ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತ ನಡೆಸಿದ ವಾಯು ದಾಳಿಯನ್ನು ಶ್ಲಾಘಿಸಿದ ಚಂದನ್ ಶೆಟ್ಟಿ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ, ಅವರ ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ (ಮೇ.6): 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ರಾಜಕೀಯ ವಲಯದಿಂದಷ್ಟೇ ಅಲ್ಲದೇ ಸಿನಿಮಾ ತಾರೆಯರು ಸಹ ತೀವ್ರ ಪ್ರತಿಕ್ರಿಯೆಗಳು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗದ ಖ್ಯಾತ ರ್ಯಾಪರ್ ಮತ್ತು ನಟ ಚಂದನ್ ಶೆಟ್ಟಿ ಅವರು ಹುಬ್ಬಳ್ಳಿಯಲ್ಲಿ ಎರಡು ಪ್ರಮುಖ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಂದು, ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತ ನಡೆಸಿದ ವಾಯು ದಾಳಿಯ ಬಗ್ಗೆ, ಮತ್ತೊಂದು, ಗಾಯಕ ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯ ಕುರಿತು. ಇಲ್ಲಿದೆ ಪೂರ್ಣ ವಿವರ.
ಪಾಕಿಸ್ತಾನಕ್ಕೆ ಚಂದನ್ ಶೆಟ್ಟಿ ಎಚ್ಚರಿಕೆ:
ಉಗ್ರರ ಅಡಗುದಾಣಗಳ ಮೇಲೆ ವಾಯು ದಾಳಿ ನಡೆಸಿರೋದು ನಮಗೆಲ್ಲ ಹೆಮ್ಮೆ ವಿಚಾರವಾಗಿದೆ. ಪಾಕಿಸ್ತಾನಕ್ಕೆ ಇದೊಂದು ಚಿಕ್ಕ ಟ್ರೀಸರ್ ಅಷ್ಟೇ. ಪಾಕಿಸ್ತಾನ ಈಗಲಾದರೂ ಎಚ್ಚತ್ತುಕೊಳ್ಳಬೇಕು. ತಾವು ಬೆಳೆಸಿದ ಉಗ್ರಗಾಮಿಗಳನ್ನು ನಾಶ ಮಾಡಲು ಬಿಡಬೇಕು. ಇಲ್ಲವೇ ತಾವಾಗಿಯೇ ನಾಶ ಮಾಡಿ ನಮಗೆ ಪ್ರೂಫ್ ತೋರಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಪಾಕಿಸ್ತಾನದಲ್ಲಿ ಇರುವವರೆಲ್ಲ ಕೆಟ್ಟವರಲ್ಲ ಅಲ್ಲೂ ಒಳ್ಳೆಯವರು ಇದ್ದಾರೆ ಎಂದು ಚಂದನ್ ಶೆಟ್ಟಿ ಅವರು, ಭಾರತದವರು ಶಾಂತಿಪ್ರಿಯರು. ಯಾರ ಮೇಲೆಯೂ ಕಾಲುಕೆರೆದು ಯುದ್ಧಕ್ಕೆ ಹೋಗುವವರಲ್ಲ. ಆದರೆ ವಿನಾಕಾರಣ ಭಯೋತ್ಪಾದಕ ದಾಳಿ ನಡೆಸಿ ಭಾರತಕ್ಕೆ ಯುದ್ಧ ಮಾಡುವಂತಹ ಸಂದರ್ಭ ತಂದುಕೊಡಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದರು.
ಸೋನು ನಿಗಮ್ ವಿರುದ್ಧ ಚಂದನ್ ಶೆಟ್ಟಿಯ ಆಕ್ರೋಶ
ಗಾಯಕ ಸೋನು ನಿಗಮ್ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಯ ಬಗ್ಗೆ ಕಿಡಿಕಾರಿರುವ ಚಂದನ್ ಶೆಟ್ಟಿ, ಬೆಂಗಳೂರಿನಲ್ಲಿ ಇದ್ದೇನೆ ಅನ್ನೋ ಪರಿವೇ ಇಲ್ಲದೆ ಸೋನು ನಿಗಮ್ ಉದ್ಧಟತನ ಮೆರೆದಿದ್ದಾರೆ ಅವರಿಗೆ ಮಾನಸಿಕವಾಗಿ ಏನೋ ತೊಂದರೆ ಇರಬಹುದು. ವೈದ್ಯರಿಗೆ ತೋರಿಸಿಕೊಳ್ಳುವುದು ಒಳ್ಳೆಯದು ಎಂದು ವಾಗ್ದಾಳಿ ನಡೆಸಿದರು.
ಸೋನು ನಿಗಮ್ ವಿಚಾರದಲ್ಲಿ ಚಿತ್ರರಂಗ ಒಗ್ಗಟ್ಟಿನ ಬಗ್ಗೆ ಒತ್ತಿ ಹೇಳಿದ ಚಂದನ್, ಸೋನು ನಿಗಮ್ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕಿತ್ತು ಈ ವಿಷಯದಲ್ಲಿ ಚಿತ್ರರಂಗ ಒಟ್ಟಿಗೆ ನಿಂತಿದೆ. ಎಲ್ಲ ಕಲಾವಿದರು ಒಗ್ಗಟ್ಟಾಗಿಯೇ ಇದ್ದೇವೆ ಎಂದು ತಿಳಿಸಿದರು.
ಚಂದನ್ ಶೆಟ್ಟಿ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪರ ವಿರೋಧ ಅಭಿಪ್ರಾಯಗಳು ಬರುತ್ತಿವೆ. ಕೆಲವರು ಅವರ ದೇಶಭಕ್ತಿಯ ಮನೋಭಾವವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಸೋನು ನಿಗಮ್ ವಿಷಯದಲ್ಲಿ ಅವರ ತೀಕ್ಷ್ಣ ವಿಮರ್ಶೆಯನ್ನು ಟೀಕಿಸಿದ್ದಾರೆ.


