15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹಿಮಾಚಲ ಪ್ರದೇಶದ ನಿವೃತ್ತ ಯೋಧರೊಬ್ಬರು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋದಿಂದಾಗಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಕುಟುಂಬಸ್ಥರು ಮರಳಿ ಮನೆಗೆ ಕರೆತಂದಿದ್ದು, ಸಾಮಾಜಿಕ ಜಾಲತಾಣವು 15 ವರ್ಷಗಳ ವಿರಹವನ್ನು ಕೊನೆಗೊಳಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋದಿಂದಾಗಿ ಕಳೆದ 15 ವರ್ಷಗಳಿಂದ ನಾಪತ್ತೆಯಾಗಿದ್ದ ನಿವೃತ್ತ ಯೋಧನೋರ್ವರು ಅವರ ಕುಟುಂಬಕ್ಕೆ ಮರಳಿ ಸಿಕ್ಕಿದ್ದಾರೆ. 15 ವರ್ಷಗಳ ಹಿಂದೆ ಕೆಲಸ ಅರಸಿ ಹೋದ ನಿವೃತ್ತ ಯೋಧ ಬಲದೇವ್‌ ಕುಮಾರ್ ಅವರು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಕುಟುಂಬದವರು ಹುಡುಕಾಡದ ಜಾಗವಿರಲಿಲ್ಲ. ಪೊಲೀಸರಿಗೆ ದೂರು ನೀಡುವುದರ ಜೊತೆಗೆ ಮನೆ ಮಗನಿಗಾಗಿ ಕುಟುಂಬಸ್ಥರೆಲ್ಲರ ವ್ಯಾಪಕ ಶೋಧ ಫಲ ಕೊಡಲೇ ಇಲ್ಲ. ತೀವ್ರ ಹುಡುಕಾಟದ ನಂತರವೂ ಬಲದೇವ್ ಅವರು ಸಿಗದೇ ಹೋದಾಗ ಅವರ ಕುಟುಂಬದವರು ಬಲದೇವ್ ಅವರು ಸಾವನ್ನಪ್ಪಿದ್ದಾರೆ ಎಂದೇ ಭಾವಿಸಿದ್ದರು. ಆದರೆ ಬರೋಬ್ಬರಿ 15 ವರ್ಷಗಳ ನಂತರ ವೈರಲ್ ವೀಡಿಯೋವೊಂದರ ಮೂಲಕ ಅವರು ಕಾಣಿಸಿಕೊಂಡಿದ್ದು, ಈಗ ಅವರ ಕುಟುಂಬದವರು ಹೋಗಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಅಂದಹಾಗೆ ಈ ವಿಚಿತ್ರ ಘಟನೆ ನಡೆದಿರುವುದು ಹಿಮಾಚಲ ಪ್ರದೇಶದ ಸುಜಾನ್‌ಪುರ ಜಿಲ್ಲೆಯ ಘರ್ತೊಲಿ ಗ್ರಾಮದಲ್ಲಿ.

ಬಲ್‌ದೇವ್‌ ಕುಮಾರ್ ಪತ್ತೆಯಾಗಿದ್ದು ಹೇಗೆ?

ಮೂರು ದಿನಗಳ ಹಿಂದೆ ರಾಜಸ್ಥಾನದ ಬಿಕನೇರ್‌ನಲ್ಲಿ ಕುಟುಂಬವೊಂದು ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಒಬ್ಬರು ಅಪರಿಚಿತ ವ್ಯಕ್ತಿಯ ಫೋಟೋವನ್ನು ಪೋಸ್ಟ್ ಮಾಡಿ ಈ ವ್ಯಕ್ತಿಯ ಗುರುತು ಪತ್ತೆ ಮಾಡುವಂತೆ ಆ ಕುಟುಂಬ ಕೇಳಿಕೊಂಡಿತ್ತು. ರಾಜಸ್ಥಾನದ ಈ ವೀಡಿಯೋ ಹಿಮಾಚಲ ಪ್ರದೇಶದ ಸುಜಾನ್‌ಪುರದ ಸಪ್ನಾಕುಮಾರಿ ಎಂಬುವವರನ್ನು ತಲುಪಿದೆ. ಅವರು ಈ ವಿಡಿಯೋವನ್ನು ಸ್ಥಳೀಯವಾಗಿ ಹಂಚಿಕೊಂಡಿದ್ದರು. ಇದನ್ನು ಬಲದೇವ್ ಕುಮಾರ್ ಅವರ ಕುಟುಂಬದವರು ವೀಕ್ಷಿಸಿದ್ದು, ಶಾಕ್ ಆಗಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ

ನಾಪತ್ತೆಯಾದ 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಮ್ಮ ಮನೆ ಮಗನ ನೋಡಿ ಅವರು ಅಚ್ಚರಿ ಹಾಗೂ ಭಾವುಕರಾಗಿದ್ದಲ್ಲೇ ಆತನನ್ನು ಕೂಡಲೇ ಗುರುತಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮಗನನ್ನು ಕರೆತರುವುದಕ್ಕಾಗಿ ಅವರು ಕೂಡಲೇ ರಾಜಸ್ಥಾನದ ಬಿಕನೇರ್‌ಗೆ ಹೊರಟು ನಿಂತಿದ್ದಾರೆ. ನಂತರ ಅಲ್ಲಿಗೆ ತಲುಪಿದ ಕುಟುಂಬ ಬಲ್‌ದೇವ್ ಅವರನ್ನು ಕರೆದುಕೊಂಡು ವಾಪಸ್ ಮನೆಗೆ ಬಂದಿದ್ದಾರೆ. ಊರಿನ ಜನ ಬಲದೇವ್ ಅವರನ್ನು ಬ್ಯಾಂಡ್ ವಾಲಗದ ಮೂಲಕ ಗ್ರಾಮಕ್ಕೆ ಸ್ವಾಗತಿಸಿದ್ದಾರೆ.

ತಮ್ಮ ಮಗನನ್ನು ಮತ್ತೆ ಕುಟುಂಬದ ಜೊತೆ ಸೇರಿಸಿದ್ದಕ್ಕಾಗಿ ಬಲದೇವ್‌ ಕುಮಾರ್ ಅವರ ಕುಟುಂಬದವರು ಈಗ ತಮ್ಮದೇ ಗ್ರಾಮದ ಸಪ್ನಾಕುಮಾರಿ ಹಾಗೂ ಬಲ್‌ದೇವ್ ಅವರಿಗೆ ಆಶ್ರಯ ನೀಡಿದ ಗೌರವ್‌ ಜೈನ್ ಹಾಗೂ ಕುಟುಂಬದವರಿಗೆ ಧನ್ಯವಾದ ಹೇಳಿದ್ದಾರೆ. ಅವರಿಂದಲೇ ಈ ಪವಾಡ ಸಾಧ್ಯವಾಯ್ತು. ಸಾಮಾಜಿಕ ಜಾಲತಾಣದಿಂದ ನಮ್ಮ 15 ವರ್ಷಗಳ ಗಾಯ ವಾಸಿ ಆಯ್ತು. ನಮ್ಮ ಕಳೆದುಹೋದ ಮಗ ಮರಳಿ ಸಿಕ್ಕಿದ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ

ಇದಕ್ಕೂ ಮೊದಲು 2018ರಲ್ಲಿ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಮದುವೆಯಾಗಿ ಮಗುವನ್ನು ಹೊಂದಿದ್ದ ವ್ಯಕ್ತಿಯೊಬ್ಬ ಕಾಣೆಯಾದ ಹಲವು ವರ್ಷಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಪತ್ತೆಯಾಗಿದ್ದ. ಆತ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಪತ್ತೆಯಾಗುತ್ತಿದ್ದಂತೆ ಆತನ ಪತ್ನಿ, ಆತ ಬೇರೆಯವರ ಜೊತೆಗೆ ಮದುವೆಯಾಗಿದ್ದಾನೆ. ಇದು ಆತನ ಮನೆಯವರಿಗೂ ತಿಳಿದಿತ್ತು. ಆದರೂ ಆತನ ನಾಪತ್ತೆಗೆ ನನ್ನ ಮೇಲೆ ಆರೋಪ ಹೊರಿಸಿದ್ದರು ಎಂದು ಆರೋಪಿಸಿದ್ದರು ಎಂದು ಮಹಿಳೆ ದೂರಿದ್ದರು.