ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಣ ರಾಸಾಯನಿಕ ಪತ್ತೆಯಾಗಿರುವ ವರದಿಗಳಿಂದ ಆತಂಕ ಸೃಷ್ಟಿಯಾಗಿರುವ ಹೊತ್ತಿನಲ್ಲೇ, ‘ಆತಂಕದ ಅಗತ್ಯವಿಲ್ಲ’ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೃಢಪಡಿಸಿದೆ.
ನವದೆಹಲಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಣ ರಾಸಾಯನಿಕ ಪತ್ತೆಯಾಗಿರುವ ವರದಿಗಳಿಂದ ಆತಂಕ ಸೃಷ್ಟಿಯಾಗಿರುವ ಹೊತ್ತಿನಲ್ಲೇ, ‘ಆತಂಕದ ಅಗತ್ಯವಿಲ್ಲ’ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೃಢಪಡಿಸಿದೆ.
ನೈಟ್ರೋಫ್ಯೂರಾನ್ ಅಂಶ ಪತ್ತೆಯಾಗಿರುವುದಾಗಿ ಹೇಳಲಾಗಿತ್ತು
ಎಗ್ಗೋಸ್ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ನೈಟ್ರೋಫ್ಯೂರಾನ್ ಅಂಶ ಪತ್ತೆಯಾಗಿರುವುದಾಗಿ ಟ್ರಸ್ಟಿಫೈಡ್ ಯೂಟ್ಯೂಬ್ ಚಾನಲ್‌ನಲ್ಲಿ ಹೇಳಲಾಗಿತ್ತು. ಇದರ ಬೆನ್ನಲ್ಲೇ ಹಲವು ವಿಧದ ಮೊಟ್ಟೆಗಳ ಪರೀಕ್ಷೆ ನಡೆಸಿರುವ ಎಫ್‌ಎಸ್‌ಎಸ್‌ಎಐ, ‘ಅದು ದಾರಿತಪ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ವರದಿಯಾಗಿದೆ. ಆ ಆರೋಪಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ’ ಎಂದು ಹೇಳಿದೆ.
‘2011ರ ಆಹಾರ ಸುರಕ್ಷತೆ ಮತ್ತು ಮಾನದಂಡ ನಿಯಮಗಳ ಅಡಿಯಲ್ಲಿ ಕೋಳಿ ಸಾಕಣೆಯ ಎಲ್ಲಾ ಹಂತದಲ್ಲಿಯೂ ನೈಟ್ರೋಫ್ಯೂರಾನ್ ಬಳಕೆಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಪ್ರತಿ ಕೆ.ಜಿ.ಯಲ್ಲಿ ಅದು 1.0 ಮೈಕ್ರೋಗ್ರಾಂನಷ್ಟಿದ್ದರೆ ಯಾವುದೇ ಅಪಾಯವಿಲ್ಲ. ಅಂಥ ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುವುದಿಲ್ಲ’ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ವಿವಾದ ಏನು?:
‘ನೈಟ್ರೋಫ್ಯೂರಾನ್ ಅಗ್ಗವಾಗಿರುವ ಕಾರಣ ಕೋಳಿಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು ತಡೆಯಲು ಅದನ್ನು ತಿನ್ನಿಸಲಾಗುತ್ತದೆ. ಅದರ ಅಂಶ ಆ ಕೋಳಿ ಇಡುವ ಮೊಟ್ಟೆಗೆ ಸೇರಿ, ಸೇವಿಸುವವರ ದೇಹ ಪ್ರವೇಶಿಸುತ್ತದೆ. ಇದರಿಂದ ಮನುಷ್ಯರಿಗೆ ಕ್ಯಾನ್ಸರ್ ಬರುವ ಅಪಾಯವಿದೆ’ ಎಂದು ಟ್ರಸ್ಟಿಫೈಡ್ ಯೂಟ್ಯೂಬ್ ಚಾನೆಲ್ ಹೇಳಿತ್ತು.

