ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರದ 'ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ'ಯನ್ನು ಜಗತ್ತಿಗೆ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ (ಮೇ.6) : ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರದ 'ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ'ಯನ್ನು ಜಗತ್ತಿಗೆ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾ, 'ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಕ್ರೂರ ಹತ್ಯೆಗೆ ಆಪರೇಷನ್ ಸಿಂಧೂರ್ ಮೂಲಕ ಭಾರತ ಕಠಿಣವಾಗಿ ಪ್ರತಿದಾಳಿ ನಡೆಸಿದೆ. ಭಾರತದ ಗಡಿಗಳು, ಸೇನೆ, ಮತ್ತು ನಾಗರಿಕರಿಗೆ ಸವಾಲು ಹಾಕುವವರಿಗೆ ಇದು ಸೂಕ್ತ ಪ್ರತ್ಯುತ್ತರವಾಗಿದೆ' ಎಂದರು.

ರಾಜ್ಯಗಳಿಗೆ ಅಮಿತ್ ಶಾ ಸೂಚನೆ ಏನು?
 ಎಲ್ಲಾ ರಾಜ್ಯಗಳು ಅಣಕು ಭದ್ರತಾ ಕವಾಯತುಗಳನ್ನು ನಡೆಸಿ, ಆಸ್ಪತ್ರೆಗಳು, ಅಗ್ನಿಶಾಮಕ ದಳ ಸೇರಿದಂತೆ ಅಗತ್ಯ ಸೇವೆಗಳ ಸುಗಮ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಬೇಕು. ಎಸ್‌ಡಿಆರ್‌ಎಫ್, ನಾಗರಿಕ ರಕ್ಷಣಾ ಪಡೆ, ಗೃಹರಕ್ಷಕ ದಳ, ಎನ್‌ಸಿಸಿ ಮತ್ತು ಇತರರನ್ನು ಸನ್ನದ್ಧವಾಗಿರಿಸಿಕೊಳ್ಳಬೇಕು ಎಂದು ಸೂಚಿಸಿದರು. ಸ್ಥಳೀಯ ಆಡಳಿತ, ಸೇನೆ, ಮತ್ತು ಅರೆಸೈನಿಕ ಪಡೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಇದನ್ನೂ ಓದಿ: operation sindoor: ವಿಮಾನ ನಿಲ್ದಾಣ ಕ್ಲೋಸ್, ಕೊಲ್ಲಿಯಿಂದ ಬರುವ ಫ್ಲೈಟ್ ಕ್ಯಾನ್ಸಲ್, ಕೆಲವು ಬೇರೆಡೆ ವಾಪಸ್!

ಸಾಮಾಜಿಕ ಮಾಧ್ಯಮದ ಮೇಲೆ ನಿಗಾ:
 ರಾಷ್ಟ್ರವಿರೋಧಿ ಪ್ರಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಮತ್ತು ರಾಜ್ಯ ಸರ್ಕಾರಗಳು ಕೇಂದ್ರ ಸಂಸ್ಥೆಗಳೊಂದಿಗೆ ಸಮನ್ವಯದಿಂದ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಶಾ ತಿಳಿಸಿದರು. ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕರು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡ ಪ್ರಯತ್ನಗಳನ್ನು ಮಾಡಬೇಕು ಎಂದರು.

ಆಪರೇಷನ್ ಸಿಂಧೂರ್ ವಿವರ: 
ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ 9 ಭಯೋತ್ಪಾದಕ ನೆಲೆಗಳ ಮೇಲೆ ಗುರಿಯಿಟ್ಟು ನಡೆದ ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರೆಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ನಿಯಂತ್ರಣ ರೇಖೆಯುದ್ದಕ್ಕೂ ನಾಗರಿಕ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, 3 ಜನ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: 'Abhi picture baki hai…' ಆಪರೇಷನ್ ಸಿಂಧೂರ್ ನಂತರ ಪಾಕ್‌ಗೆ ಮತ್ತೆ ಶಾಕ್ ಕೊಟ್ಟ ಮಾಜಿ ಸೇನಾ ಮುಖ್ಯಸ್ಥ!

ಪಹಲ್ಗಾಮ್ ದಾಳಿಯ ನಂತರ, ಭಾರತವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಗಳ ಒಳಗೆ ದೇಶ ತೊರೆಯಲು ಸೂಚಿಸಲಾಗಿದೆ. ಅಟ್ಟಾರಿ ಗಡಿಯನ್ನು ಮುಚ್ಚಲಾಗಿದೆ ಮತ್ತು ಪಾಕಿಸ್ತಾನದ ರಾಜತಾಂತ್ರಿಕರನ್ನು ಹೊರಹಾಕಲಾಗಿದೆ. 

ಭಾರತವು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವ ಸಂಕಲ್ಪವನ್ನು ಮುಂದುವರಿಸಲಿದೆ ಎಂದು ಶಾ ಸ್ಪಷ್ಟಪಡಿಸಿದ್ದಾರೆ. ಒಬ್ಬ ಭಯೋತ್ಪಾದಕನನ್ನೂ ಬಿಡುವುದಿಲ್ಲ' ಎಂದು ಅವರು ಗುಡುಗಿದ್ದಾರೆ.