ಕೆನಡಾದ ಟೊರೆಂಟೋ ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 20 ವರ್ಷದ ಶಿವಾಂಕ್ ಅವಸ್ಥಿ ಸಾವಿಗೀಡಾದ ವಿದ್ಯಾರ್ಥಿ.
ನವದೆಹಲಿ: ಕೆನಡಾದ ಟೊರೆಂಟೋ ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 20 ವರ್ಷದ ಶಿವಾಂಕ್ ಅವಸ್ಥಿ ಸಾವಿಗೀಡಾದ ವಿದ್ಯಾರ್ಥಿ. ಸಂಶೋಧನಾ ವಿದ್ಯಾರ್ಥಿಯಾಗಿದ್ದ ಶಿವಾಂಕ್ ಅವಸ್ಥಿ ಮಂಗಳವಾರ ಕಾಲೇಜು ಆವರಣದಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮಂಗಳವಾರ ಮಧ್ಯಾಹ್ನ 3:34 ರ ಸುಮಾರಿಗೆ, ಹೈಲ್ಯಾಂಡ್ ಕ್ರೀಕ್ ಟ್ರಯಲ್ ಮತ್ತು ಓಲ್ಡ್ ಕಿಂಗ್‌ಸ್ಟನ್ ರಸ್ತೆ ಪ್ರದೇಶದಲ್ಲಿ ಅಪರಿಚಿತರೊಬ್ಬರು ಮಾಡಿದ ತುರ್ತು ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಪೊಲೀಸರಿಗೆ ಅಲ್ಲಿ ಶಿವಾಂಕ್ ಅವಸ್ಥಿ ಪತ್ತೆಯಾಗಿದ್ದಾರೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೆ ನೀಡುವಂತೆ ಪೊಲೀಸರು ದೂರವಾಣಿ ಸಂಖ್ಯೆ 416-808-7400 ಯನ್ನು ನೀಡಿದ್ದಾರೆ. ಭಾರತೀಯ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆಗೆ ಭಾರತವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಭಾರತೀಯ ಕನ್ಸುಲೇಟ್ ಜನರಲ್ ಅವರು ವಿಷಾದ ವ್ಯಕ್ತಪಡಿಸಿದ್ದು, ಮೃತನ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ನಡೆದ ಮಾರಕ ಗುಂಡಿನ ದಾಳಿ ಘಟನೆಯಲ್ಲಿ ಯುವ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿ ಶ್ರೀ ಶಿವಾಂಕ್ ಅವಸ್ಥಿ ಅವರ ದುರಂತ ಸಾವಿನ ಬಗ್ಗೆ ನಾವು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತೇವೆ ಎಂದು ಭಾರತೀಯ ಕಾನ್ಸುಲೇಟ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ಭಾರತದ ಕಾನ್ಸುಲೇಟ್ ಜನರಲ್ ಸಂಪರ್ಕದಲ್ಲಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದೆ ಎಂದು ಅದು ಹೇಳಿದೆ.
ಕಳೆದ ವಾರವಷ್ಟೇ, ಟೊರೊಂಟೊದಲ್ಲಿ 30 ವರ್ಷದ ಭಾರತೀಯ ಮಹಿಳೆ ಹಿಮಾಂಶಿ ಖುರಾನಾ ಹತ್ಯೆಯಾಗಿತ್ತು. ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ ಡಬ್ಲ್ಯೂ ಪ್ರದೇಶದಲ್ಲಿ ಅವರು ನಾಪತ್ತೆಯಾದ ಬಗ್ಗೆ ದೂರು ದಾಖಲಾದ ಒಂದು ದಿನದ ನಂತರ, ಶನಿವಾರ ಪೊಲೀಸರು ಆಕೆಯ ಶವವನ್ನು ನಿವಾಸವೊಂದರಲ್ಲಿ ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಂಕಿತ ಆರೋಪಿ 32 ವರ್ಷದ ಅಬ್ದುಲ್ ಗಫೂರಿ ವಿರುದ್ಧ ಪ್ರಥಮ ದರ್ಜೆ ಕೊಲೆ ಆರೋಪದ ಮೇಲೆ ಪೊಲೀಸರು ವಾರಂಟ್ ಹೊರಡಿಸಿದ್ದಾರೆ. ಗಫೂರಿ ಟೊರೊಂಟೊ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಫೂರಿ ಮತ್ತು ಹಿಮಾಂಶಿ ಖುರಾನಾ ಮಧ್ಯೆ ಆತ್ಮೀಯ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದರು. ಹಿಮಾಂಶಿ ಖುರಾನಾ ಸಾವಿಗೂ ಭಾರತೀಯ ಕಾನ್ಸುಲೇಟ್ ತೀವ್ರ ಸಂತಾಪ ವ್ಯಕ್ತಪಡಿಸಿ ಕುಟುಂಬದವರಿಗೆ ಎಲ್ಲಾ ಅಗತ್ಯ ಸಹಾಯವನ್ನು ನೀಡಲಾಗುವುದು ಎಂದು ಘೋಷಿಸಿತ್ತು.
ಇದನ್ನೂ ಓದಿ: ಸಾಕುನಾಯಿಯ ಅನಾರೋಗ್ಯದಿಂದ ಖಿನ್ನತೆ: ಸೋದರಿಯರಿಬ್ಬರು ಸಾವಿಗೆ ಶರಣು
ಟೊರೊಂಟೊದಲ್ಲಿ ನಡೆದ ಯುವ ಭಾರತೀಯ ಪ್ರಜೆ ಹಿಮಾಂಶಿ ಖುರಾನಾ ಅವರ ಹತ್ಯೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ. ಈ ತೀವ್ರ ದುಃಖದ ಕ್ಷಣದಲ್ಲಿ ಅವರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಕಳೆದ ಕೆಲವು ದಿನಗಳಿಂದ ಕಾನ್ಸುಲೇಟ್ ಈ ವಿಷಯದೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಭಾರತೀಯ ಕಾನ್ಸುಲೇಟ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ: ಆನ್ಲೈನ್ ಬೆಟ್ಟಿಂಗ್‌ನಲ್ಲಿ ಒಂದು ಲಕ್ಷ ಕಳೆದುಕೊಂಡ ವಿದ್ಯಾರ್ಥಿ ಸಾವಿಗೆ ಶರಣು


