ಮನೆ ಸ್ವಚ್ಛಗೊಳಿಸುವಾಗ 20 ವರ್ಷ ಹಳೆಯ ಎಸ್‌ಬಿಐ ಪಾಸ್‌ಬುಕ್ ಸಿಕ್ಕಿದ್ದು, ಅದರಲ್ಲಿ ಮೃತ ಅಜ್ಜನ ಖಾತೆಯಲ್ಲಿ ಲಕ್ಷಕ್ಕೂ ಅಧಿಕ ಹಣವಿರುವುದು ಕುಟುಂಬಕ್ಕೆ ಅಚ್ಚರಿ ಮೂಡಿಸಿದೆ. ಈ ಮರೆತುಹೋದ ಹಣವನ್ನು ಮರಳಿ ಪಡೆಯುವುದು ಹೇಗೆ ಎಂದು ಕುಟುಂಬವೊಂದು ಸಾಮಾಜಿಕ ಜಾಲತಾಣದಲ್ಲಿ ನೆರವು ಕೋರಿದೆ.

ನವದೆಹಲಿ (ಜು.15): ಮನೆ ಸ್ವಚ್ಛಗೊಳಿಸುವಾಗ ಹಳೆಯ ದಾಖಲೆಗಳು ಸಿಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮನೆ ಕ್ಲೀನ್ ಮಾಡುವಾಗ ಸಿಕ್ಕ ಬರೋಬ್ಬರಿ ಎರಡು ದಶಕಗಳಷ್ಟು ಹಳೆಯದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಾಸ್‌ಬುಕ್ ಇಡೀ ಕುಟುಂಬವನ್ನೇ ಆಶ್ಚರ್ಯಚಕಿತಗೊಳಿಸಿದೆ. ಮೃತಪಟ್ಟ ತನ್ನ ಅಜ್ಜನಿಗೆ ಸೇರಿದ ಈ ಬ್ಯಾಂಕ್ ಖಾತೆಯಲ್ಲಿ ಲಕ್ಷಕ್ಕೂ ಅಧಿಕ ಹಣವಿರುವುದು ಬೆಳಕಿಗೆ ಬಂದಿದ್ದು, ಈಗ ಈ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ.

ಪೂಜಾ ಎಂಬ ಮಹಿಳೆಯೊಬ್ಬರು ಎಕ್ಸ್‌ನಲ್ಲಿ ಹರಿದುಹೋಗಿರುವ ಈ ಹಳೆಯ ಪಾಸ್‌ಬುಕ್‌ನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ಕುರಿತು ನೆಟ್ಟಿಗರ ನೆರವು ಕೋರಿದ್ದಾರೆ. "ಖಾತೆಯಲ್ಲಿದ್ದ ಹಣ ಶಾಶ್ವತವಾಗಿ ಹೋದಂತೆಯೇ ಅಥವಾ ಅದನ್ನು ಮರಳಿ ಪಡೆಯಲು ಸಾಧ್ಯವೇ?" ಎಂದು ಅವರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?

ವ್ಯಕ್ತಿಯೊಬ್ಬರು ತನ್ನ ಮನೆ ಕ್ಲೀನ್ ಮಾಡುವಾಗ ಸುಮಾರು 20 ರಿಂದ 24 ವರ್ಷಗಳಷ್ಟು ಹಳೆಯದಾದ ಎಸ್‌ಬಿಐ ಪಾಸ್‌ಬುಕ್ ಅನ್ನು ಪತ್ತೆಹಚ್ಚಿದ್ದಾರೆ. ಅದನ್ನು ತಕ್ಷಣವೇ ತನ್ನ ತಂದೆಗೆ ತೋರಿಸಿದಾಗ, ಅದು ಅವರ ಅಜ್ಜನಿಗೆ ಸೇರಿದ್ದು ಎಂಬ ವಿಷಯ ತಿಳಿದುಬಂದಿದೆ. ಈ ಪಾಸ್‌ಬುಕ್ ಸಂಪೂರ್ಣವಾಗಿ ಕಳೆದುಹೋಗಿದೆ ಎಂದೇ ಆ ಕುಟುಂಬ ಭಾವಿಸಿತ್ತು. ಆದರೆ, ಪಾಸ್‌ಬುಕ್‌ನ ಒಳಗಿದ್ದ ಖಾತೆ ವಿವರಗಳನ್ನು ನೋಡಿದಾಗ ಇಡೀ ಕುಟುಂಬಕ್ಕೆ ದೊಡ್ಡ ಆಘಾತ ಕಾದಿತ್ತು. ಅವರ ತಾತನ ಆ ಖಾತೆಯಲ್ಲಿ 1 ಲಕ್ಷ ರೂಪಾಯಿಗಿಂತಲೂ ಅಧಿಕ ಬ್ಯಾಲೆನ್ಸ್ ಇರುವುದು ಗೊತ್ತಾಗಿದೆ.

ನೆಟ್ಟಿಗರ ಸಹಾಯ ಕೋರಿದ ಮಹಿಳೆ:

ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ಪೂಜಾ ಅವರು, "ಖಾತೆದಾರರು ಈಗಾಗಲೇ ಮೃತಪಟ್ಟಿದ್ದರೂ ಸಹ, ಅಂತಹ ಹಳೆಯ ಖಾತೆಯಿಂದ ಹಣವನ್ನು ಕ್ಲೈಮ್ ಮಾಡಲು (ಮರಳಿ ಪಡೆಯಲು) ಇಂದಿನ ದಿನಗಳಲ್ಲಿ ಸಾಧ್ಯವಿದೆಯೇ? ಅಥವಾ ಆ ಹಣ ಶಾಶ್ವತವಾಗಿ ಹೋದಂತೆಯೇ?" ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, "ನಿಮಗೆ ಬ್ಯಾಂಕಿಂಗ್ ಪ್ರಕ್ರಿಯೆಯ ಬಗ್ಗೆ ಜ್ಞಾನವಿದ್ದರೆ ಅಥವಾ ನೀವೇನಾದರೂ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದರೆ, ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ನಿಮ್ಮ ಸಲಹೆಗಳು ದೀರ್ಘಕಾಲದಿಂದ ಮರೆತುಹೋಗಿರುವ ಉಳಿತಾಯವನ್ನು ಮರಳಿ ಪಡೆಯಲು ಆ ಕುಟುಂಬಕ್ಕೆ ಸಹಾಯ ಮಾಡಬಹುದು" ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು

ಈ ಪೋಸ್ಟ್ ಭಾರಿ ಸಂಚಲನ ಮೂಡಿಸಿದ್ದು, 1.14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು (Views) ಪಡೆದುಕೊಂಡಿದೆ. ಹಲವು ಯೂಸರ್‌ಗಳು ಬ್ಯಾಂಕಿಂಗ್ ನಿಯಮಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಒಬ್ಬ ಯೂಸರ್‌ "ಹಳೆಯ ಪಾಸ್‌ಬುಕ್ ಸಿಕ್ಕ ತಕ್ಷಣ ಹಣ ಕಳೆದುಹೋಗಿದೆ ಎಂದು ಭಾವಿಸಬೇಕಿಲ್ಲ. ಖಂಡಿತವಾಗಿಯೂ ಒಮ್ಮೆ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸುವುದು ಉತ್ತಮ," ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬರು ಪ್ರಕ್ರಿಯೆಯನ್ನು ವಿವರವಾಗಿ ಹಂಚಿಕೊಂಡು, "ಇಂತಹ ಹಳೆಯ ಎಸ್‌ಬಿಐ ಖಾತೆಯನ್ನು ಕ್ಲೈಮ್ ಮಾಡಲು, ಮೊದಲು ಎಸ್‌ಬಿಐನ ಮೂಲ ಹೋಮ್ ಬ್ರಾಂಚ್‌ಗೆ (Home Branch) ಭೇಟಿ ನೀಡಬೇಕು. ಅಲ್ಲಿ ಮೃತಪಟ್ಟವರ ಮರಣ ಪ್ರಮಾಣಪತ್ರ (Death Certificate), ಗುರುತಿನ ಚೀಟಿ, ಕಾನೂನುಬದ್ಧ ವಾರಸುದಾರರ ಪುರಾವೆ (Legal Heir Certificate) ಮತ್ತು ಬ್ಯಾಂಕಿನ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸಬೇಕು. ಒಂದು ವೇಳೆ ಖಾತೆಗೆ ಯಾರನ್ನೂ ನಾಮಿನಿ (Nominee) ಮಾಡದಿದ್ದರೆ, ಹಣವನ್ನು ಬಿಡುಗಡೆ ಮಾಡುವ ಮುನ್ನ ಬ್ಯಾಂಕ್ ಅಧಿಕಾರಿಗಳು ಉತ್ತರಾಧಿಕಾರ ಪ್ರಮಾಣಪತ್ರ (Succession Certificate) ಅಥವಾ ಇತರ ಕಾನೂನು ದಾಖಲೆಗಳನ್ನು ಕೇಳಬಹುದು," ಎಂದು ದಾರಿ ತೋರಿಸಿದ್ದಾರೆ.

ಮತ್ತೊಬ್ಬರುಪ್ರತಿಕ್ರಿಯೆ ನೀಡಿ "ಹಳೆಯ ಹಣಕಾಸು ದಾಖಲೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಖಾತೆಯನ್ನು ಹಲವು ವರ್ಷಗಳಿಂದ ಬಳಸದಿದ್ದರೂ ಸಹ, ಹಣ ನಷ್ಟವಾಗಿದೆ ಎಂದು ನಿರ್ಧರಿಸುವ ಮುನ್ನ ಬ್ಯಾಂಕ್‌ಗೆ ಭೇಟಿ ನೀಡಿ ಅಧಿಕೃತ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಜಾಣತನ," ಎಂದು ಬರೆದುಕೊಂಡಿದ್ದಾರೆ.

Scroll to load tweet…