ಕೇರಳದ ಎರ್ನಾಕುಲಂನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯೊಬ್ಬರ ಜೀವವನ್ನು ಇಬ್ಬರು ದಾದಿಯರು ಸಮಯಪ್ರಜ್ಞೆಯಿಂದ ಉಳಿಸಿದ್ದಾರೆ. ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಸ್ಥಳೀಯ ಆಸ್ಪತ್ರೆಯ ನರ್ಸ್, ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಬಂದು ಸಿಪಿಆರ್ ನೀಡಿ ವ್ಯಕ್ತಿಯ ಪ್ರಾಣ ರಕ್ಷಿಸಿದ್ದಾರೆ.
ಎರ್ನಾಕುಲಂ (ಜು.3): ಬೆಂಗಳೂರಲ್ಲಿ ನರ್ಸಿಂಗ್ ಓದುತ್ತಿದ್ದ ಒಬ್ಬ ನರ್ಸ್ ಸೇರಿ ಕೇರಳದ ಎರ್ನಾಕುಲಂ ಜಿಲ್ಲೆಯ ಇಬ್ಬರು ದಾದಿಯರ ಸಮಯಪ್ರಜ್ಞೆಯು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದಾಗ ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದೆ. ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸ್ಟಾಫ್ ನರ್ಸ್ ಅಂಜಲಿ ಬೈಜು ಮತ್ತು ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್ ಅವರೇ ಈ ಜೀವರಕ್ಷಕರು.
ಬುಧವಾರ ಬೆಳಿಗ್ಗೆ ಕಾಲಡಿ ಸೇತುವೆ ಬಳಿ ಸಿನೋಜ್ ಎಂಬುವರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಟ್ರಾಫಿಕ್ ಜಾಮ್ ಕಾರಣ ಸಂಚಾರ ಸ್ಥಗಿತಗೊಂಡಿದ್ದರಿಂದ, ಕಾರಿನೊಳಗೆ ಕುಸಿದು ಬಿದ್ದಿದ್ದರು.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನರ್ಸ್‌ಗಳು ರಸ್ತೆಬದಿಯಲ್ಲಿ ಗದ್ದಲವನ್ನು ಗಮನಿಸಿದರು. ಅವರು ತಕ್ಷಣ ಬಸ್‌ನಿಂದ ಇಳಿದು ಕಾರಿನ ಬಳಿಗೆ ಧಾವಿಸಿ ಹೃದಯ ಶ್ವಾಸಕೋಶದ ಪುನರುಜ್ಜೀವನ (ಸಿಪಿಆರ್) ಪ್ರಾರಂಭಿಸಿದರು. ಆತನನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಸಿಪಿಆರ್ ನೀಡಿ ಜೀವ ಉಳಿಸಿದರು.ಇಬ್ಬರ ಕಾಳಜಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿರುವ ಅಂಜಲಿ, 'ನಾನು ತಕ್ಷಣ ಬಸ್‌ನಿಂದ ಕೆಳಗೆ ಇಳಿದೆ. ನನ್ನೊಂದಿಗೆ ಮತ್ತೊಬ್ಬ ನರ್ಸಿಂಗ್ ವಿದ್ಯಾರ್ಥಿನಿಯೂ ಬಂದರು. ನಾವು ಆ ವ್ಯಕ್ತಿಯ ಉಸಿರಾಟ ಮತ್ತು ನಾಡಿಬಡಿತವನ್ನು (Pulse) ಪರೀಕ್ಷಿಸಿದೆವು, ಆದರೆ ಎರಡೂ ಪತ್ತೆಯಾಗಲಿಲ್ಲ," ಎಂದು ಅಂಜಲಿ ಆ ಕ್ಷಣವನ್ನು ನೆನೆದಿದ್ದಾರೆ. ಈ ಹಿಂದೆ ಆಂಜಿಯೋಪ್ಲಾಸ್ಟಿ (Angioplasty) ಚಿಕಿತ್ಸೆಗೆ ಒಳಗಾಗಿದ್ದ ಆ ವ್ಯಕ್ತಿ, ತಪಾಸಣೆಗಾಗಿ ಎಲ್‌ಎಫ್ ಆಸ್ಪತ್ರೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ.
ಮಾರ್ ಬೇಸಿಲಿಯಸ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್
ಸ್ಥಳದಲ್ಲಿದ್ದವರು ಅಂಬುಲೆನ್ಸ್‌ಗೆ ಕರೆ ಮಾಡುತ್ತಿದ್ದಂತೆ, ಅಂಜಲಿ ಬೈಜು ಮತ್ತು ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್ ತಕ್ಷಣವೇ ಆ ವ್ಯಕ್ತಿಗೆ ಸಿಪಿಆರ್ ನೀಡಲು ಆರಂಭಿಸಿದ್ದರು. ಮಾರ್ ಬೇಸಿಲಿಯಸ್ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿನಿಯಾದ ಆರ್ದ್ರಾ ರಾಜ್ ಮಾತನಾಡಿ, ತಾವು ತಮ್ಮ ಪದವಿ ಪ್ರದಾನ ಸಮಾರಂಭದಲ್ಲಿ (Graduation Ceremony) ಪಾಲ್ಗೊಳ್ಳಲು ಕಾಲೇಜು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಜನರು ಕಾರಿನಿಂದ ಹೊರಗೆ ತೆಗೆಯುತ್ತಿರುವುದನ್ನು ಗಮನಿಸಿದ್ದಾಗಿ ತಿಳಿಸಿದರು.
"ನಾನು ನಮ್ಮ ಕಾಲೇಜು ಬಸ್‌ನಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಇಂದು ನಮ್ಮ ಪದವಿ ಪ್ರದಾನ ಸಮಾರಂಭವಿತ್ತು. ಜನರು ಒಬ್ಬ ವ್ಯಕ್ತಿಯನ್ನು ಕಾರಿನಿಂದ ಹೊರಗೆ ಎಳೆಯುತ್ತಿರುವುದನ್ನು ನಾವು ನೋಡಿದೆವು, ಅದೇ ಸಮಯಕ್ಕೆ ನಮ್ಮ ಬಸ್ ಕೂಡ ನಿಂತಿತು. ತಕ್ಷಣ ನಾನು ಸಹಾಯ ಮಾಡಲು ಕೆಳಗೆ ಇಳಿದೆ," ಎಂದು ಆರ್ದ್ರಾ ಹೇಳಿದ್ದಾರೆ. ಅಂಬುಲೆನ್ಸ್ ಬರುವವರೆಗೂ ಸಿಪಿಆರ್ ನೀಡುವುದನ್ನು ಇವರು ಮುಂದುವರಿಸಿದರು. ತಕ್ಷಣ ಆ ವ್ಯಕ್ತಿಯನ್ನು ಎಲ್‌ಎಫ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಪ್ರಜ್ಞೆ ಮರಳಿ ಪಡೆದರು. "ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರಿಗೆ ಪ್ರಜ್ಞೆ ಬಂದಿತ್ತು. ನಾನು ಮನೆಗೆ ಹಿಂದಿರುಗುವ ಮುನ್ನ ಅವರ ಜೊತೆ ಸ್ವಲ್ಪ ಸಮಯ ಮಾತನಾಡಿದೆ," ಎಂದು ಅಂಜಲಿ ಸಂತಸ ಹಂಚಿಕೊಂಡಿದ್ದಾರೆ.


