ಕಳೆದೋದ ಕಂದನ ಹುಡುಕಿಕೊಟ್ಟ ಅರಣ್ಯ ಸಿಬ್ಬಂದಿ: ಥ್ಯಾಂಕ್ಸ್ ಹೇಳಿದ ಅಮ್ಮ
ಇಲ್ಲೊಂದು ಕಾಡಾನೆ ಕಾಡಿನಲ್ಲಿ ಕಳೆದು ಹೋದ ತನ್ನ ಮರಿಯನ್ನು ಹುಡುಕಿಕೊಟ್ಟು ಜತೆ ಸೇರಿಸಿದ ಅರಣ್ಯ ಸಿಬ್ಬಂದಿಗೆ ತಾಯಿ ಆನೆ ಧನ್ಯವಾದ ತಿಳಿಸಿದೆ.
ಚೆನ್ನೈ: ಆನೆಗಳು ಬಹಳ ಬುದ್ಧಿವಂತ ಪ್ರಾಣಿಗಳು. ಮದವೇರಿದ ಸಂದರ್ಭ ಬಿಟ್ಟರೇ ಅವುಗಳು ತಮ್ಮನ್ನು ಪ್ರಚೋದಿಸದ ಹೊರತು ಅವುಗಳೇ ಮನುಷ್ಯರ ಮೇಲೆ ದಾಳಿಗೆ ಇಳಿಯುವುದು ತೀರಾ ವಿರಳ. ಕೆಲವು ಕಾಡಾನೆ ಹಾಗೂ ಮಾನವ ಸಂಘರ್ಷದ ನಡುವೆಯೂ ಕಾಡಾನೆಗಳ ತಾಳ್ಮೆ ಹಾಗೂ ಬುದ್ಧಿವಂತಿಕೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಇಲ್ಲೊಂದು ಕಾಡಾನೆ ಕಾಡಿನಲ್ಲಿ ಕಳೆದು ಹೋದ ತನ್ನ ಮರಿಯನ್ನು ಹುಡುಕಿಕೊಟ್ಟು ಜತೆ ಸೇರಿಸಿದ ಅರಣ್ಯ ಸಿಬ್ಬಂದಿಗೆ ತಾಯಿ ಆನೆ ಧನ್ಯವಾದ ತಿಳಿಸಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (Susanth Nanda) ತಮ್ಮ ಟ್ವಿಟ್ಟರ್ (Twitter Account) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದರು. ಈ ವೇಳೆ ತಾಯಿ ಆನೆ ಮರಿಯೊಂದಿಗೆ ಹೊರಟು ಹೋಗುವ ಮೊದಲು ಅರಣ್ಯ ಸಿಬ್ಬಂದಿಗೆ ಧನ್ಯವಾದ ತಿಳಿಸಿತು. ಇದೊಂದು ತುಂಬಾ ಮುದ್ದಾದ ಕ್ಷಣ ತಮಿಳುನಾಡು ಅರಣ್ಯ ಇಲಾಖೆಯಿಂದ (Tamilnadu Forest department) ಬಂದಂತಹ ದೃಶ್ಯ ಎಂದು ಬರೆದು ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಮರಿಯೊಂದಿಗೆ ಸಾಗುತ್ತಿರುವ ತಾಯಿ ಆನೆ (Mother elephant) ಸ್ವಲ್ಪ ತಿರುಗಿ ದೂರದಲ್ಲಿ ನಿಂತಿರುವ ಅರಣ್ಯ ಸಿಬ್ಬಂದಿಯತ್ತ ಸೊಂಡಿಲೆತ್ತಿ ನಮಸ್ಕರಿಸುತ್ತಿರುವುದು ಕಾಣಿಸುತ್ತಿದೆ. ಬಳಿಕ ಆನೆ ಮರಿಯೊಂದಿಗೆ ಮುಂದೆ ಸಾಗುತ್ತದೆ. ಈ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು. ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಕಾಡಾನೆಗಳು ತಮ್ಮ ದೊಡ್ಡದಾದ ಕುಟುಂಬದೊಂದಿಗೆ ಜೊತೆಯಾಗಿ ಬಾಳ್ವೆ ಮಾಡುತ್ತವೆ. ತಮ್ಮ ಗುಂಪಿನಲ್ಲಿ ಮರಿಗಳಿದ್ದಲ್ಲಿ ಆನೆಗಳು ಬಹಳ ಜಾಗರೂಕರಾಗಿರುತ್ತಾರೆ. ಹಿಂಡಿನಲ್ಲಿ ಸಂಚರಿಸುವಾಗ ಮರಿಗಳನ್ನು ಯಾರಿಗೂ ಕಾಣದಂತೆ ಮಧ್ಯದಲ್ಲಿ ಇರಿಸಿಕೊಂಡು ಹಿಂದೆ ಮುಂದೆ ಸುತ್ತಮುತ್ತ ದೊಡ್ಡಾನೆಗಳು ಸಾಗುತ್ತವೆ.
ರಸ್ತೆ ಮಧ್ಯೆಯೇ ಆಟವಾಡಿದ ಆನೆ ಮರಿಗಳು: ಐಎಎಸ್ ಅಧಿಕಾರಿ ಶೇರ್ ಮಾಡಿದ ಈ ವಿಡಿಯೋ ಸಖತ್ ವೈರಲ್..!
ಇನ್ನು ತಾಯಿಯ ಜೊತೆ ಮರಿಯನ್ನು ಸೇರಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೃದಯದ ಇಮೋಜಿಯನ್ನು ಕಾಮೆಂಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದೊಂದು ಸುಂದರವಾದ ದೃಶ್ಯ, ಆನೆಯ ಜೊತೆ ಎಲ್ಲಾ ಪ್ರಾಣಿಪ್ರಿಯರು ಕೂಡ ಅರಣ್ಯ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ಆನೆಯೊಂದು ಸುರಿಯುತ್ತಿರುವ ಜೋರಾದ ಮಳೆಯ ಮಧ್ಯೆ ತನ್ನ ಮರಿಗೆ ಅಡ್ಡಲಾಗಿ ನಿಂತು ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ (Viral video) ಆಗಿತ್ತು. ಇದು ಕೂಡ ತಮಿಳುನಾಡಿನ ಅರಣ್ಯದ ದೃಶ್ಯವಾಗಿದ್ದು, ಚಹಾ ತೋಟದಲ್ಲಿ ಸೆರ ಆದ ಅಪೂರ್ವ ದೃಶ್ಯವಾಗಿತ್ತು. ಆನೆ ಮರಿಗಳು ನೋಡುವುದಕ್ಕೆನೋ ದೊಡ್ಡ ಗಾತ್ರದಲ್ಲಿ ಕಾಣಿಸಬಹುದು. ಆದರೆ ಹುಟ್ಟುವಾಗ 100 ಕೆಜಿಗೂ ಹೆಚ್ಚು ತೂಗುವ ಈ ಆನೆ ಮರಿಗಳು ಇತರ ಪ್ರಾಣಿಗಳ ಮರಿಗಳಂತೆ ನೋಡಲು ತುಂಬಾ ಮುದ್ದಾಗಿರುತ್ತವೆ. ಜೊತೆಗೆ ಆಟವಾಡಲು ತುಂಬಾ ಇಷ್ಟಪಡುತ್ತವೆ. ತಮ್ಮನ್ನು ಮುದ್ದಿಸುವುದನ್ನು ಅವುಗಳು ಬಹುವಾಗಿ ಇಷ್ಟಪಡುತ್ತವೆ. ಆನೆ ಸಾಕುವವರು ಆನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಸದಾ ಅವುಗಳ ಕಾಳಜಿ ಮಾಡುತ್ತಾರೆ. ಹಾಗೆಯೇ ಕೆಲ ದಿನಗಳ ಹಿಂದೆ ಆನೆ ಮರಿ ತನ್ನ ನೋಡಿಕೊಳ್ಳುವವನ ಮೇಲೆ ಬಿದ್ದು ಮುದ್ದಾಟ ಆಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ
ಆನೆಗಳು ಕೂಡ ಹೇಳಿ ಕೇಳಿ ಮನುಷ್ಯರಷ್ಟೇ ಬುದ್ಧಿವಂತ ಪ್ರಾಣಿಗಳು. ಹಿಂಡು ಹಿಂಡುಗಳಾಗಿ ಕುಟುಂಬ ಜೀವನವನ್ನು ಆನೆಗಳು ಮಾಡುತ್ತವೆ. ಇವುಗಳು ತಮ್ಮ ನವಜಾತ ಕಂದನ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳು ಮಾತ್ರ ನೋಡುಗರನ್ನು ಹುಬ್ಬೇರುವಂತೆ ಮಾಡುತ್ತಿದೆ. ಇವುಗಳು ಮರಿಗಳಿಗೆ ನೀಡುತ್ತಿರುವ ಭದ್ರತೆ ನಮ್ಮ ದೇಶದಲ್ಲಿ ಪ್ರಮುಖ ರಾಜಕಾರಣಿಗಳಿಗೆ ನೀಡುವ z+ ಭದ್ರತೆಯನ್ನು ಮೀರಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.