ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಮನಿ ಲಾಂಡರಿಂಗ್ ಸಂಕಷ್ಟ, ಇಡಿ ಚಾರ್ಜ್‌ಶೀಟ್ ಸಲ್ಲಿಕೆ, ಯುಕೆ ಮೂಲದ ರಕ್ಷಣಾ ಉತ್ಪನ್ನಗಳ ಡೀಲರ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ರಾಬರ್ಟ್ ವಾದ್ರಾ ಸಂಕಷ್ಟ ಹೆಚ್ಚಾಗಿದೆ. 

ನವದೆಹಲಿ (ನ.20) ಕಾಂಗ್ರೆಸ್ ಪಕ್ಷಕ್ಕೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿದೆ. ಪ್ರಮುಖವಾಗಿ ಚುನಾವಣೆ ಸೋಲು, ಹೆರಾಲ್ಡ್ ಪ್ರಕರಣ ಸೇರಿದಂತೆ ಸಮಸ್ಯೆಗಳೇ ಸಾವಿರ. ಇದರ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಗಾಂಧಿ ಕುಟುಂಬಕ್ಕೂ ಸಂಕಷ್ಟಗಳ ಸರಮಾಲೆ ಹೆಚ್ಚಿದೆ. ಇದೀಗ ಪ್ರಿಯಾಂಕಾ ವಾದ್ರಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ದ ಇಡಿ ಅಧಿಕಾರಿಗಳು ಚಾರ್ಚ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ರಾಬರ್ಟ್ ವಾದ್ರ 9ನೇ ಆರೋಪಿಯಾಗಿ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಂಜಯ ಬಂಡಾರಿ ಮನಿ ಲಾಂಡರಿಂಗ್ ಕೇಸ್

ಯುಕೆ ಮೂಲದ ಡಿಫೆನ್ಸ್ ಡೀಲರ್ ಸಂಜಯ್ ಬಂಡಾರಿಗೆ ಲಿಂಕ್ ಆಗಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ 9ನೇ ಆರೋಪಿ. ಈ ಪ್ರಕರಣದಲ್ಲಿನ ಇತರ ಪ್ರಮುಖ ಆರೋಪಿಗಳೆಂದರೆ, ಸಂಜಯ್ ಬಂಡಾರಿ, ಸುಮಿತ್ ಚಾಧಾ, ಸಂಜೀವ್ ಕಪೂರ್, ಅನಿರುದ್ಧ ವಾದ್ವಾ, ಸ್ಯಾಂಟೆಕ್ ಇಂಟರ್ನ್ಯಾಶನಲ್ FZC, ಆಫ್‌ಸೆಟ್ ಇಂಡಿಯಾ ಸೊಲ್ಯುಶನ್ ಸೇರಿದಂತೆ ಇತರ ಕೆಲ ಪ್ರಮುಖರು ಈ ಪ್ರಕರಣದ ಆರೋಪಿಗಳಾಗಿದ್ದಾರೆ.

ರಾಬರ್ಡ್ ವಾದ್ರಾಗೆ ಹೆಚ್ಚಿದ ಸಂಕಷ್ಟ

ಇದೇ ಮೊದಲ ಬಾರಿಗೆ ರಾಬರ್ಟ್ ವಾದ್ರ ಆರೋಪಿಯಾಗಿ ಉಲ್ಲೇಖಿಸಲಾಗಿದೆ. ಇಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ 9ನೇ ಆರೋಪಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಜುಲೈ ತಿಂಗಳಲ್ಲಿ ರಾಬರ್ಟ್ ವಾದ್ರ ಅವರನ್ನು ಇಡಿ ಅಧಿಕಾರಿಗಳು ಪ್ರವೆನ್ಶನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ (PMLA) ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಅಕ್ಟೋಬರ್ ತಿಂಗಳಲ್ಲಿ ಎರಡು ಬಾರಿ ಇಡಿ ಅಧಿಕಾರಿಗಳು ವಿಚಾರಣೆಹೆ ಹಾಜರಾಗುವಂತೆ ರಾಬರ್ಟ್ ವಾದ್ರಗೆ ಸೂಚನೆ ನೀಡಿದ್ದರು.ಆದರೆ ಮೊದಲ ಸಮನ್ಸ್‌ಗೆ ಆರೋಗ್ಯದ ಕಾರಣ ನೀಡಿ ಗೈರಾಗಿದ್ದರೆ, ಎರಡನೇ ಸೂಚನೆ ವೇಳೆ ಕೋರ್ಟ್‌ನಿಂದ ಅನುಮತಿ ಪಡೆದು ವಿದೇಶಕ್ಕೆ ತೆರಳಿದ್ದರು.

ಮೂರು ಮನಿ ಲಾಂಡರಿಂಗ್ ಪ್ರಕರಣದಲ್ಲಿ ರಾಬರ್ಟ್ ವಾದ್ರ

ರಾಬರ್ಟ್ ವಾದ್ರ ವಿರುದ್ದ ಮೂರು ಮನಿ ಲಾಂಡರಿಂಗ್ ಪ್ರಕರಣಗಳಿವೆ. ಈ ಪೈಕಿ ಎರಡು ಪ್ರಕರಣಗಳು ಜಮೀನು ಡೀಲಿಂಗ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣದ ವ್ಯವಹಾರ. ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಭೂ ಪ್ರಕರಣಗಳು ಇದಾಗಿದೆ. ಸದ್ಯ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಪ್ರಕರಣ ಮೂರನೇಯದ್ದು. ಇದು ಸಂಜಯ್ ಭಂಡಾರಿಗೆ ನೇರವಾಗಿ ಲಿಂಕ್ ಆಗಿರುವ ಮನಿ ಲಾಂಡರಿಂಗ್ ಪ್ರಕರಣ. 2023ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. 2009ರಲ್ಲಿ ಸಂಜಯ್ ಬಂಡಾರ್ ಲಂಡನ್‌ನ ಬ್ರೈನ್‌ಸ್ಟನ್‌ನಲ್ಲಿಆಸ್ತಿ ಖರೀದಿಸಿದ್ದರು. ಇದನ್ನು ರಾಬರ್ಟ್ ವಾದ್ರ ಸೂಚನೆ ಮೇರೆಗೆ ನವೀಕರಣ ಮಾಡಲಾಗಿತ್ತು. ನವೀಕರಣಕ್ಕೆ ರಾಬರ್ಟ್ ವಾದ್ರಾ ಹಣ ನೀಡಿದ್ದರು. ಆದರೆ ವಿಚಾರಣೆಯಲ್ಲಿ ತನಗೂ ಸಂಜಯ್ ಭಂಡಾರಿ ಖರೀದಿಸಿದ ಆಸ್ತಿಗೂ ಯಾವುದೇ ಸಂಬಂಧವಿಲ್ಲ. ಇದು ತನ್ನ ಬೇನಾಮಿ ಆಸ್ತಿ ಅಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣ ರಾಜಕೀಯ ದುರುದ್ದೇಶದ ಪ್ರಕರಣ ಎಂದು ಆರೋಪಿಸಿದ್ದಾರೆ.