ಉತ್ತರ ಪ್ರದೇಶದ ಎಸ್‌ಬಿಐ ಎಟಿಎಂ ಒಂದರಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಲಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಭದ್ರತಾ ಲೋಪ ಮತ್ತು ಸಾಮಾನ್ಯರ ಕಷ್ಟಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಎಟಿಎಂ ಬಳಕೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಆರ್‌ಬಿಐ ನಿಯಮಗಳ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.
ಉತ್ತರ ಪ್ರದೇಶದ ಮೌ ಜಿಲ್ಲೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂ ಕೌಂಟರ್ ಒಳಗೆ ವ್ಯಕ್ತಿಯೊಬ್ಬ ಆರಾಮವಾಗಿ ಮಲಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಹೊರಗಿನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು, ಎಸಿ ಇರುವ ಎಟಿಎಂ ಅನ್ನೇ ಈತ ತಾತ್ಕಾಲಿಕ ವಿಶ್ರಾಂತಿ ಕೇಂದ್ರ ಮಾಡಿಕೊಂಡಿದ್ದಾನೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.
ಗಂಭೀರ ಭದ್ರತಾ ಲೋಪವೇ?
ಈ ವಿಡಿಯೋದಲ್ಲಿ ವ್ಯಕ್ತಿ ನೆಲದ ಮೇಲೆ ಗಾಢ ನಿದ್ರೆಯಲ್ಲಿರುವುದನ್ನು ಕಾಣಬಹುದು. ಎಟಿಎಂಗೆ ಬರುವ ಗ್ರಾಹಕರು ಈತನನ್ನು ನೋಡಿ ಅಚ್ಚರಿಪಡುತ್ತಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಕೆಲವರು ಇದು ತೀವ್ರವಾದ ಬಿಸಿಲು ಮತ್ತು ಸಾಮಾನ್ಯ ಜನರ ಕಷ್ಟದ ಜೀವನಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದರೆ, ಇನ್ನು ಕೆಲವರು ಬ್ಯಾಂಕ್‌ಗಳ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ. ಎಟಿಎಂನಂತಹ ಹಣಕಾಸು ವ್ಯವಹಾರದ ಸ್ಥಳದಲ್ಲಿ ಅಪರಿಚಿತರು ಗಂಟೆಗಟ್ಟಲೆ ಹೀಗೆ ಇರುವುದು ಭದ್ರತಾ ಲೋಪವಲ್ಲವೇ ಎಂದು ಟೀಕಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಹೇಗೆ ನಂಬಿ ಎಟಿಎಂ ಒಳಗೆ ಹೋಗಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ.
ಬ್ಯಾಂಕ್‌ಗೆ ಮಾಹಿತಿ ನೀಡಿ
ಗ್ರಾಹಕರ ಸುರಕ್ಷತೆ ಮತ್ತು ಎಟಿಎಂನಲ್ಲಿನ ಹಣದ ರಕ್ಷಣೆ ಖಚಿತಪಡಿಸಬೇಕಾದ ಸ್ಥಳಗಳಲ್ಲಿ ಹೆಚ್ಚು ನಿಗಾ ಮತ್ತು ನಿಯಂತ್ರಣ ಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ, ಇಂತಹ ಪರಿಸ್ಥಿತಿ ಎದುರಾದರೆ, ನೀವೇ ಆ ವ್ಯಕ್ತಿಯನ್ನು ಹೊರಗೆ ಕಳುಹಿಸಲು ಯತ್ನಿಸುವ ಬದಲು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಉತ್ತಮ ಎಂದು ಕೆಲವರು ಸಲಹೆ ನೀಡಿದ್ದಾರೆ. ಯಾಕೆಂದರೆ, ಎಟಿಎಂ ಒಳಗೆ ಅಪರಿಚಿತರು ಇರುವಾಗ ಹಣ ತೆಗೆಯುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಆಗಬಹುದು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಬೇರೆ ಬೇರೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ.
ಬ್ಯಾಂಕಿಂಗ್ ಕಾನೂನು ಏನು ಹೇಳುತ್ತೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಗಸೂಚಿಗಳ ಪ್ರಕಾರ, ಎಟಿಎಂ ಬೂತ್‌ಗಳು ಕೇವಲ ಬ್ಯಾಂಕಿಂಗ್ ವಹಿವಾಟುಗಳಿಗೆ ಮಾತ್ರ ಮೀಸಲು. ಅವುಗಳ ಒಳಗೆ ಮಲಗುವುದು ಅಥವಾ ವಾಸಿಸುವುದನ್ನು ಅಕ್ರಮ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಆಫ್-ಸೈಟ್ ಎಟಿಎಂಗಳಲ್ಲಿ ಬ್ಯಾಂಕ್‌ಗಳು 24 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶವು ಕಡ್ಡಾಯಗೊಳಿಸುವುದಿಲ್ಲ. ಆದರೆ, ಭದ್ರತೆ ಮತ್ತು ನಿಗಾ ವಹಿಸಲು ಬ್ಯಾಂಕ್‌ಗಳು ಸಾಕಷ್ಟು ಡಿಜಿಟಲ್ ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಹೊಂದಿರಬೇಕು.


