ನೇಪಾಳ-ಚೀನಾ ಗಡಿಯ ರಸುವಾಗಧಿಯಲ್ಲಿ ಸಂಭವಿಸಿದ ಹಿಮನದಿ ಪ್ರವಾಹದಿಂದ 469ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಚೀನಾ ಮುಂಚಿತವಾಗಿ ಎಚ್ಚರಿಕೆ ನೀಡದ ಕಾರಣ ಈ ದುರಂತ ಸಂಭವಿಸಿದ್ದು, ಪ್ರಧಾನಿ ಬಾಲೆನ್ ಶಾ ಸರ್ಕಾರದ ಚೀನಾ ಪರ ನೀತಿ ಮತ್ತು ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು ನೇಪಾಳದ ವಿದೇಶಾಂಗ ನೀತಿ ಮತ್ತು ನಾಗರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಕಠ್ಮಂಡು: ನೇಪಾಳ-ಚೀನಾ ಗಡಿಯ ರಸುವಾಗಧಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಿಮನದಿ ಪ್ರವಾಹ ದುರಂತವು ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಈ ಭೀಕರ ವಿಪತ್ತಿನಲ್ಲಿ ಸುಮಾರು 469ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಕಾಣೆಯಾಗಿದ್ದಾರೆ. ಈ ದುರಂತದ ಬೆನ್ನಲ್ಲೇ ಚೀನಾದ ಜವಾಬ್ದಾರಿರಹಿತ ನಡವಳಿಕೆ ಹಾಗೂ ಪ್ರಧಾನಿ ಬಾಲೆನ್ ಶಾ ನೇತೃತ್ವದ ನೇಪಾಳ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ದೇಶೀಯ ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಏನಿದು ದುರಂತ?

ಟಿಬೆಟ್ ಗಡಿಭಾಗದಲ್ಲಿದ್ದ ಹಿಮನದಿಯೊಂದು ಇದ್ದಕ್ಕಿದ್ದಂತೆ ಒಡೆದು, ಪ್ರಚಂಡ ಪ್ರಮಾಣದ ನೀರು ಮತ್ತು ಭಗ್ನಾವಶೇಷಗಳು ಕೆಳಭಾಗದಲ್ಲಿದ್ದ ನೇಪಾಳದ ರಸುವಾಗಧಿ ಪ್ರದೇಶಕ್ಕೆ ನುಗ್ಗಿದವು. ಹಿಮನದಿ ಒಡೆದ ನೀರು ರಸುವಾಗಧಿಗೆ ತಲುಪಲು ಕೇವಲ 1.5 ಗಂಟೆಗಳ ಕಾಲಾವಕಾಶವಿತ್ತು. ಚೀನಾ ಸರ್ಕಾರವು ಸುಧಾರಿತ ಉಪಗ್ರಹ ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಹೊಂದಿದ್ದರೂ, ನೇಪಾಳಕ್ಕೆ ಯಾವುದೇ ಮುಂಚಿನ ಎಚ್ಚರಿಕೆ ನೀಡಲಿಲ್ಲ. ಚೀನಾದಿಂದ ಒಂದು ಸಣ್ಣ ಫೋನ್ ಕರೆ ಅಥವಾ ಎಚ್ಚರಿಕೆಯ ಸಂದೇಶ ಬಾರದೇ ಇದ್ದುದರಿಂದ, ತಗ್ಗು ಪ್ರದೇಶದಲ್ಲಿದ್ದ ಜಲವಿದ್ಯುತ್ ಯೋಜನೆಯ ಕಾರ್ಮಿಕರು, ಸ್ಥಳೀಯ ನಾಗರಿಕರು ಹಾಗೂ ಪೊಲೀಸರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ.

ಚೀನಾದ 'ಕುರುಡು ಪ್ರೀತಿ' ಮತ್ತು ಪ್ರಧಾನಿ ಬಾಲೆನ್ ಶಾ ಸರ್ಕಾರದ ವೈಫಲ್ಯ!

ಅಧಿಕಾರಕ್ಕೆ ಬಂದು ಸುಮಾರು 5 ತಿಂಗಳು ಕಳೆಯುತ್ತಿರುವ ಪ್ರಧಾನಿ ಬಾಲೆನ್ ಶಾ, ತಮ್ಮ ರಾಷ್ಟ್ರೀಯತಾವಾದಿ ಇಮೇಜ್‌ನಿಂದ ಗಮನ ಸೆಳೆದಿದ್ದರು. ಆದರೆ ಈ ಪ್ರಕೃತಿ ವಿಕೋಪದ ವೇಳೆ ಅವರ ನೀತಿಗಳು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೊದಲಿಗೆ ಟಿಬೆಟ್ ಗಡಿ ಹಾಗೂ ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾ ನಡೆಸುತ್ತಿರುವ ವಿವೇಚನಾರಹಿತ ನಿರ್ಮಾಣ ಕಾರ್ಯಗಳು ಮತ್ತು ಅಣೆಕಟ್ಟುಗಳು ಅಪಾಯಕಾರಿ ಎಂದು ಪರಿಸರ ತಜ್ಞರು ಹಾಗೂ ಮಾಜಿ ಸಿವಿಲ್ ಎಂಜಿನಿಯರ್‌ಗಳ ಗುಂಪು ಎಚ್ಚರಿಸಿತ್ತು. ಆದರೂ ಬಾಲೆನ್ ಶಾ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಇನ್ನು ಎರಡನೇ ವಿಚಾರವೆಂದರೆ, ಸಣ್ಣಪುಟ್ಟ ವಿಷಯಗಳಿಗೂ ಭಾರತದ ವಿರುದ್ಧ ಕಠಿಣ ನಿಲುವು ತಳೆಯುವ ನೇಪಾಳದ ನಾಯಕರು, ಚೀನಾದ ಅಪಾಯಕಾರಿ ನಿರ್ಮಾಣಗಳ ವಿರುದ್ಧ ಧ್ವನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಷ್ಟ್ರೀಯತೆಗೆ ಹೆಚ್ಚಿದ ಪ್ರಚಾರ!

ಶಾಲೆಗಳ ಹೆಸರುಗಳನ್ನು ನೇಪಾಳಿ ಭಾಷೆಗೆ ಬದಲಾಯಿಸುವುದು ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಚಾರ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ನಾಗರಿಕರ ಜೀವ ರಕ್ಷಣೆಯಂತಹ ಮೂಲಭೂತ ವಿಷಯಕ್ಕೆ ಆದ್ಯತೆ ನೀಡಬೇಕಿತ್ತು ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ನೇಪಾಳ ಮಾಧ್ಯಮ ಮತ್ತು ತಜ್ಞರ ಆಕ್ರೋಶ!

ಈ ಭೀಕರ ವಿಪತ್ತಿನ ನಂತರ ನೇಪಾಳದ ಪ್ರಮುಖ ದಿನಪತ್ರಿಕೆ 'ನಯಾ ಪತ್ರಿಕಾ'ದ ಹಿರಿಯ ಪತ್ರಕರ್ತರು ಮತ್ತು ಚಿಂತಕರು ಚೀನಾದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನೇಪಾಳವು ಚೀನಾದ ಎಲ್ಲಾ ಕಾನೂನುಬದ್ಧ ಹಾಗೂ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದರೂ, ಇಂತಹ ತುರ್ತು ಸಂದರ್ಭದಲ್ಲಿ ಚೀನಾ ಮಾಹಿತಿ ನೀಡದೆ ಕೈಕೊಟ್ಟಿರುವುದು ಏಕಪಕ್ಷೀಯ ಪ್ರೀತಿಯ ಬೆಲೆ ಎಂದು ಬಣ್ಣಿಸಲಾಗಿದೆ. ರಾಷ್ಟ್ರೀಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಾ. ಗೋವಿಂದ್ ರಾಜ್ ಪೋಖರೆಲ್ ಪ್ರಕಾರ, ಬಲವಾದ ಪ್ರವಾಹದ ಮುನ್ಸೂಚನೆ ಇಲ್ಲದ ಕಾರಣ ತಗ್ಗು ಪ್ರದೇಶದಲ್ಲಿದ್ದ ಜನರು ಕ್ಷಣಾರ್ಧದಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ ಎನ್ನುವುದು ಕೇಳಿ ಬಂದಿದೆ.

ಚೀನಾದ ಸಮಜಾಯಿಷಿ!

ನೇಪಾಳದಲ್ಲಿ ಆಕ್ರೋಶ ಭುಗಿಲೇಳುತ್ತಿದ್ದಂತೆ ಕಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿಯು ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಕಲಿ ಎಂದು ತಳ್ಳಿಹಾಕಿದೆ. ಈ ಘಟನೆಯು ನೇಪಾಳದ ಭಾಗದಲ್ಲೇ ಸಂಭವಿಸಿದ ಹಿಮನದಿ ದುರಂತವಾಗಿದ್ದು, ಇದರಲ್ಲಿ ಚೀನಾದ ನಾಗರಿಕರೂ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದೆ. ಅಲ್ಲದೆ ದೂಷಣೆ ಮಾಡುವುದಕ್ಕಿಂತ ಸಹಕಾರ ಮುಖ್ಯ ಎಂದು ಚೀನಾ ಸಲಹೆ ನೀಡಿದೆ. ಆದರೆ, ಕಳೆದ ವರ್ಷದ ಆಗಸ್ಟ್‌ನಲ್ಲೂ ಟಿಬೆಟ್‌ನ ಹಿಮನದಿ ಸರೋವರ ಒಡೆದು ರಸುವಾಗಧಿ ಮತ್ತು ಗೈರಾಂಗ್ ಸಂಪರ್ಕಿಸುವ 'ಫ್ರೆಂಡ್‌ಶಿಪ್ ಸೇತುವೆ' ನಾಶವಾಗಿತ್ತು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಚೀನಾ ಎಚ್ಚರಿಕೆ ವ್ಯವಸ್ಥೆ ರೂಪಿಸಿಲ್ಲ.

ಆತ್ಮಾವಲೋಕನದ ಅಗತ್ಯ!

ರಸುವಾಗಧಿ ದುರಂತವು ನೇಪಾಳ ಸರ್ಕಾರಕ್ಕೆ ದೊಡ್ಡ ಪಾಠವಾಗಿದೆ. ಬರಿ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಮತ್ತು ಸಿದ್ಧಾಂತಗಳಿಂದ ದೇಶದ ಗಡಿ ಹಾಗೂ ನಾಗರಿಕರನ್ನು ರಕ್ಷಿಸಲು ಸಾಧ್ಯವಿಲ್ಲ. ಚೀನಾ ಸರ್ಕಾರವು ತನ್ನ ವಾಣಿಜ್ಯ ಮತ್ತು ರಾಜತಾಂತ್ರಿಕ ಹಿತಾಸಕ್ತಿಗಳನ್ನಷ್ಟೇ ನೋಡಿಕೊಳ್ಳುತ್ತದೆ ಎಂಬ ಸತ್ಯವನ್ನು ಅರಿತು, ಬಾಲೆನ್ ಶಾ ಸರ್ಕಾರವು ಭಾರತದಂತೆ ಚೀನಾವನ್ನೂ ಗಂಭೀರವಾಗಿ ಪ್ರಶ್ನಿಸುವ ಹಾಗೂ ದೇಶದ ಜನರ ಭದ್ರತೆಗೆ ಮೊದಲ ಆದ್ಯತೆ ನೀಡುವ ತುರ್ತು ಅಗತ್ಯವಿದೆ.