hospital scam: ಆಸ್ಪತ್ರೆಗಳ ಒಳಗೆ ನಡೆಯುವ ಅಕ್ರಮಗಳು ಬಹುತೇಕ ಜನ ಸಾಮಾನ್ಯರಿಗೆ ತಿಳಿಯುವುದೇ ಇಲ್ಲ, ಆಸ್ಪತ್ರೆಯೊಂದರಲ್ಲಿ ನಡೆದ ಹಗರಣವೊಂದರ ಬಗ್ಗೆ ಟ್ರಾವೆಲ್ ವ್ಲಾಗರ್ ಒಬ್ಬರು ಹೇಳಿಕೊಂಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
3 ಐವಿ ಡ್ರಾಪ್‌ಗೆ 1 ಲಕ್ಷ ಬಿಲ್ ಹಾಕಿದ ಆಸ್ಪತ್ರೆ:
ಆಸ್ಪತ್ರೆಗಳ ಒಳಗೆ ನಡೆಯುವ ಅಕ್ರಮಗಳು ಬಹುತೇಕ ಜನ ಸಾಮಾನ್ಯರಿಗೆ ತಿಳಿಯುವುದೇ ಇಲ್ಲ, ಒಂದು ವಸ್ತು ಹಾಳಾದರೆ ಬೇರೆ ಕಡೆ ಸರಿಪಡಿಸಿದರಷ್ಟೇ ದುಡ್ಡು ಕೊಡಲಾಗುತ್ತದೆ. ಆದರೆ ಆಸ್ಪತ್ರೆಗಳಲ್ಲಿ ಹಾಗಲ್ಲ, ಇದ್ದ ಆರೋಗ್ಯವನ್ನೂ ಅವರು ಎಕ್ಸ್‌ಪರಿಮೆಂಟ್ ಮೂಲಕ ಹಾಳು ಮಾಡಿದರು ನೀವು ಜೀವಂತವಾಗಿದ್ದರು ಆಸ್ಪತ್ರೆ ಬಿಲ್ ಕಟ್ಟಿಯೇ ಹೊರಗೇ ಬರಬೇಕು. ಶವವಾಗಿ ಬಂದರೂ ಅಷ್ಟೇ ನಿಮ್ಮ ಮನೆಯವರಾದರು ಬಿಲ್ ಪಾವತಿಸಬೇಕು. ಇದರ ಜೊತೆಗೆ ಆಸ್ಪತ್ರೆಗಳು ನಡೆಸುವ ಕೆಲ ಅಕ್ರಮಗಳು ಒಂದೆರಡಲ್ಲ, ಇದರ ಬಗ್ಗೆ ಜನಸಾಮಾನ್ಯರಿಗೆ ತಿಳಿಯುವುದಕ್ಕೆ ಸಾಧ್ಯವೂ ಇಲ್ಲ. ಹೀಗಿರುವಾಗ ಥೈಲ್ಯಾಂಡ್‌ನ ಆಸ್ಪತ್ರೆಯೊಂದರಲ್ಲಿ ನಡೆದ ಅವಾಂತರದ ಬಗ್ಗೆ ಭಾರತೀಯ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಭಾರಿ ವೈರಲ್ ಆಗಿದೆ.
ಥೈಲ್ಯಾಂಡ್‌ನ ಆಸ್ಪತ್ರೆಯ ಕರಾಳ ಮುಖ ತೆರೆದಿಟ್ಟ ಇನ್‌ಫ್ಲುಯೆನ್ಸರ್:
ಟ್ರಾವೆಲ್ ಬ್ಲಾಗರ್ ಆಗಿರುವ ರಾಜಸ್ಥಾನದ ಮೋನಿಕಾ ಗುಪ್ತಾ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ವೇಳೆ ಅವರು ಗಂಭೀರ ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಖರೀದಿಸಿದ ವಿಚಿತ್ರವಾದ ಗಮ್ಮಿ ಕ್ಯಾಂಡಿಗಳನ್ನು ತಿಂದ ನಂತರ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆಲ್ಲಾ ಅವರಿಗೆ ಹಾಗೂ ಅವರ ಸ್ನೇಹಿತೆಗೆ ಸಂಪೂರ್ಣ ಹುಷಾರು ತಪ್ಪಿದೆ. ನಮಗೆ ಒಂಥರಾ ವಿಚಿತ್ರವಾದ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಯ್ತು. ನಮಗೆ ಎದೆಭಾಗದಲ್ಲಿ ತೀವ್ರವಾದ ಭಾರವಾದಂತೆ ಉಸಿರಾಡುವುದಕ್ಕೆ ಕಷ್ಟವಾದಂತಹ ಅನುಭವ ಆಯ್ತು. ಕೇವಲ 15 ನಿಮಿಷದಲ್ಲಿ ನನ್ನ ಗೆಳತಿ 20 ಬಾರಿ ವಾಂತಿ ಮಾಡಿದಳು. ಭಯಗೊಂಡ ನಂತರ ನಾನು ಕೂಡಲೇ ಸಹಾಯಕ್ಕಾಗಿ ಸ್ಥಳೀಯ ಆಸ್ಪತ್ರೆಗೆ ಕರೆ ಮಾಡಿದೆವು.
ಥೈಲ್ಯಾಂಡ್‌ನ ಆಸ್ಪತ್ರೆಯಲ್ಲಿ ನಡೆದಿದ್ದೇನು?
ಆಸ್ಪತ್ರೆಗೆ ಬರುತ್ತಿದ್ದಂತೆ ಇಬ್ಬರಿಗೂ 30 ನಿಮಿಷಗಳ ಕಾಲ ನಿದ್ರಾಜನಕವಾಗಿ ಐವಿ ಡ್ರಿಪ್ ನೀಡಲಾಯಿತು. ಇದಕ್ಕಾಗಿ ಅವರು ಆರಂಭದಲ್ಲಿ ಅವರು 17,500 ರೂಪಾಯಿ ಬಹ್ತ್ ಅಂದರೆ ಸುಮಾರು 48 ಸಾವಿರ ರೂಪಾಯಿ ಬಿಲ್ ಅನ್ನು ನೀಡಿದ್ದರು. ಆದರೆ ಈ ಡ್ರಿಪ್‌ನಿಂದಾಗಿ ನಾವು ಸುಮಾರು ಮೂರು ಗಂಟೆಗಳ ಕಾಲ ಸುಧೀರ್ಘ ನಿದ್ದೆಗೆ ಜಾರಿದೆವು. ಜೊತೆಗೆ ನಮ್ಮ ವಿಮಾನವನ್ನು ಮಿಸ್ ಮಾಡಿಕೊಂಡೆವು. ಇದಾದ ನಂತರ ಒಂದು ವಾಕ್ ಮಾಡಿ ಆಸ್ಪತ್ರೆ ಬಿಲ್ ಕಟ್ಟಲು ಬಂದರೆ ಈ ವೇಳೆ ಅವರು 36,000 ಬಹ್ತ್ ಶುಲ್ಕ ಹೇಳಿದರು. 36,000 ಬಹ್ತ್ ಎಂದರೆ ಸುಮಾರು ಅಂದಾಜು ಒಂದು ಲಕ್ಷ ರೂಪಾಯಿ ಬಿಲ್ ಪಾವತಿ ಮಾಡುವಂತೆ ಹೇಳಿದರು ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
3 ಐವಿ ಡ್ರಿಪ್‌ಗೆ ಒಂದು ಲಕ್ಷ ರೂಪಾಯಿ ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಮೋನಿಕಾ ಗುಪ್ತಾ ಅವರು ತಾವು ಆಸ್ಪತ್ರೆಯಲ್ಲಿ ಇದ್ದ ಸಮಯದಲ್ಲಿಯೇ ತಮ್ಮಂತೇ ಈ ವಿಚಿತ್ರ ಗಮ್ಮಿ ಕ್ಯಾಂಡಿ ತಿಂದು ಆಸ್ಪತ್ರೆಗೆ ಬಂದ ಹಲವರು ಅಲ್ಲಿ ಇರುವುದನ್ನು ಗಮನಿಸಿದ್ದು, ಅವರು ಕೂಡ ಇವರಂತೆ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಹೀಗಾಗಿ ಇದೊಂದು ವ್ಯವಸ್ಥಿತವಾದ ಸಂಚು ಆಗಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಗಮ್ಮಿ ಕ್ಯಾಂಡಿ ಮಾರುವವರು ಹಾಗೂ ಈ ಆಸ್ಪತ್ರೆಯವರ ಮಧ್ಯೆ ಪ್ರವಾಸಿಗರ ಸುಲಿಗೆ ಮಾಡುವುದಕ್ಕೆ ಏನಾದರೂ ಸಂಘಟಿತವಾದ ಒಪ್ಪಂದ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಮಗೂ ಇದೇ ರೀತಿಯ ಅನುಭವ ಆಯ್ತು ಎಂದ ಕೆಲ ನೆಟ್ಟಿಗರು:
ಇವರ ಈ ಎಚ್ಚರಿಕೆಯ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕರು ಥೈಲ್ಯಾಂಡ್‌ನ ಬೀದಿಗಳಲ್ಲಿ ಸಿಗುವ ಆಹಾರಗಳನ್ನು ಖರೀದಿಸುವಾಗ ಬಹಳ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಇನ್ನೂ ಕೆಲವರು ತಮಗೂ ಇದೇ ರೀತಿಯ ಅನುಭವ ಆದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಥೈಲ್ಯಾಂಡ್ ಪ್ರವಾಸ ಹೋದಾಗ ನನಗೂ ಇದೇ ರೀತಿಯ ಅನುಭವ ಆಗಿತ್ತು ಸೇಮ್ ಟು ಸೇಮ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ವಿದೇಶ ಪ್ರವಾಸ ಮಾಡುವಾಗ ಟ್ರಾವೆಲ್ ಇನ್ಶ್ಯುರೆನ್ಸ್ ಪಡೆದುಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಊಹಿಸದೇ ಬರುವಂತಹ ವೈದ್ಯಕೀಯ ತುರ್ತು ವೆಚ್ಚಗಳು, ಪ್ರಯಾಣದ ಸಮಸ್ಯೆಗಳು, ವಿಮಾನ ರದ್ದು ಮುಂತಾದವುಗಳಿಂದ ಉಂಟಾಗುವ ಆರ್ಥಿಕ ಹಾನಿಯನ್ನು ಇದು ತಡೆಗಟ್ಟಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೋಗೆ ಒಬ್ಬರು ಥೈಲ್ಯಾಂಡ್ ನಾಗರಿಕ ಪ್ರತಿಕ್ರಿಯಿಸಿದ್ದು, ಥೈಲ್ಯಾಂಡ್‌ನಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿವೆ. ಖಾಸಗಿ ಆಸ್ಪತ್ರೆಗಳು ತುಂಬಾ ದುಬಾರಿ, ಸ್ಥಳೀಯ ಜನರು ಸಾಮಾನ್ಯವಾಗಿ ವಿಮೆ ಬಳಸುತ್ತಾರೆ. ವಿಮೆ ಇಲ್ಲದೇ ಇದ್ದರೆ ಅವರು ಪ್ರವಾಸಿಗರಿಗೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡುತ್ತಾರೆ. ಥೈಲ್ಯಾಂಡ್ ಪ್ರಜೆಗಳಿಗಾದರೂ ಅಷ್ಟೇ ಇದೇ ರೀತಿ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 20ರಲ್ಲಿ ಮದ್ವೆಯಾಗಿ ಮಕ್ಕಳ ಮಾಡಿಕೊಳ್ಳಿ: ಯುವಜನತೆಗೆ ಸಲಹೆ ನೀಡಿದ ಝೋಹೋ ಸಹ ಸಂಸ್ಥಾಪಕ
ಇದನ್ನೂ ಓದಿ: ಹೆದ್ದಾರಿಗಳಲ್ಲಿ ಟೋಲ್ ತಪ್ಪಿಸ್ಬೇಕಾ? ಈ ಕಾರು ಖರೀದಿ ಮಾಡಿ


