ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಪರೀಕ್ಷೆಗೂ ಮುನ್ನವೇ ಡಿಜಿಟಲ್ ಪ್ರಶ್ನೆ ಬ್ಯಾಂಕ್ ಮೂಲಕ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹೊಸ ವಿಧಾನವನ್ನು ನಂದನ್ ನಿಲೇಕಣಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ದೇಶಾದ್ಯಂತ ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆ ವಿಸ್ತರಿಸುವ ಅಗತ್ಯವಿದೆ ಎಂದಿದ್ದಾರೆ.
ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಪರೀಕ್ಷಾ ಅಕ್ರಮ ತಡೆಯಲು ಪರೀಕ್ಷೆ ನಡೆಸುವ ಈಗಿನ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಬೇಕೆಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ(Infosys co-founder Nandan Nilekani) ಅವರು ಸಲಹೆ ನೀಡಿದ್ದಾರೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಬದಲು, ದೊಡ್ಡ ಡಿಜಿಟಲ್ ಪ್ರಶ್ನೆ ಬ್ಯಾಂಕ್ ರಚಿಸಿ, ಪರೀಕ್ಷೆಗೆ ಕೆಲವೇ ಕ್ಷಣಗಳ ಮೊದಲು ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವಿಧಾನವನ್ನು ಅವರು ಪ್ರಸ್ತಾಪಿಸಿದ್ದಾರೆ. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಅವರ ಅಭಿಪ್ರಾಯ.
ನಂದನ್ ನಿಲೇಕಣಿ ಹೇಳಿದ್ದೇನು?
ಪರೀಕ್ಷಾ ಸುಧಾರಣೆಗಳ ಕುರಿತು ಸಲಹೆ ನೀಡಲು ರಚಿಸಿರುವ ಉನ್ನತ ಮಟ್ಟದ ಕಾರ್ಯಪಡೆಯ ಮುಖ್ಯಸ್ಥರಾಗಿರುವ ನಂದನ್ ನಿಲೇಕಣಿ ಅವರು ದೆಹಲಿಯಲ್ಲಿ ನಡೆದ ಬ್ಲೂಮ್‌ಬರ್ಗ್‌ನ ನ್ಯೂ ಎಕಾನಮಿ ಫೋರಂನಲ್ಲಿ ಮಾತನಾಡಿದರು. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಈಗಿನ ವ್ಯವಸ್ಥೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಮಾರಾಟ ಮಾಡಲು ಸಾಕಷ್ಟು ಅವಕಾಶವಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದವರೇ ಲೀಕ್ ಮಾಡಿ ಮಾರಾಟ ಮಾಡಲು ಸಾಧ್ಯವಿದೆ ಎಂದರು.
ನಮಗೆ ಪ್ರಶ್ನೆ ಪತ್ರಿಕೆ ಏಕೆ ಬೇಕು?
ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಕ್ಷಣದಿಂದಲೇ ಅದನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸುವ ಅವಕಾಶ ಸೃಷ್ಟಿಯಾಗುತ್ತದೆ ಇಂಥ ವ್ಯವಸ್ಥೆ ಇರುವಾಗ 'ನಮಗೆ ಪ್ರಶ್ನೆಪತ್ರಿಕೆಯೇ ಏಕೆ ಬೇಕು? ಎಂದು ಹೇಳಿದ್ದಾರೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ ನಂದನ್ ನಿಲೇಕಣಿ ಅವರ ಈ ಸಲಹೆ ಮಹತ್ವ ಪಡೆದುಕೊಂಡಿದೆ. ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದರಿಂದ ಲಕ್ಷಾಂತರ ವೈದ್ಯಕೀಯ ಕೋರ್ಸ್ ಆಕಾಂಕ್ಷಿಗಳಿಗೆ ತೊಂದರೆಯಾಗಿತ್ತು. ವಿದ್ಯಾರ್ಥಿಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವಿವಾದದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಡಿಜಿಟಲ್ ಪ್ರಶ್ನೆ ಬ್ಯಾಂಕ್ ರಚನೆಗೆ ಸಲಹೆ
ಪರೀಕ್ಷೆಗೂ ಕೆಲವೇ ಕ್ಷಣಗಳ ಮೊದಲು ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಅನುಕೂಲವಾಗುವಂತೆ ಬೃಹತ್ ಡಿಜಿಟಲ್ ಪ್ರಶ್ನೆ ಬ್ಯಾಂಕ್ ರಚಿಸಬೇಕು ಎಂದು ನಂದನ್ ನಿಲೇಕಣಿ ಸಲಹೆ ನೀಡಿದ್ದಾರೆ. ಇದರಿಂದ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.
ಇದಲ್ಲದೆ ದೇಶಾದ್ಯಂತ ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆಯನ್ನು ವಿಸ್ತರಿಸುವ ಅಗತ್ಯವಿದೆ ಎಂಬ ಬಗ್ಗೆಯೂ ಅವರು ಹೇಳಿದ್ದಾರೆ. ನಂದನ್ ನಿಲೇಕಣಿ ಅವರ ಪ್ರಕಾರ, ಭಾರತದಲ್ಲಿ ಕಂಪ್ಯೂಟರ್ ಮೂಲಕ ಪರೀಕ್ಷೆ ನಡೆಸಲು ಬಳಸಬಹುದಾದ ಸುಮಾರು 1.5 ಲಕ್ಷ ಸ್ಥಳಗಳಿವೆ.
'ಎಲ್ಲ ಪರೀಕ್ಷೆಗಳನ್ನೂ ಕಂಪ್ಯೂಟರ್ ಮೂಲಕ ನಡೆಸುವ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಪರೀಕ್ಷಾ ಕೇಂದ್ರಗಳ ಜಾಲವನ್ನು ವಿಸ್ತರಿಸುವ ಅಗತ್ಯವಿದೆ. ದೇಶದಲ್ಲಿ ಯುವಕ-ಯುವತಿಯರು ಪರೀಕ್ಷೆ ಬರೆಯಲು ಅನುಕೂಲವಾಗುವ ಸುಮಾರು 1.5 ಲಕ್ಷ ಸ್ಥಳಗಳಿವೆ. ಈ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ತಮ್ಮ ಕಾರ್ಯಪಡೆ ಗುರುತಿಸಿರುವ ಪ್ರಮುಖ ವಿಷಯಗಳಲ್ಲಿ ಇವುಗಳೂ ಸೇರಿವೆ ಎಂದು ನಂದನ್ ನಿಲೇಕಣಿ ತಿಳಿಸಿದ್ದಾರೆ.
ಪರೀಕ್ಷಾ ಸುಧಾರಣೆ ಜಾರಿಗೆ ತರಲು ಪ್ರಧಾನಿ ಮೋದಿ ಆಸಕ್ತಿ
ತಮ್ಮ ಕಾರ್ಯಪಡೆ ನೀಡುವ ಶಿಫಾರಸುಗಳನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ಹೊಂದಿದ್ದಾರೆ. ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಲವು ವಾರಗಳ ಕಾಲ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಜುಲೈ 27ರಂದು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು ಎಂದು ಹೇಳಿದರು..
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಪರೀಕ್ಷೆಗಳು ಸೇರಿದಂತೆ ಸಾರ್ವಜನಿಕ ಪರೀಕ್ಷೆಗಳ ನಿರ್ವಹಣೆ, ಭದ್ರತೆ, ಪ್ರಶ್ನೆಪತ್ರಿಕೆ ವಿನ್ಯಾಸ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿಯ ಸುಧಾರಣೆಗಳನ್ನು ತರಬಹುದು ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ.
ಆಗಸ್ಟ್‌ನಲ್ಲಿ ನಂದನ್ ನಿಲೇಕಣಿ ಅವರು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ಕುರಿತು ತಮ್ಮ ಸಲಹೆಗಳನ್ನು ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಬಂಧಪಟ್ಟವರನ್ನು ಆಹ್ವಾನಿಸಿದ್ದರು.
ಪರೀಕ್ಷೆಗಳ ಭದ್ರತೆಯನ್ನು ಬಲಪಡಿಸುವುದು ಮತ್ತು ದೇಶದಲ್ಲಿ ಪ್ರಮುಖ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆಯನ್ನು ಸುಧಾರಿಸುವುದು ಈ ಪ್ರಸ್ತಾವಿತ ಬದಲಾವಣೆಗಳ ಪ್ರಮುಖ ಉದ್ದೇಶವಾಗಿದೆ.
ಎಐನಿಂದ ಉದ್ಯೋಗ ನಷ್ಟವಾಗಲಿದೆ ಎಂಬ ಆತಂಕಕ್ಕೆ ನಿಲೇಕಣಿ ಪ್ರತಿಕ್ರಿಯೆ
ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಯಿಂದ ಉದ್ಯೋಗಗಳು ನಾಶವಾಗಲಿವೆ ಎಂಬ ಆತಂಕವನ್ನೂ ನಂದನ್ ನಿಲೇಕಣಿ ತಳ್ಳಿಹಾಕಿದ್ದಾರೆ. ಇಂತಹ ಭಯಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳುವ ಮೂಲಕ, ಎಐನಿಂದ ಉದ್ಯೋಗಗಳು ಕಡಿಮೆಯಾಗುತ್ತವೆ ಎಂಬ ವಾದವನ್ನು ಅವರು ಟೀಕಿಸಿದ್ದಾರೆ.
ವ್ಯವಹಾರಗಳಲ್ಲಿ ಬದಲಾವಣೆ ತರುವುದು ಎಂದರೆ ಕೇವಲ ಕೋಡಿಂಗ್‌ಗೆ ಸೀಮಿತವಾಗಿಲ್ಲ ಎಂದು ಅವರು ಹೇಳಿದ್ದಾರೆ. ಸಂಸ್ಥೆಗಳು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ ಆಡಳಿತ ವ್ಯವಸ್ಥೆ, ಬದಲಾವಣೆಗಳನ್ನು ನಿರ್ವಹಿಸುವ ವಿಧಾನ ಮತ್ತು ಸುರಕ್ಷತಾ ಕ್ರಮಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
'ಶೇ. 70ರಷ್ಟು ಕೆಲಸವು ಆಡಳಿತ ವ್ಯವಸ್ಥೆ, ಬದಲಾವಣೆ ನಿರ್ವಹಣೆ, ಪರಿವರ್ತನೆ ಮತ್ತು ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದೆ' ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.
ಎಐ ವ್ಯವಸ್ಥೆಗಳು ತಪ್ಪು ಮಾಹಿತಿಯನ್ನು ನೀಡದಂತೆ ಮತ್ತು ಅನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಎಐ ತಂತ್ರಜ್ಞಾನವು ಸಣ್ಣ ಉದ್ಯಮಗಳ ಬೆಳವಣಿಗೆಗೆ ನೆರವಾಗಬಹುದು ಮತ್ತು ಹೊಸ ಕೌಶಲಗಳಿಗೆ ಬೇಡಿಕೆಯನ್ನು ಹೆಚ್ಚಿಸಬಹುದು ಎಂದು ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ಎಐ ಅನ್ನು ಉದ್ಯೋಗಗಳಿಗೆ ಅಪಾಯವೆಂದು ಮಾತ್ರ ನೋಡುವ ಬದಲು, ಉದ್ಯಮಗಳು ಈ ತಂತ್ರಜ್ಞಾನಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದರತ್ತ ಗಮನ ಹರಿಸಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

