊದಲಾದ ವಿಷಯಗಳಲ್ಲಿ ಉಚಿತ ಕಾನೂನು ಸೇವೆ ನೀಡಲಿದೆ.

ನ್ಯಾ.ಸೂರ್ಯಕಾಂತ್ ಕನಸು:

ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರದ ವೇಳೆ ಭಾರತೀಯ ಸೈನಿಕರು ತೋರಿದ ಶೌರ್ಯ ಸಾಹಸ, ಬಲಿದಾನಗಳಿಂದ ಪ್ರಭಾವಿತರಾದ, ನಾಲ್ಸಾದ ಕಾರ್ಯಾಧ್ಯಕ್ಷರೂ ಆದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ನ್ಯಾ| ಸೂರ್ಯಕಾಂತ್ ಅವರು, ಯೋಧರ ಪರಿವಾರಗಳಿಗೆ ನೆರವಾಗಲು ಈ ಯೋಜನೆಯ ಯೋಚನೆ ಮಾಡಿದ್ದರು. ಈ ಮೂಲಕ, ದೇಶ ಕಾಯುವ ಯೋಧರ ಕೈ ಹಿಡಿಯಲು ನ್ಯಾಯಾಂಗವು ಮುಂದಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಈ ಯೋಜನೆಯನ್ನು 2025ರ ನ.24ರಂದು ನ್ಯಾ। ಕಾಂತ್ ಅವರು ಮುಖ್ಯ ನ್ಯಾಯಮೂರ್ತಿಯ ಹುದ್ದೆಗೆ ಎರುವ ಮುನ್ನ ಜಾರಿಗೆ ತರಲಾಗುವುದು.

ಉಪಯೋಗವೇನು?: ವರ್ಷದಲ್ಲಿ ಹಲವು ತಿಂಗಳು ಮನೆಯಿಂದ ದೂರವಿರುವ ಸೈನಿಕರ, ಭೂಮಿ, ಆಸ್ತಿ, ಕೌಟುಂಬಿಕ ಬಿಕ್ಕಟ್ಟುಗಳಂತಹ ಸಮಸ್ಯೆಗಳು ಕಾನೂನು ಪ್ರಕ್ರಿಯೆಗಳಿಗೆ ಒಳಗಾಗಿದ್ದರೆ, ಬೇಕೆಂದಾಗ ಊರಿಗೆ ಮರಳಲಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಯೋಧರ ಕುಟುಂಬಕ್ಕೆ ಸೂಕ್ತ ರೀತಿಯ ಕಾನೂನು ನೆರವು ಸಿಕ್ಕಿರುವುದಿಲ್ಲ. ಹೀಗಿರುವಾಗ, ಅಂಥವರ ಅನುಕೂಲಕ್ಕಾಗಿ ನಾಲ್ಸಾ ಅವರ ನೆರವಿಗೆ ಬಂದು, ಸುಗಮ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಸೌಲಭ್ಯವು ಬಿಎಸ್‌ಎಫ್, ಸಿಆರ್ ಪಿಎಫ್, ಐಟಿಬಿಪಿ ಸೇರಿದಂತೆ ಅರೆಸೇನಾಪಡೆಗಳಲ್ಲಿರುವವರಿಗೂ ಲಭಿಸುತ್ತದೆ.

ಯೋಧರ ಗೌರವಿಸಲು 3 ಯೋಜನೆ

ದ್ರಾಸ್ (ಕಾರ್ಗಿಲ್):1999ರ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿ ಭಾರತೀಯ ಯೋಧರು ವಿಜಯಧ್ವಜ ಹಾರಿಸಿದ ವಿಜಯ ದಿವಸದಂದು, ಆ ಸೈನಿಕರಿಗೆ ಗೌರವ ಅರ್ಪಿಸುವ ಸಲುವಾಗಿ 3 ಯೋಜನೆಗಳನ್ನು ಆರಂಭಿಸಲಾಗಿದೆ. ಮೂರೂ ರಕ್ಷಣಾಪಡೆಗಳ ಮುಖ್ಯಸ್ಥ ಜ/ಅನಿಲ್ ಚೌಹಾಣ್ ಅವರು ಶನಿವಾರ ಇವುಗಳಿಗೆ ಚಾಲನೆ ನೀಡಿದ್ದಾರೆ. ತ್ಯಾಗ-ಬಲಿದಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ದೇಶಭಕ್ತಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ 3 ಯೋಜನೆ ಶುರು ಮಾಡಲಾಗಿದೆ.

  • ಕಾರ್ಗಿಲ್ ಕದನದ ವೇಳೆ ವೀರಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು 'ಇ-ಶ್ರದ್ಧಾಂಜಲಿ' ಪೋರ್ಟಲ್
  • 1999ರ ಯುದ್ಧದ ವೇಳೆ ನಡೆದ ರೋಮಾಂಚನಕಾರಿ ಘಟನೆಗಳನ್ನು ಧ್ವನಿ ರೂಪದಲ್ಲಿ ಒದಗಿಸುವ ಕ್ಯುಆರ್ ಕೋಡ್ ಆಧರಿತ ಆ್ಯಪ್
  • ಸೈನಿಕರು ಎಂತಹ ಪರಿಸ್ಥಿತಿಯಲ್ಲಿ ಗಡಿ ಕಾಯುತ್ತಿರುತ್ತಾರೆ ಎಂಬುದನ್ನು ಜನಸಾಮಾನ್ಯರಿಗೆ ತೋರಿಸಲು, ಬಟಾಲಿಕ್ ಸೆಕ್ಟರ್‌ನಲ್ಲಿರುವ ಎಲ್‌ಬಿಸಿ ಗಡಿಯವರೆಗೆ ಸಾರ್ವಜನಿಕರಿಗೆ ಪ್ರವಾಸ ಕರೆದೊಯ್ಯುವ ಯೋಜನೆ

'ಆಪರೇಷನ್ ಸಿಂದೂರ' ಇನ್ನು ಮಕ್ಕಳಿಗೆ ಪಠ್ಯ!

ನವದೆಹಲಿ: ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ಇದೀಗ ಆ ಕಾರ್ಯಾಚರಣೆಗೆ ಸಂಬಂಧಿಸಿದಂತೆ 2 ಕಿರುಹೊತ್ತಿಗೆಗಳನ್ನು ಸಿದ್ಧಪಡಿಸುತ್ತಿದೆ. 3ರಿಂದ

8ನೇ ತರಗತಿ ಮತ್ತು 9 ರಿಂದ 12ನೇ ತರಗತಿಯ ಮಕ್ಕಳಿಗೆ 8-10 ಪುಟಗಳ ಪ್ರತ್ಯೇಕ ಪುಸ್ತಕಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಪಾಕ್ ಉಗ್ರರು ಪಹಲ್ಗಾಂನಲ್ಲಿ ಅಮಾಯಕರನ್ನು ಅಮಾನವೀಯವಾಗಿ ಕೊಂದದ್ದಕ್ಕೆ ಪ್ರತೀಕಾರವಾಗಿ ಭಾರತ ಅಪರೇಷನ್ ಸಿಂದೂರದ ಹೆಸರಲ್ಲಿ ನಿಖರ ದಾಳಿ ನಡೆಸಿ, ಜತೆಗೆ ರಾಜತಾಂತ್ರಿಕ ಮಾರ್ಗದ ಮೂಲಕವೂ ಪಾಕ್‌ಗೆ ಬುದ್ದಿ ಕಲಿಸಿದ ಸಾಹಸವನ್ನು ವಿವರಿಸಲಾಗುತ್ತದೆ.