ದೀಪಾವಳಿಗೆ ಪಟಾಕಿ ಸಿಡಿಸುವ ಕುರಿತು ಹಲವು ವರ್ಷಗಳಿಂದ ನಿರ್ಬಂಧಗಳು ಕಠಿಣಗೊಳ್ಳುತ್ತಲೆ ಇದೆ. ಇತ್ತ ಪರ ವಿರೋಧಗಳು ಇವೆ. ಇದರ ನಡುವೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಕೋರ್ಟ್ ಹೇಳಿದ್ದೇನು?

ನವದೆಹಲಿ (ಸೆ.30) ದೀಪಾವಳಿ ಸಮೀಪಿಸುತ್ತಿದೆ. ಈಗಲೇ ಹಲವೆಡೆ ಪಟಾಕಿ ಶಬ್ದಗಳು ಕೇಳಿಸತೊಡಗಿದೆ. ಇದೇ ವೇಳೆ ಮಾಲಿನ್ಯದ ಆತಂಕಗಳು ತೀವ್ರಗೊಳ್ಳುತ್ತಿದೆ. ದೀಪಾವಳಿಗೆ ಪಟಾಕಿ ಸಿಡಿಸಲು ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಸಮಯ ನಿಗದಿ ಮಡಲಾಗಿದೆ. ಇನ್ನು ಹಸಿರು ಪಟಾಕಿಗಳಿಗೆ ಒತ್ತು ನೀಡಲಾಗಿದೆ. ಇದೇ ವೇಳೆ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಂಪೂರ್ಣ ಪಟಾಕಿ ನಿಷೇಧವನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ದೀಪಾವಳಿಗೆ ಪಟಾಕಿ ಸಿಡಿಸುವುದು ಸೆಂಟಿಮೆಂಟ್ ಪ್ರಶ್ನೆ

ದೀಪಾವಳಿಗೆ ಪಟಾಕಿ ಸಿಡಿಸುವುದು ಸಂಪೂರ್ಣ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಜಸ್ಟೀಸ್ ಎಂಎಂ ಸುಂದರೇಶ್, ಪಿಬಿ ವರಾಲೆ ದ್ವಿಸದಸ್ಯ ಪೀಠ ಈ ಕುರಿತು ಮಹತ್ವದ ಆದೇಶ ನೀಡಿದೆ. ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ಬ್ಯಾನ್ ಮಾಡುವುದಿಲ್ಲ, ಹಾಗಂತ ಸಂಪೂರ್ಣ ಅವಕಾಶವೂ ಇಲ್ಲ. ನಿಗದಿತ ಸಮಯದಲ್ಲಿ ಪಟಾಕಿ ಸಿಡಿಸಬೇಕು. ಹಸಿರು ಪಟಾಕಿಗಳಿಗೆ ಅವಕಾಶ ನೀಡಲಾಗುತ್ತದೆ. ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವ, ಜನಸಾಮಾನ್ಯರ ಆರೋಗ್ಯಕ್ಕೂ ಹೆಚ್ಚು ಅಪಾಯ ತಂದೊಡ್ಡುವ ಪಟಾಕಿಗಳನ್ನು ನಿಷೇಧಿಸಲಾಗುತ್ತದೆ ಎಂದಿದೆ.

ನಿರ್ದಿಷ್ಟ ಸಮಯದಲ್ಲಿ ಮಾತ್ರ

ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯ ಗುರುತು ಮಾಡಬೇಕು. ಎಲ್ಲಾ ಸಮಯದಲ್ಲಿ ದಿನದ 24 ಗಂಟೆ ಪಟಾಕಿ ಸಿಡಿಸಲು ಅವಕಾಶವಿಲ್ಲ. ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯ ನಿಗದಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಮುಂದಿನ ಜನರೇಶನ್ ಹಸಿರು ಪಟಾಕಿಯಲ್ಲಿ ಮಾತ್ರ ಮುಂದುವರಿಯಲು ಈಗಿನಿಂದಲೇ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

ಪಟಾಕಿ ಶಬ್ದ 25 dB/145 dBಕ್ಕಿಂತ ಹೆಚ್ಚಿರಬಾರದು. ಇಷ್ಟೇ ಅಲ್ಲ ಪಟಾಕಿಯಲ್ಲಿ ನಿಷೇಧಿತ ರಾಸಾಯನಿಕಗಳು ಇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ಜನರ ಭಾವನೆಯೊಂದಿಗೆ ಬೆಸೆದು ಹೋಗಿದೆ. ಹೀಗಾಗಿ ಸಂಪೂರ್ಣ ಬ್ಯಾನ್ ಮಾಡಲು ಸಾಧ್ಯವಿಲ್ಲ. ಆದರೆ ನಿರ್ದಿಷ್ಟ ಸಮಯ, ಹಲವು ನಿರ್ಬಂಧಗಳು ಅನಿವಾರ್ಯ ಎಂದು ಕೋರ್ಟ್ ಹೇಳಿದೆ.