ಮಾನಸಿಕ ಅಸ್ವಸ್ಥನೊಬ್ಬನನ್ನು ರಕ್ಷಿಸಲು ಹೋದ ಪುರಸಭೆ ನೌಕರನನ್ನೇ ಆತ ಕಟ್ಟಡದಿಂದ ಕೆಳಗೆ ತಳ್ಳಿದ್ದಾನೆ. ಗಂಭೀರವಾಗಿ ಗಾಯಗೊಂಡ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳದವರು ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಿಸಿದ್ದಾರೆ.
ಮಾನಸಿಕ ಅಸ್ವಸ್ಥನೋರ್ವ ಪ್ರಾಣ ಉಳಿಸುವುದಕ್ಕೆ ಹೋಗಿ ಅನಾಹುತ:
ಮಾನಸಿಕ ಅಸ್ವಸ್ಥನೋರ್ವ ಪ್ರಾಣ ಉಳಿಸುವುದಕ್ಕೆ ಹೋಗಿ ಯುವಕನೋರ್ವ ಕಟ್ಟಡದಿಂದ ಕೆಳಗೆ ತಳ್ಳಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನ ಚೌಕ್ ಬಜಾರ್‌ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಸ್ಥಳೀಯರ ಮೊಬೈಲ್ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬರಿಗೈಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಮಾನಸಿಕ ಅಸ್ವಸ್ಥನ ರಕ್ಷಣೆ ಮಾಡಲು ಹೋಗಿದ್ದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಕ್ಷಿಸಲು ಬಂದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ:
ಬಹ್ರೈಚ್ ನಗರದ ಚೌಕ್ ಬಜಾರ್‌ನಲ್ಲಿರುವ ಗಡಿಯಾರ ಸ್ಮಾರಕವನ್ನು ಹತ್ತಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಗಲಾಟೆ ಮಾಡಿದ್ದಾನೆ. ಈತನನ್ನು ನೋಡಿದ ಪುರಸಭೆಯ ನೌಕರರೊಬ್ಬರು ಆತನನ್ನು ರಕ್ಷಿಸುವುದಕ್ಕಾಗಿ ಏಣಿ ಇಟ್ಟು ಸ್ಮಾರಕದ ಮೇಲೆ ಏರಿದ್ದಾರೆ. ಈ ವೇಳೆ ಆ ಮಾನಸಿಕ ಅಸ್ವಸ್ಥ ಆ ಪುರಸಭೆಯ ನೌಕರನನ್ಣೇ ಮೇಲಿನಿಂದ ತಳ್ಳಿದ್ದರಿಂದ ಅವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ನಂತರ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಈ ಗಡಿಯಾರ ಟವರ್ ಏರಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಣೆ ಮಾಡಲಾಯ್ತು.
ಮಂಗಳವಾರ ಬೆಳಗ್ಗೆ ಘಂಟಾಘರ್ ಚೌಕ್‌ನಲ್ಲಿ ರೋಟರಿ ಕ್ಲಬ್ ನಿರ್ಮಿಸಿದ ಸ್ಮಾರಕವನ್ನು ಏರಿದ್ದ ಮಾನಸಿಕ ಅಸ್ವಸ್ಥ ಯುವಕನೊಬ್ಬ ಅಲ್ಲಿನ ಸ್ಮಾರಕದಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಮತ್ತು ವೈ-ಫೈ ಕೇಬಲ್‌ಗಳನ್ನು ಮುರಿದು ಹಾಕಿದ್ದ. ನಂತರ ಆ ಕೇಬಲ್‌ಗಳನ್ನು ತನ್ನ ದೇಹಕ್ಕೆ ಜೋಡಿಸಿಕೊಂಡು, ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದ. ಕೆಲವೊಮ್ಮೆ ಆತ ನೃತ್ಯ ಮಾಡಿದರೆ ಮತ್ತೆ ಕೆಲವೊಮ್ಮೆ ಹಾಡು ಹಾಡುತ್ತಿದ್ದ. ಈತನನ್ನು ನೋಡಿ ಆ ಗಡಿಯಾರ ಚೌಕದಲ್ಲಿ ಜನ ಸೇರಿದ್ದು, ಯುವಕನನ್ನು ಕೆಳಗೆ ಬರುವಂತೆ ಒತ್ತಾಯಿಸಿದ್ದಾರೆ. ಆದರೆ ಅವನು ಕೆಳಗೆ ಬರಲು ನಿರಾಕರಿಸಿದ್ದಾನೆ.
ಇದನ್ನೂ ಓದಿ: ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು 20 ನಿಮಿಷದಲ್ಲಿ ಮದುವೆ ಮುರಿದ ಯುವತಿ
ಈ ನಡುವೆ ಸ್ಥಳದಲ್ಲಿದ್ದ ಪುರಸಭೆಯ ಉದ್ಯೋಗಿಯೊಬ್ಬರು ಅವರನ್ನು ಕೆಳಗೆ ಇಳಿಸಲು ಸಹಾಯ ಮಾಡುವುದಕ್ಕೆ ಬಿದಿರಿನ ಏಣಿ ಇರಿಸಿ ಮೇಲೆ ಹತ್ತಿದ್ದಾರೆ. ಆದರೆ ಆ ಮಾನಸಿಕ ಅಸ್ವಸ್ಥ ಜೀವ ಉಳಿಸಲು ಬಂದವನನ್ನೇ ಕೆಳಗೆ ತಳ್ಳಿದ್ದಾನೆ. ಪರಿಣಾಮ ಆ ಯುವಕ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇದಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಘಟನೆಯ ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜೆಸಿಬಿ ತರಿಸಿ ಯುವಕನನ್ನು ಕೆಳಗೆ ಇಳಿಸಿದ್ದಾರೆ. ಅಗ್ನಿಶಾಮಕ ದಳದ ಅಶಿಶ್ ಯಾದವ್ ಅವರು ಸ್ಮಾರಕವನ್ನು ಏರಿ ಸುಮಾರು ಒಂದು ಗಂಟೆಗಳ ಕಾಲ ಪ್ರಯತ್ನ ಮಾಡಿ ಮೂರು ಕಡೆಯಿಂದ ಯುವಕನನ್ನು ಸುತ್ತುವರೆದು ಆ ಯುವಕನನ್ನು ಕೆಳಗೆ ಇಳಿಸಿದ್ದಾರೆ, ಈ ವೇಳೆ ಮಾನಸಿಕ ಅಸ್ವಸ್ಥ ಅವರೊಂದಿಗೂ ಜಗಳವಾಡಿದ್ದಾನೆ.
ಇದನ್ನೂ ಓದಿ: 11,691 ರೂ. ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೀಗೆ ಕಟ್ಟಡದ ಮೇಲೇರಿ ಗಲಾಟೆ ಮಾಡಿದ ಯುವಕನನ್ನು ಕೊತ್ವಾಲಿ ಪ್ರದೇಶದ ಗುಡ್ಡಿ ಮೊಹಲ್ಲಾ ನಿವಾಸಿ 25 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಆಗಾಗ್ಗೆ ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆ ವರದಿಯಾದ ತಕ್ಷಣ ತಂಡ ಸ್ಥಳಕ್ಕೆ ಆಗಮಿಸಿತು. ಅಗ್ನಿಶಾಮಕ ದಳದವರ ಸಹಾಯದಿಂದ ಯುವಕನನ್ನು ಕೆಳಗಿಳಿಸಲಾಯಿತು. ಪೊಲೀಸ್ ಠಾಣೆಯಲ್ಲಿ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಆತನ ಕೃತ್ಯಗಳು ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದೆ. ಆತನನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಸಿಂಗ್ ಹೇಳಿದ್ದಾರೆ.


