ಬೆಂಗಳೂರು :  ವಾಯುವಿಹಾರಕ್ಕೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರನ್ನು ‘ವಾಟ್ಸಪ್‌ ಗ್ರೂಪ್‌’ಗಳ ಸಹಾಯದಿಂದ ಶುಕ್ರವಾರ ಅವರ ಕುಟುಂಬದವರಿಗೆ ಪೊಲೀಸರು ಒಪ್ಪಿಸಿರುವ ಕುತೂಹಲಕಾರಿ ಘಟನೆ ಎಚ್‌ಎಎಲ್‌ನಲ್ಲಿ ನಡೆದಿದೆ.

ಎಚ್‌ಎಎಲ್‌ ಮೂರನೇ ಹಂತದ ನಿವಾಸಿ ಅಂಡಾಳಮ್ಮ (75) ಅವರೇ ಪತ್ತೆಯಾಗಿದ್ದು, ಗುರುವಾರ ಸಂಜೆ ವಾಯು ವಿಹಾರಕ್ಕೆಂದು ಮನೆಯಿಂದ ಹೊರ ಹೋದಾಗ ಅವರು ತಪ್ಪಿಸಿಕೊಂಡಿದ್ದರು. ಬಳಿಕ ಅಪರಾಧ ನಿಯಂತ್ರಣಕ್ಕೆ ನಾಗರಿಕ ಜತೆ ಸೇರಿ ಪೊಲೀಸರ ವಾಟ್ಸಪ್‌ ಗ್ರೂಪ್‌ಗಳು ಅಜ್ಜಿ ಕುಟುಂಬವರ ಪತ್ತೆಗೆ ನೆರವಾಗಿವೆ.

ಅಂಡಾಳಮ್ಮ ಅವರು, ತಮ್ಮ ಮಗಳ ಕುಟುಂಬದ ಜತೆ ನೆಲೆಸಿದ್ದಾರೆ. ಅವರ ಪುತ್ರಿ ಪ್ರಭಾ ಮತ್ತು ಅಳಿಯ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳಾಗಿದ್ದಾರೆ. ವಾಯು ವಿಹಾರಕ್ಕೆ ಮನೆಯಿಂದ ಹೊರ ಹೋದ ತಾಯಿ ರಾತ್ರಿ 9 ಗಂಟೆಯಾದರೂ ವಾಪಸಾಗದಿದ್ದಾಗ ಗಾಬರಿಗೊಂಡ ಕುಟುಂಬ ಸದಸ್ಯರು, ಸುತ್ತಮುತ್ತಲ ರಸ್ತೆಗಳಲ್ಲಿ ಹುಡುಕಾಡಿದ್ದರು. ಆದರೆ ಎಲ್ಲೂ ಅವರ ಸುಳಿವು ಸಿಗಲಿಲ್ಲ. ಕೊನೆಗೆ ಅವರ ಮಗಳು ಪ್ರಭಾ ಜೆ.ಬಿ.ನಗರ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು.

ಕಸುವನಹಳ್ಳಿಯ ಮನೆಯೊಂದರ ಬಳಿ ಶುಕ್ರವಾರ ಮಧ್ಯಾಹ್ನ ತೆರಳಿದ ಅಂಡಾಳಮ್ಮ, ಕುಡಿಯಲು ನೀರು ಕೇಳಿದ್ದರು. ಆಗ ನೀರು ಕೊಟ್ಟಮನೆಯವರು, ಅಜ್ಜಿಯ ಪೂರ್ವಾಪರ ವಿಚಾರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಜ್ಜಿ, ನನಗೆ ಮನೆ ವಿಳಾಸ ಮರೆತು ಹೋಗಿದೆ ಎಂದಿದ್ದರು. ಅಲ್ಲದೆ ಬೇರೇನೂ ನೆನಪಾಗದೆ ಚಡಪಡಿಸುತ್ತಿದ್ದರು. ಕೂಡಲೇ ಸ್ಥಳೀಯರು, ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ವಿಚಾರ ತಿಳಿದ ಬೆಳ್ಳಂದೂರು ಠಾಣೆ ಪೊಲೀಸರು, ಅಜ್ಜಿಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು.

ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಪ್ರತಿ ಠಾಣೆಯ ತಮ್ಮ ವ್ಯಾಪ್ತಿಯ ನಾಗರಿಕ ಸಮಿತಿ ಹಾಗೂ ಸ್ಥಳೀಯರನ್ನು ಸೇರಿಸಿಕೊಂಡು ವಾಟ್ಸಪ್‌ ಗ್ರೂಪ್‌ಗಳನ್ನು ರಚಿಸಿದ್ದೇವೆ. ಈ ವೃದ್ಧೆಯ ಫೋಟೋವನ್ನು ಆ ಎಲ್ಲ ಗ್ರೂಪ್‌ಗಳಿಗೂ ಹಾಕಿ ಮಾಹಿತಿ ಕೋರಿದ್ದೇವು. ಅದನ್ನು ನೋಡಿದ ಜೆ.ಬಿ.ನಗರ ಠಾಣೆ ಎಸ್‌ಐ ಲಿಂಗರಾಜು, ಈ ವೃದ್ಧೆ ಕಾಣೆಯಾದ ಗುರುವಾರ ರಾತ್ರಿ ನಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು. ಕೂಡಲೇ ಪ್ರಭಾ ಅವರಿಗೆ ಕರೆ ಮಾಡಿ ಠಾಣೆಗೆ ಕರೆಸಿದಾಗ ತಾಯಿಯನ್ನು ನೋಡುತ್ತಿದ್ದಂತೆಯೇ ಭಾವಪರವಶವಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಿಪಿಎಸ್‌ ಕಳಚಿಟ್ಟಿದ್ದರು:  ನಮ್ಮ ತಾಯಿಗೆ ಮರೆಗುಳಿ ಸಮಸ್ಯೆ ಕಾರಣಕ್ಕೆ ಅವರ ಕೊರಳಿಗೆ ಯಾವಾಗಲೂ ಜಿಪಿಎಸ್‌ ಉಪಕರಣ ಹಾಕಿರುತ್ತೇವೆ. ಗುರುವಾರ ವಾಯುವಿಹಾರಕ್ಕೆ ಹೋಗುವಾಗ ಅದನ್ನು ತೆಗೆದಿಟ್ಟು ಹೋಗಿದ್ದರಿಂದ ಸಮಸ್ಯೆ ಉಂಟಾಯಿತು. ನಮ್ಮ ತಾಯಿ ಹುಡುಕಿಕೊಟ್ಟ ಪೊಲೀಸರು ಹಾಗೂ ಅದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಭಾ ಹೇಳಿದ್ದಾರೆ.