ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ, ಫೈಜಾಬಾದ್ ಜಿಲ್ಲಾ ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕನ್ನಡಿಗ ಗೋಪಾಲ್ ರಾವ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹ. ಪ್ರತಿಭಟನೆ ವೇಳೆ ಬ್ಯಾರಿಕೇಡ್ ಜಿಗಿದು ಜೈ ಶ್ರೀರಾಂ ಘೋಷಣೆ.
ಪಿಟಿಐ
ಅಯೋಧ್ಯೆ ರಾಮಮಂದಿರ ದೇಣಿಗೆ ಕದ್ದ ಆರೋಪಿಗಳ ಪರ ವಕಾಲತ್ತಿನಿಂದ ಹಿಂದೆ ಸರಿದಿದ್ದ ಫೈಜಾಬಾದ್ (ಅಯೋಧ್ಯೆ) ಜಿಲ್ಲಾ ವಕೀಲರು ಗುರುವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್(Rama Janmabhoomi Trust)ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ನಿರ್ಗಮಿತ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಕನ್ನಡಿಗ ಟ್ರಸ್ಟಿ ಗೋಪಾಲ್ ರಾವ್ ವಿರುದ್ಧ ಎಫ್‌ಐಆರ್(FIR) ದಾಖಲಿಸಲು ಆಗ್ರಹಿಸಿದ್ದಾರೆ.
ರಾಮನ ದೇಣಿಗೆ ಕಳವು: ಕ್ರಮಕ್ಕೆ ಆಗ್ರಹಿಸಿ ಬೀದಿಗಿಳಿದ ವಕೀಲರು
ಫೈಜಾಬಾದ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಾಳಿಕಾ ಪ್ರಸಾದ್ ಮಿಶ್ರಾ ಅವರ ನೇತೃತ್ವದ ವಕೀಲರ ತಂಡ, ಈ ಮೊದಲು ಹೇಳಿದ್ದ ಈ 3 ಹೆಸರುಗಳಲ್ಲದೆ, ಟ್ರಸ್ಟಿ ಕೃಷ್ಣ ಮೋಹನ್ ಅವರನ್ನೂ ಆರೋಪಿಯೆಂದು ಪರಿಗಣಿಸಬೇಕು ಎಂದು ಆಗ್ರಹಿಸಿತು. ಒಂದು ವೇಳೆ ಪೊಲೀಸರು ನಿಷ್ಟಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿತು. ದೂರು ಪರಿಶೀಲಿಸುವುದಾಗಿ ಪೊಲೀಸರು ಭರವಸೆ ನೀಡಿದರು.
ಫೈಜಾಬಾದ್ ಪ್ರತಿಭಟನೆ: ಬ್ಯಾರಿಕೇಡ್ ಜಿಗಿದು ವಕೀಲರಿಂದ ಜೈ ಶ್ರೀರಾಮ್ ಘೋಷಣೆ
ಫೈಜಾಬಾದ್‌ನಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದ ವಕೀಲರ ತಂಡ ಮೆರವಣಿಗೆ ಮೂಲಕ ಸಾಗಿ ಪೊಲೀಸರಿಗೆ ದೂರು ಸಲ್ಲಿಸಿತು. ಈ ವೇಳೆ, ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್‌ಗಳನ್ನು ವಕೀಲರು ಜಿಗಿದು ನುಗ್ಗಿದು ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದ ಪ್ರಸಂಗಗಳೂ ನಡೆದವು. ಮೆರವಣಿಗೆಯ ಸಮಯದಲ್ಲಿ ಜನಸಂದಣಿಯನ್ನು ನಿರ್ವಹಿಸುವುದು ಪೊಲೀಸ್ ಸಿಬ್ಬಂದಿಗೆ ಕಷ್ಟಕರವಾಗಿತ್ತು, ಕೆಲವು ವಕೀಲರು ನೂಕು ನುಗ್ಗಲಿನಲ್ಲಿ ತಮಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆರೋಪಿಸಿದರು.
ಇದಕ್ಕೂ ಫೈಜಾಬಾಬ್ ವಕೀಲರ ಸಂಘವು, ‘ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರ ವಾದಿಸುವುದಿಲ್ಲ. ಯಾರಾದರೂ ಆರೋಪಿಗಳ ಪರ ವಾದಿಸಿದರೆ 5 ಲಕ್ಷ ರು. ದಂಡ ವಿಧಿಸುತ್ತೇವೆ’ ಎಂದು ಎಚ್ಚರಿಸಿತ್ತು.


