ನೀಟ್ ಯುಜಿ 2026ರ ಫಲಿತಾಂಶದಲ್ಲಿ ಗಂಭೀರ ಅಕ್ರಮದ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಯೊಬ್ಬರ ಅಂಕಗಳು 24 ಗಂಟೆಗಳಲ್ಲಿ ಮೂರು ಬಾರಿ ಬದಲಾಗಿವೆ. 650 ರಿಂದ 135ಕ್ಕೆ ಕುಸಿದ ಅಂಕಗಳ ಬಗ್ಗೆ ಅಭ್ಯರ್ಥಿಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ಮೂಲ ಒಎಂಆರ್ ಶೀಟ್ ಹಾಜರುಪಡಿಸಲು ಕೋರಿದ್ದಾರೆ.
ನವದೆಹಲಿ (ಜು.30): 'ನೀಟ್ ಯುಜಿ 2026' (NEET UG) ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳು ಮುಂದುವರಿದಿದ್ದು, ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮೌಲ್ಯಮಾಪನ ಪ್ರಕ್ರಿಯೆಯ ವಿರುದ್ಧ ಗಂಭೀರ ಅಕ್ರಮದ ಆರೋಪ ಕೇಳಿಬಂದಿದೆ. ಎನ್‌ಟಿಎ ಅಧಿಕೃತ ಪೋರ್ಟಲ್‌ನಲ್ಲಿ ತನ್ನ ಫಲಿತಾಂಶವು ಕೇವಲ 24 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಬದಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆಯು ಶುಕ್ರವಾರ ನಡೆಯಲಿದೆ. ಅರ್ಜಿದಾರ ವಿದ್ಯಾರ್ಥಿಯ ಪ್ರಕಾರ, ಎನ್‌ಟಿಎ ಪೋರ್ಟಲ್‌ನಲ್ಲಿ ಪ್ರಕಟವಾದ ಆತನ ಅಂಕಗಳು 24 ಗಂಟೆಯೊಳಗೆ ಮೊದಲು 650 ರಿಂದ 500 ಕ್ಕೆ, ತದನಂತರ 135 ಅಂಕಗಳಿಗೆ ದಿಢೀರ್ ಕುಸಿದಿವೆ.
ಒರಿಜಿನಲ್ ಒಎಂಆರ್ ಶೀಟ್ ಹಾಜರುಪಡಿಸಲು ಮನವಿ
ಎನ್‌ಟಿಎ ಪೋರ್ಟಲ್‌ನಲ್ಲಿ ಪ್ರದರ್ಶಿಸಲಾಗುತ್ತಿರುವ ಒಎಂಆರ್ (OMR) ಉತ್ತರ ಪತ್ರಿಕೆಯು ಪರೀಕ್ಷೆಯ ಸಮಯದಲ್ಲಿ ತಾವು ಭರ್ತಿ ಮಾಡಿದ ನಿಜವಾದ ಉತ್ತರ ಪತ್ರಿಕೆಯಲ್ಲ ಎಂದು ಅಭ್ಯರ್ಥಿ ಗಂಭೀರ ಆರೋಪ ಮಾಡಿದ್ದಾರೆ. ಸ್ವತಂತ್ರ ಮತ್ತು ಪಾರದರ್ಶಕ ಪರಿಶೀಲನೆಗಾಗಿ, ತಾವು ಬರೆದ ಮೂಲ ಭೌತಿಕ (Original Physical) ಒಎಂಆರ್ ಉತ್ತರ ಪತ್ರಿಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಹಾಗೂ ಅದನ್ನು ಸುರಕ್ಷಿತವಾಗಿ ಕಾಯ್ದಿರಿಸಬೇಕು (Preserve) ಎಂದು ವಿದ್ಯಾರ್ಥಿ ಕೋರಿದ್ದಾರೆ.
ವಕೀಲ ವಿನೀತ್ ಜಿಂದಾಲ್ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯಲ್ಲಿ, ಮೌಲ್ಯಮಾಪನ ಪ್ರಕ್ರಿಯೆಯ ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ವಿದ್ಯಾರ್ಥಿಯ ಒರಿಜಿನಲ್ ಒಎಂಆರ್ ಶೀಟ್ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎನ್‌ಟಿಎಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.
24 ಗಂಟೆಯಲ್ಲಿ ನಡೆದಿದ್ದೇನು?
ಅರ್ಜಿಯಲ್ಲಿ ನೀಡಲಾದ ವಿವರಗಳ ಪ್ರಕಾರ, ವಿದ್ಯಾರ್ಥಿಯು ಜೂನ್ 21 ರಂದು ನಡೆದ ನೀಟ್ ಯುಜಿ 2026ರ ಮರುಪರೀಕ್ಷೆಗೆ (Re-examination) ಹಾಜರಾಗಿದ್ದ. ಪರೀಕ್ಷೆ ಮುಗಿದ ನಂತರ ಎನ್‌ಟಿಎ ಬಿಡುಗಡೆ ಮಾಡಿದ ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರಗಳನ್ನು ತಾಳೆ ನೋಡಿದಾಗ, ತನಗೆ ಸುಮಾರು 620 ಅಂಕಗಳು ಬರಬಹುದು ಎಂದು ಅಂದಾಜಿಸಿದ್ದ. ಆದರೆ ಜುಲೈ 16 ರಂದು ಫಲಿತಾಂಶ ಪ್ರಕಟಗೊಂಡಾಗ ಎನ್‌ಟಿಎ ಪೋರ್ಟಲ್‌ನಲ್ಲಿ ಆರಂಭದಲ್ಲಿ 650 ಅಂಕಗಳು ಬಂದಿದ್ದವು.
ತದನಂತರ, ಪೋರ್ಟಲ್‌ನಿಂದ ಲಾಗ್ ಔಟ್ ಆಗಿ ಮತ್ತೊಮ್ಮೆ ಲಾಗ್ ಇನ್ ಮಾಡಿದಾಗ ಆತನ ಅಂಕಗಳು 500 ಕ್ಕೆ ಇಳಿದಿದ್ದವು. ಮರುದಿನ ಪೋರ್ಟಲ್ ಪರಿಶೀಲಿಸಿದಾಗ ಅಂಕಗಳು ಮತ್ತಷ್ಟು ಕುಸಿದು ಕೇವಲ 135 ಅಂಕಗಳಿಗೆ ಬಂದು ತಲುಪಿವೆ ಎಂದು ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


