ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಕಾಂಗ್ರೆಸ್ ಘಟಕವೇ ತಿರುಗಿಬಿದ್ದಿದೆ. ತಮಿಳುನಾಡಿನ ಅನುಮತಿಯಿಲ್ಲದೆ ಒಂದೇ ಒಂದು ಇಟ್ಟಿಗೆಯನ್ನೂ ಹಾಕಲು ಬಿಡುವುದಿಲ್ಲವೆಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಯಂ ಟ್ಯಾಗೋರ್ ಎಚ್ಚರಿಕೆ ನೀಡಿದ್ದಾರೆ.
- ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್
- ತಮಿಳುನಾಡು ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಎಚ್ಚರಿಕೆ
ಪಿಟಿಐ( ಚೆನ್ನೈ ಜು.3): ''ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ತಮಿಳುನಾಡಿನ ಅನುಮತಿಯಿಲ್ಲದೆ ಒಂದು ಇಟ್ಟಿಗೆಯನ್ನೂ ಹಾಕುವುದಕ್ಕೆ ಬಿಡುವುದಿಲ್ಲ’ ಎಂದು ತಮಿಳ್ನಾಡು ಕಾಂಗ್ರೆಸ್ ಅಧ್ಯಕ್ಷ ಬಿ. ಮಾಣಿಕ್ಯಂ ಟ್ಯಾಗೋರ್ ಅವರು ತಮ್ಮದೇ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಧ್ಯಕ್ಷ ಗಾದಿಗೇರಿದ್ದ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೊಂದಿಗೆ ಗುರುವಾರ ಸಭೆ ನಡೆಸಿದ ಅವರು, ಈ ವೇಳೆ ನಾಯಕರು ಕೆಲವು ನಿರ್ಧಾರಗಳನ್ನು ತೆಗೆದುಕೊಂಡರು. ಅದರಲ್ಲಿ ಕರ್ನಾಟಕ ಜಾರಿಗೆ ತರಲು ಸಜ್ಜಾಗಿರುವ ಮೇಕೆದಾಟು ವಿರೋಧವೂ ಸೇರಿದೆ.
‘ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅಂತಿಮ ತೀರ್ಪು ಮತ್ತು 2018ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಯೋಜನೆ ರೂಪಿಸುತ್ತಿದೆ. ಕರ್ನಾಟಕ ಸರ್ಕಾರದ ಏಕಪಕ್ಷೀಯ ನಡೆಗಳನ್ನು ಎದುರಿಸಲು, ತಮಿಳುನಾಡು ರೈತರ ಪರ ನಿಲ್ಲಲು ರಾಜ್ಯ ಕಾಂಗ್ರೆಸ್ ಸಿದ್ಧವಾಗಿದೆ’ ಎಂದು ಸಭೆ ನಿರ್ಣಯ ಅಂಗೀಕರಿಸಿದೆ. ಇದೇ ಸಂದರ್ಭದಲ್ಲಿ ಕಾವೇರಿ ತೀರದ ರೈತರ ಹಕ್ಕುಗಳನ್ನು ರಕ್ಷಿಸಲು ರಾಜ್ಯಾದ್ಯಂತ ಆಂದೋಲನಗಳನ್ನು ನಡೆಸುತ್ತೇವೆ ಎಂದು ಮಾಣಿಕ್ಯಂ ಹೇಳಿದರು.


