ಬೆಂಗಳೂರಿನ ವೈಟ್‌ಫೀಲ್ಡ್‌ನ ಕೋ-ಲಿವಿಂಗ್ ಪಿಜಿಯೊಂದರಲ್ಲಿ, ಟೆಕ್ಕಿಯೊಬ್ಬ ಪಕ್ಕದ ರೂಮಿನ ಯುವತಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ, ಖಾಸಗಿ ಫೋಟೋ ಬಳಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿ, ಕೊನೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಬೆಂಗಳೂರು (ಸೆ.19): ಸಿಲಿಕಾನ್ ಸಿಟಿ ಬೆಂಗಳೂರು ಭಾರೀ ಆಧುನಿಕ ಸ್ಪರ್ಶವನ್ನು ಪಡೆದುಕೊಂಡಿದೆ. ಒಂದೇ ಪಿಜಿಯಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಇರುವುದಕ್ಕೆ ವಾಸ್ತವ್ಯ ಇರುವಂತಹ ಪಿಜಿಗಳು ಕೂಡ ತಲೆ ಎತ್ತಿವೆ. ಇಂತಹದ್ದೇ ಒಂದು ಕೋ ಲಿವಿಂಗ್ ಪಿಜಿಯಲ್ಲಿ ಪರ ಪುರುಷನೊಬ್ಬ ಪಕ್ಕದಲ್ಲೇ ವಾಸಕ್ಕಿದ್ದ ಯುವತಿಯೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದು, ಆಕೆ ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಆಕೆಗೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಗಂಭೀರ ಘಟನೆ ನಡೆದಿದೆ.
ಹೌದು, ರಾಜಧಾನಿ ನಗರಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆಸಲಾಗಿದೆ. ಪರ ಪುರುಷನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿದಿರುವಂತ ಘಟನೆ ವೈಟ್ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯಲ್ಲಿ ನಡೆದಿದೆ.
2 ತಿಂಗಳ ಹಿಂದೆ ಬಂದಿದ್ದ ಯುವತಿಯೊಂದಿಗೆ ಸಲುಗೆ:
ಬೆಂಗಳೂರಿನ ಪ್ರತಿಷ್ಠಿತ ಸಾರಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಬಾಬುಗೆ (Bengaluru Software company techie) ಮದುವೆಯಾಗಿ ಒಂದು ಮಗುವಿದ್ದರೂ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಇರುವಂತಹ (ಕೋ-ಲಿವಿಂಗ್) ಪಿಜಿಯಲ್ಲಿ (Co-Living Paying Guest) ಒಬ್ಬನೇ ವಾಸವಿದ್ದನು. ಕಳೆದ ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಯುವತಿಯೊಬ್ಬಳು ಬಂದು ವಾಸವಾಗಿದ್ದಳು. ಅಕ್ಕ-ಪಕ್ಕದ ರೂಮು ಆಗಿರುವುದರಿಂದ ಹೊಸದಾಗಿ ಬಂದ ಯುವತಿ ಟೆಕ್ಕಿ ಬಾಬುಗೆ ಪರಿಚಯವಾಗಿದ್ದಳು.
ದೈಹಿಕ ಸಂಪರ್ಕಕ್ಕೆ ಒಪ್ಪದ ಯುವತಿ:
ಒಂದೇ ಕೋ-ಲಿವಿಂಗ್ ಪಿಜಿ ಆಗಿದ್ದರಿಂದ ಆಕೆಯ ಸಲುಗೆ ಗಳಿಸಿದ್ದ ಬಾಬು ಯುವತಿ ಫೋನ್ ನಂಬರ್ ಪಡೆದಿದ್ದನು. ಇದಾದ ನಂತರ ಆಕೆಯೊಂದಿಗೆ ಆಗಾಗ್ಗೆ ಕರೆ ಮಾಡಿ ಮಾತನಾಡುತ್ತಿದ್ದಂತೆ. ಕಳೆದ ಮೂರು ದಿನಗಳ ಹಿಂದೆ ಯುವತಿಯ ಬಳಿ ಹೋಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆದರೆ, ಯುವತಿ ಮಾತ್ರ ಇದಕ್ಕೆ ಸುತಾರಾಂ ಒಪ್ಪಿಗೆ ಕೊಡದೇ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೆ, ಇಷ್ಟಕ್ಕೆ ಸುಮ್ಮನಾಗದ ಬಾಬು, ಸಾಮಾನ್ಯವಾಗಿ ಪಿಜಿಯಲ್ಲಿ ಓಡಾಡುವಾಗ ತೆಗೆದುಕೊಂಡಿದ್ದ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು 70 ಸಾವಿರ ರೂ. ಹಣಕ್ಕೂ ಡಿಮ್ಯಾಂಡ್ ಮಾಡಿದ್ದನು.
ಖಾಸಗಿ ಫೋಟೋ ಲೀಕ್ ಮಾಡೋದಾಗಿ ಬ್ಲಾಕ್‌ಮೇಲ್:
ಇದಷ್ಟೇ ಅಲ್ಲದೇ ಯುವತಿಯ ಮೊಬೈಲ್ ಪಡೆದು, ಆಕೆಯ ಖಾತೆಯಲ್ಲಿದ್ದ ₹14 ಸಾವಿರ ಹಣವನ್ನು ತನ್ನ ಖಾತೆಗೆ ಬಲವಂತವಾಗಿ ವರ್ಗಾಯಿಸಿಕೊಂಡಿದ್ದಾನೆ. ಇದರ ಜೊತೆಗೆ ತನಗೆ ಇನ್ನೂ ಹೆಚ್ಚಿನ ಹಣ ಬೇಕೇಬೇಕು ಎಂದು ಬೇಡಿಕೆ ಇಟ್ಟಿದ್ದರಿಂದ, ತನ್ನ ಖಾಸಗಿ ಫೋಟೋ ಎಲ್ಲಿ ಲೀಕ್ ಮಾಡುತ್ತಾನೋ ಎಂಬ ಭಯದಿಂದ ಯುವತಿ ತನ್ನ ಸ್ನೇಹಿತರ ಬಳಿ ಸಾಲ ಪಡೆದು ಹಣ ನೀಡುವುದಾಗಿ ವಂಚಕ ಟೆಕ್ಕಿ ಬಾಬುಗೆ ತಿಳಿಸಿದ್ದಾಳೆ.
ಹಣ ಕೊಡುವವರೆಗೂ ಕಾಯದೇ ನನಗೆ ಈಗಲೇ ಹಣ ಬೇಕು ಎಂದು ಸಾಲ ಕೊಟ್ಟವರಂತೆ ದುಂಬಾಲು ಬಿದ್ದು ಗಲಾಟೆ ಮಾಡಿದ್ದಾನೆ. ಈ ವೇಳೆ ಯುವತಿ, ನಿನ್ನ ಲಿಮಿಟ್ ಮೀರಿ ವರ್ತನೆ ಮಾಡುತ್ತಿದ್ದೀಯ ಎಂದು ಹೇಳಿದಾಗ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೆಂಬಿದ್ದಾನೆ. ಇದಕ್ಕೆ ನಿರಾಕರಿಸಿದ ಯುವತಿಯ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ. ಯುವತಿ ಸಹಾಯಕ್ಕಾಗಿ ಕೂಗುತ್ತಿದ್ದಂತೆಯೇ ಆರೋಪಿ ಟೆಕ್ಕಿ ಬಾಬು ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಕಾಮುಕ ಟೆಕ್ಕಿಯನ್ನು ಬಂಧಿಸಿದ್ದಾರೆ. ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾದ ಯುವತಿ ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾಳೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
