ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್ ಆಗಿದೆ. ಯುವಕನೊಬ್ಬ ಭಾರತ ಬಾಂಗ್ಲಾದೇಶ ಗಡಿಯಲ್ಲಿ ಹಾಕಿರುವ ಫೆನ್ಸಿಂಗ್ ಹಾರಿ ಭಾರತ ಪ್ರವೇಶಿಸಿದ್ದಾನೆ. ಈತ ಎಲ್ಲಿಯೂ ಭಾರತದ ಭದ್ರತೆ ಸವಾಲು ಎದುರಿಸಿಲ್ಲ.
ನವದೆಹಲಿ (ಡಿ.11) ಭಾರತ ಹಾಗೂ ಬಾಂಗ್ಲಾದೇಶ ಗಡಿಯಲ್ಲಿ ಆತಂಕ ಹೆಚ್ಚಾಗುತ್ತಿದೆ. ಒಂದೆಡೆ ಚುನಾವಣಾ ಆಯೋಗ SIR ಮೂಲಕ ಕೆಲ ರಾಜ್ಯಗಳು ಅಕ್ರಮ ಬಾಂಗ್ಲಾದೇಶಿಗಳನ್ನು ಹೊರಗೆ ಹಾಕುವ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದೆಡೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುಕೋರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತ ಹಾಗೂ ಬಾಂಗ್ಲಾದೇಶ ಗಡಿಯ ಹಲವು ಭಾಗದಲ್ಲಿ ಬಾಂಗ್ಲಾದೇಶ ಅಕ್ರಮ ನುಸುಳುಕೋರರು ಯಾವುದೇ ಅಡ್ಡಿ ಆತಂಕವಿಲ್ಲದೆ ಭಾರತ ಪ್ರವೇಶಿಸುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಕ್ರಮ ಬಾಂಗ್ಲಾದೇಶಿ ಭಾರತ ಪ್ರವೇಶ ಮಾಡುತ್ತಿದ್ದಾನೆ. ಭಾರತೀಯ ಸೇನೆ, ಬಿಎಸ್‌ಎಫ್ ಸೇರಿದಂತೆ ಭಾರತ ಭದ್ರತಾ ಪಡೆಗಳಿಂದ ಯಾವುದೇ ಸವಾಲು ಎದುರಿಸಿಲ್ಲ ಅನ್ನೋದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಫೆನ್ಸಿಂಗ್ ಗಡಿ ಬಳಿ ನಡೆದ ದೃಶ್ಯ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಬಾಂಗ್ಲಾದೇಶ ಗಡಿಯಿಂದ ಒಳಗೆ ಬಂದು ಮುಳ್ಳಿನ ತಂತಿಯ ಫೆನ್ಸಿಂಗ್ ಹತ್ತಿದ್ದಾನೆ. ಇತ್ತ ಭಾರತದೊಳಗೆ ನಿಂತಿರುವ ವ್ಯಕ್ತಿಯೊಬ್ಬ ಯುವಕ ಫೆನ್ಸಿಂಗ್ ಹತ್ತುತ್ತಿರುವ ವಿಡಿಯೋ ಮಾಡುತ್ತಿದ್ದಾನೆ. ಯುವಕ ಮೇಲೆ ಹತ್ತಿ ಸಿನಿಮಾ ಶೈಲಿಯಲ್ಲಿ ಫೋಸ್ ನೀಡಿ ಬಳಿಕ ಫೆನ್ಸಿಂಗ್ ಮೇಲಿನಿಂದ ಭಾರತಕ್ಕೆ ಹಾರಿದ್ದಾನೆ. ಇದೇ ವಿಡಿಯೋದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಫೆನ್ಸಿಂಗ್ ಗಡಿಯನ್ನು ತೋರಿಸಲಾಗಿದೆ. ಇಲ್ಲಿ ಯಾವುದೇ ಭದ್ರತಾ ಪಡೆಗಳು ಇಲ್ಲ. ಕೇವಲ ಇಬ್ಬರು ಮಾತ್ರ ಇಡೀ ಗಡಿಯಲ್ಲಿದ್ದಾರೆ. ಯಾವುದೇ ಆತಂಕವಿಲ್ಲದೆ ಒಳಗೆ ಪ್ರವೇಶಿಸಿದ್ದಾರೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.
ಭಾರತ ಹಾಗೂ ಬಾಂಗ್ಲಾ ಗಡಿಯಿಂದ ಭದ್ರತೆ ಸಮಸ್ಯೆ
ಭಾರತ ಹಾಗೂ ಪಾಕಿಸ್ತಾನ ಗಡಿಯಿಂದ ಭಯೋತ್ಪಾದಕರು ಅಕ್ರಮವಾಗಿ ಒಳನಸುಳುವಿಕೆ ಮಾಡಿದರೆ, ಇತ್ತ ಭಾರತ ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಗಳು ಒಳನುಸುಳುತ್ತಿದ್ದರೆ. ಬಳಿಕ ದೇಶದ ಎಲ್ಲಾ ಭಾಗದಲ್ಲಿ ಹಲವು ಹೆಸರುಗಳಿಂದ ಇಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಇವರಿಗೆ ಭಾರದಲ್ಲಿ ನಕಲಿ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಸೇರಿದಂತೆ ಹಲವು ನಕಲಿ ದಾಖಲೆಗಲನ್ನು ಒದಗಿಸಲಾಗುತ್ತದೆ. ಭಾರತ ಹಾಗೂ ಬಾಂಗ್ಲಾದೇಶ ಗಡಿ ಭಾರತಕ್ಕೆ ಭದ್ರತೆ ಸವಾಲು ಒಡ್ಡಿದೆ. ಪ್ರಮುಖವಾಗಿ ಇದೇ ಗಡಿಯ ಮೂಲಕ ಅಕ್ರಮ ನಸುಳುಕೋರರು ಮಾತ್ರವಲ್ಲ, ಅವರ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳು, ಅಕ್ರಮ ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಸಾಗಾಣೆ ಮಾಡುತ್ತಿದ್ದಾರೆ.
ವಿಡಿಯೋ ವೈರಲ್ ಬೆನ್ನಲ್ಲೇ ಹೆಚ್ಚಿದ ಆಕ್ರೋಶ
ಯುವಕ ರಾಜಾರೋಶವಾಗಿ ಭಾರತಕ್ಕೆ ಅಕ್ರಮವಾಗಿ ಒಳನುಸುಳುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅಕ್ರಮ ಬಾಂಗ್ಲಾದೇಶಿಗಳ ಸಂಖ್ಯೆ 1 ಕೋಟಿಗೂ ಅಧಿಕ ಇದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೇ 5 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾದೇಶಿಗಳಿದ್ದಾರೆ ಎಂದುು ವರದಿಗಳು ಹೇಳುತ್ತಿದೆ. ಭದ್ರತಾ ಪಡೆಗಳು ಈ ಗಡಿ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಕ್ರಮವಾಗಿ ನುಸುಳುತ್ತಿರುವ ಪ್ರತಿಯೊಬ್ಬರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.


