ವಾಕಿಂಗ್ ಹೋದವರು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದ 79 ವರ್ಷದ ವೃದ್ದೆಯೊಬ್ಬರನ್ನು ಅವರ ಕುಟುಂಬದವರು ಆ ಮಹಿಳೆ ಧರಿಸಿದ್ದ ಜಿಪಿಎಸ್ ಇದ್ದ ನೆಕ್ಲೇಸ್‌ನಿಂದಾಗಿ ಪತ್ತೆ ಮಾಡಿದಂತಹ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ: ವಾಕಿಂಗ್ ಹೋದವರು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದ 79 ವರ್ಷದ ವೃದ್ದೆಯೊಬ್ಬರನ್ನು ಅವರ ಕುಟುಂಬದವರು ಆ ಮಹಿಳೆ ಧರಿಸಿದ್ದ ಜಿಪಿಎಸ್ ಇದ್ದ ನೆಕ್ಲೇಸ್‌ನಿಂದಾಗಿ ಪತ್ತೆ ಮಾಡಿದಂತಹ ಘಟನೆ ಮುಂಬೈನಲ್ಲಿ ನಡೆದಿದೆ. 79 ವರ್ಷದ ವೃದ್ಧ ಮಹಿಳೆಯೊಬ್ಬರು ಸಂಜೆಯ ವೇಳೆ ಮನೆಯಿಂದ ವಾಯು ವಿಹಾರಕ್ಕೆಂದು ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಇದರಿಂದ ಅವರ ಕುಟುಂಬದವರು ತೀವ್ರ ಆತಂಕಕ್ಕೀಡಾಗಿದ್ದರು. ಆದರೆ ಅದೃಷ್ಟವಶಾತ್ ಆ ಅಜ್ಜಿಯ ಮೊಮ್ಮಗ ಕೊಡಿಸಿದ್ದ ಜಿಪಿಎಸ್ ಹೊಂದಿದ್ದ ನೆಕ್ಲೇಸ್‌ನಿಂದಾಗಿ ಈಗ ಅವರು ಮತ್ತೆ ಕುಟುಂಬವನ್ನು ಸೇರಿದ್ದಾರೆ. ವಾಕ್‌ಗೆಂದು ಹೋಗಿದ್ದ ಅವರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಅವರನ್ನು ಯಾರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದರು. ನೆಕ್ಲೇಸ್‌ನಲ್ಲಿದ್ದ ಜಿಪಿಎಸ್ ಮೂಲಕ ಅವರ ಇರುವಿಕೆಯನ್ನು ತಿಳಿದ ಕುಟುಂಬದವರು ನಂತರ ಅವರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ.
ಹೀಗೆ ನೆಕ್ಲೇಸ್‌ನಲ್ಲಿದ್ದ ಜಿಪಿಎಸ್‌ನಿಂದಾಗಿ ಮರಳಿ ಕುಟುಂಬ ಸೇರಿದ ವೃದ್ಧ ಮಹಿಳೆಯನ್ನು ಸಾಯಿರಾ ಬೀ ತಾಜುದ್ದೀನ್ ಮುಲ್ಲಾ ಎಂದು ಗುರುತಿಸಲಾಗಿದೆ. ಡಿಸೆಂಬರ್ 3 ರಂದು ಸೆವ್ರೀ ಪ್ರದೇಶದಲ್ಲಿ ಸಂಜೆ ಇವರು ಮನೆಯಿಂದ ವಾಯು ವಿಹಾರಕ್ಕಾಗಿ ಹೊರಟಿದ್ದಾರೆ. ಈ ವೇಳೆ ನಡೆದುಕೊಂಡು ದ್ವಿಚಕ್ರ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ನಂತರ ಯಾರು ದಾರಿಯಲ್ಲಿ ಹೋಗುತ್ತಿದ್ದವರು ಅವರನ್ನು ರಕ್ಷಿಸಿ ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್ ಶಿಪ್: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಇತ್ತ ವಾಕ್ ಹೋದ ಮನೆಯ ಹಿರಿಯ ಸದಸ್ಯೆ ವಾಪಸ್ ಬಾರದ ಹಿನ್ನೆಲೆ ಕುಟುಂಬದವರು ಆಘಾತಗೊಂಡಿದ್ದರು. ಹಲವು ಕಡೆ ಹುಡುಕಾಟ ನಡೆಸಿ ಸಿಗದೇ ಹೋದಾಗ ಅವರ ಮೊಮ್ಮಗ ಮೊಹಮ್ಮದ್ ವಾಸಿಮ್ ಆಯುಬ್ ಮುಲ್ಲಾ ತನ್ನ ಅಜ್ಜಿಯ ನೆಕ್ಲೇಸ್‌ಗೆ ಈ ಹಿಂದೆ ಅಳವಡಿಸಿದ್ದ ಜಿಪಿಎಸ್ ಸಾಧನವನ್ನು ಆಕ್ಟಿವೇಟ್ ಮಾಡಿದ್ದಾರೆ. ಈ ವೇಳೆ ಅಜ್ಜಿ ಪಾರೆಲ್‌ನಲ್ಲಿರುವ ಕೆಇಎಂ ಆಸ್ಪತ್ರೆಯಲ್ಲಿ ಇರುವುದಾಗಿ ಅವರ ಲೋಕೇಷನ್ ತೋರಿಸಿದೆ. ಈ ಆಸ್ಪತ್ರೆಯೂ ಸೇವ್ರಿಯಿಂದ ಬರೀ 5 ಕಿಲೋ ಮೀಟರ್ ದೂರದಲ್ಲಿದೆ.
ಕೂಡಲೇ ಅವರ ಮೊಮ್ಮಗ ಹಾಗೂ ಅವರ ಕುಟುಂಬದ ಇತರ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಜ್ಜಿ ಸಾಯಿರಾ ಬೀ ಅವರ ತಲೆಗೆ ಗಾಯಗಳಾಗಿರುವುದು ಕಂಡು ಬಂದಿದ್ದು, ನಂತರ ಅವರನ್ನು ಕುಟುಂಬದವರು ಕೂಡಲೇ ಜೆಜೆ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇವರ ಮೊಮ್ಮಗ ವಾಸೀಂ ಮುಲ್ಲಾ ಅವರು ನಲ್ಲಸೊಪಾರಾದಲ್ಲಿ ಇರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಹಿಂದೆಲ್ಲಾ ಯಾರಾದರು ನಾಪತ್ತೆಯಾದರೆ ಅವರು ಸಿಕ್ಕಿದರೆ ಸಿಕಿದ್ರು ಇಲ್ಲಾ ಅಂದ್ರೆ ಇಲ್ಲ, ಕೆಲವರು ಎಷ್ಟೊ ವರ್ಷಗಳ ನಂತರ ಸಿಕ್ಕಿದರೆ ಇನ್ನೂ ಕೆಲವರು ಸಿಗುವುದೇ ಇಲ್ಲ. ಆದರೆ ಈಗ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ನೋಡಿ..
ಇದನ್ನೂ ಓದಿ: ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ

