ಗುಬ್ಬಿ ವೀರಣ್ಣನವರ ಮೊಮ್ಮಗಳು ಹಾಗೂ ಹಿರಿಯ ನಟಿ ಸುಂದರಶ್ರೀ ಅವರು ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಸಾರ್ವಜನಿಕರಲ್ಲಿ ಧನಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಕಲಾವಿದರ ಬದುಕು ತೆರೆಯ ಮೇಲಿನ ರಂಗುರಂಗಿನಂತೆ ಇರುವುದಿಲ್ಲ ಎನ್ನುವುದಕ್ಕೆ ಇದಾಗಲೇ ಹಲವಾರು ಸಿನಿಮಾ, ಸೀರಿಯಲ್ ನಟರೇ ಸಾಕ್ಷಿಯಾಗಿದ್ದಾರೆ. ಅದೊಂದು ದಿನ ಅವರು ಅನಾರೋಗ್ಯಪೀಡಿತರಾಗಿಯೋ ಅಥವಾ ಇನ್ನಾವುದೇ ಕಾರಣದಿಂದ ಬಣ್ಣದ ಲೋಕದಿಂದ ದೂರವಾದಾಗ ಅವರನ್ನು ನೋಡುವವರೂ ಇಲ್ಲವಾಗುತ್ತಾರೆ. ಅಂಥವರಲ್ಲಿ ಒಬ್ಬರು ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಸುಂದರಶ್ರೀ ಅವರು. ಹಲವಾರು ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿರುವ ನಟಿ ಸುಂದರಶ್ರೀ ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
ಧನಸಹಾಯಕ್ಕೆ ಮನವಿ
ಇನ್ಸ್ಟಾಗ್ರಾಮ್ನಲ್ಲಿ ಬಂದಿರುವ ನಟಿ, ನಾನು ಅನಾರೋಗ್ಯಪೀಡಿತಳಾಗಿದ್ದೇನೆ. ನನಗೆ ಹಣಕಾಸಿನ ನೆರವು ಬೇಕಿದೆ. ಯಾರಾದರೂ ದಯವಿಟ್ಟು ಹಣ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ! ನಾನು ಅಡ್ಮಿಟ್ ಆಗಿ ಮೂರು ತಿಂಗಳಾಗಿದೆ. ಧನಸಹಾಯದ ಅವಶ್ಯಕತೆ ಇದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದಿದ್ದಾರೆ ನಟಿ. ಅಂದಹಾಗೆ ಸುಂದರಶ್ರೀ ಅವರು, ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ದೈತ್ಯ ಪ್ರತಿಭೆ ಡಾ. ಗುಬ್ಬಿ ವೀರಣ್ಣನವರ ಮೊಮ್ಮಗಳು. ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸುದೀರ್ಘ ಕಾಲದಿಂದ ಸಕ್ರಿಯವಾಗಿರುವ ಹಿರಿಯ ನಟಿಯಾಗಿದ್ದಾರೆ. ಕಲೆಯ ಹಿನ್ನೆಲೆ ಇರುವ ಕುಟುಂಬದಿಂದ ಬಂದ ಸುಂದರಶ್ರೀ ಅವರು, ಹೆಸರಾಂತ ರಂಗಕರ್ಮಿ ಹಾಗೂ ಗಾಯಕಿ ಬಿ. ಜಯಶ್ರೀ, ವೈಜಯಂತಿ ಕಾಶಿ ಮತ್ತು ಜಿ.ಎಸ್. ನಟರಾಜ್ ಇವರ ಸಹೋದರ ಸಂಬಂಧಿಗಳಾಗಿದ್ದಾರೆ.
ನಟಿಯ ಕುರಿತು
ನಟನೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಸುಂದರಶ್ರೀ ಅವರು ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆ (NSD) ಯಲ್ಲಿ ಅಭಿನಯದ ತರಬೇತಿ ಪಡೆದಿದ್ದಾರೆ. 1970 ರಲ್ಲಿ ಡಾ. ರಾಜ್‌ಕುಮಾರ್ ಅಭಿನಯದ 'ಪರೋಪಕಾರಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ಬಳಿಕ ಚಂದ್ರಶೇಖರ ಕಂಬಾರರ ನಿರ್ದೇಶನದ 'ಕಾಡು ಕುದುರೆ' (1979) ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಶಿವರಾಜ್‌ಕುಮಾರ್ ಅಭಿನಯದ 'ಅದೇ ರಾಗ ಅದೇ ಹಾಡು' (1989), 'ಬಾಲ ಹೊಂಬಾಳೆ' ಹಾಗೂ ಇತ್ತೀಚಿನ 'ಟ್ರಂಕ್' (2018) ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಅತ್ಯಂತ ಜನಪ್ರಿಯರಾಗಿರುವ ಇವರು, ಶಂಕರ್ ನಾಗ್ ನಿರ್ದೇಶನದ ಪ್ರಸಿದ್ಧ ತಮಿಳು/ಹಿಂದಿ ಸರಣಿ 'ಮಾಲ್ಗುಡಿ ಡೇಸ್' (Malgudi Days) ನಲ್ಲೂ ನಟಿಸಿದ್ದರು. ವಿಶೇಷವಾಗಿ 2003 ರ ಸೂಪರ್ ಹಿಟ್ ಕನ್ನಡ ಧಾರಾವಾಹಿ 'ಗುಪ್ತಗಾಮಿನಿ' ಯಲ್ಲಿನ ಇವರ ಅಭಿನಯ ಕಿರುತೆರೆ ವೀಕ್ಷಕರಲ್ಲಿ ದೊಡ್ಡ ಮಟ್ಟದ ಗುರುತಿಸುವಿಕೆ ತಂದುಕೊಟ್ಟಿತು. ರಂಗಭೂಮಿಯ ನಾಟಕಗಳಲ್ಲೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ


