ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯರಿಗೆ ಪತ್ನಿಯ ಸ್ಥಾನಮಾನ ನೀಡುವ ಮೂಲಕ ರಕ್ಷಣೆ ಒದಗಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಹೊಂದುವ ಪುರುಷರ ವಿರುದ್ಧ ಹೊಸ ಕಾನೂನಿನಡಿ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯರಿಗೆ ಪತ್ನಿಯ ಸ್ಥಾನಮಾನ ನೀಡುವುದು ಅಗತ್ಯವಾಗಿದೆ ಎಂದು ಮದ್ರಾಸ್​ ಹೈಕೋರ್ಟ್​ ಇಂದು ಮಹತ್ವದ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇಂಥ ಸಂಬಂಧದಲ್ಲ ಇರುವ ಮಹಿಳೆಯರಿಗೆ ಪತ್ನಿಯ ಸ್ಥಾನ ನೀಡಿದರೆ ಮಾತ್ರ ಆಕೆಗೆ ರಕ್ಷಣೆ ಸಿಗುತ್ತದೆ ಎಂದು ಮಧುರೈ ಪೀಠ ಹೇಳಿದೆ. ಲಿವ್​ ಇನ್​ ಸಂಬಂಧದಲ್ಲಿರುವ ಮಹಿಳೆಯರಿಗೆ ವೈವಾಹಿಕ ಭದ್ರತೆಯ ಕೊರತೆಯಿದೆ. ಆದ್ದರಿಂದ ಅವರನ್ನು ರಕ್ಷಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ನ್ಯಾಯಮೂರ್ತಿ ಎಸ್​.ಶ್ರೀಮತಿಯವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆಯ ಸುಳ್ಳು ಭರವಸೆ

ಪುರುಷನು ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಾನೆ ಮತ್ತು ನಂತರ ಮದುವೆಯ ಸುಳ್ಳು ಭರವಸೆಗಳ ಅಡಿಯಲ್ಲಿ ಅವಳೊಂದಿಗೆ ದೈಹಿಕ ಸಂಬಂಧ ಹೊಂದುತ್ತಾನೆ. ಇದು ತುಂಬಾ ಆತಂಕಕಾರಿ ವಿಷಯವಾಗಿದೆ. ಪುರುಷರು ಮೊದಲು ಬಣ್ಣಬಣ್ಣದ ಮಾತುಗಳನ್ನು ಹೇಳುವ ಮೂಲಕ ಲಿವ್-ಇನ್ ಸಂಬಂಧಗಳಿಗೆ ಪ್ರವೇಶಿಸುತ್ತಾರೆ. ನಂತರ, ಸಂಬಂಧವು ಹದಗೆಟ್ಟಾಗ, ಮಹಿಳೆಯನ್ನೇ ಪ್ರಶ್ನಿಸುತ್ತಾರೆ. ಲಿವ್-ಇನ್ ಸಂಬಂಧಗಳ ಕುರಿತು ಯಾವುದೇ ಕಾನೂನು ನಿಯಮಗಳಿಲ್ಲದ ಕಾರಣ ಅವರು ಇದನ್ನು ಅವರಿಗೆ ಮಾಡಲು ಸಾಧ್ಯವಾಗುತ್ತಿದೆ. ಇದು ತುಂಬಾ ಆತಂಕಕಾರಿಯಾಗಿರುವ ವಿಷಯವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಸ್ವೀಕಾರವಲ್ಲದಿದ್ದರೂ ಸಾಮಾನ್ಯ

ಭಾರತದಲ್ಲಿ ಲಿವ್-ಇನ್ ಸಂಬಂಧಗಳನ್ನು ಸಮಾಜವು ಸಂಪೂರ್ಣವಾಗಿ ಸ್ವೀಕರಿಸದಿದ್ದರೂ, ಅವು ಸಾಮಾನ್ಯವಾಗಿದೆ. ಸಂಬಂಧದಲ್ಲಿರುವಾಗ ಪುರುಷರು ತಮ್ಮನ್ನು ಮಾಡರ್ನ್​ ಎಂದು ಪರಿಗಣಿಸುತ್ತಾರೆ. ಆದರೆ ದೈಹಿಕ ಸಂಬಂಧದ ಬಳಿಕ ಇಬ್ಬರ ನಡುವೆ ವೈಮನಸ್ಸು ಆರಂಭವಾದಾಗ, ಅದರ ಹೊಣೆಯನ್ನು ಮಹಿಳೆಯರ ಮೇಲೆ ಹಾಕುತ್ತಾರೆ. ಆಕೆಯನ್ನು ದೂಷಿಸಲೂ ಹಿಂಜರಿಯುವುದಿಲ್ಲ. ಸಂಬಂಧ ಬೆಳೆಸಿದ ನಂತರ ಆರೋಪಿ ಮದುವೆಯಾಗಲು ನಿರಾಕರಿಸಿದರೆ, ಸೆಕ್ಷನ್ 69 (ಮೋಸದಿಂದ ಲೈಂ*ಗಿಕ ಸಂಪರ್ಕ) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಏನಿದು ಪ್ರಕರಣದ ಹಿನ್ನೆಲೆ?

ಲಿವ್​ ಇನ್​ ಸಂಬಂಧದಲ್ಲಿ ಇದ್ದ ಮಹಿಳೆಯೊಬ್ಬಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ನಡೆಸುತ್ತಿತ್ತು. ಶಾಲಾ ದಿನಗಳಿಂದಲೂ ಸ್ನೇಹಿತನಾಗಿದ್ದವನನ್ನು ನಂಬಿದ್ದ ಮಹಿಳೆ ಆತನ ಜೊತೆ ಸಂಬಂಧ ಬೆಳೆಸಿದ್ದಳು. ಮನೆಯಲ್ಲಿ ಇವರ ಮದುವೆಗೆ ಒಪ್ಪದಿದ್ದಾಗ, ಆಗಸ್ಟ್ 2024 ರಲ್ಲಿ, ಅವರು ಮನೆಯಿಂದ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದರು. ಈ ನಡುವೆ ಆಕೆಯ ಕುಟುಂಬವು ಮಿಸ್ಸಿಂಗ್​ ಕಂಪ್ಲೇಂಟ್​ ದಾಖಲು ಮಾಡಿತು. ಪೊಲೀಸರು ಜೋಡಿಯನ್ನು ಬಂಧಿಸಿ, ಆಕೆಯನ್ನು ಮನೆಗೆ ಹಿಂತಿರುಗಿಸಿದರು.

ಇದಾಗಲೇ ದೈಹಿಕ ಸಂಪರ್ಕ ನಡೆದಿತ್ತು. ಆದರೆ ಆತ ಮಾತ್ರ ಬೇರೆ ಬೇರೆ ನೆಪದಲ್ಲಿ ಮದುವೆ ಮುಂದೂಡುತ್ತಲೇ ಇದ್ದನು. ನಂತರ ಇಬ್ಬರ ನಡುವೆ ಜಗಳವಾಗಿ ಸಂಬಂಧ ಮುರಿದುಬಿತ್ತು, ಮಹಿಳೆ ವಂಚನೆಯ ಆರೋಪದ ಮೇಲೆ ದೂರು ದಾಖಲಿಸಿದಳು. ಆಗ ಆರೋಪಿಯು ಸಂಬಂಧವು ಒಪ್ಪಿಗೆಯಿಂದ ಕೂಡಿತ್ತು ಎಂದು ಹೇಳಿ ನಿರೀಕ್ಷಣಾ ಜಾಮೀನು ಕೋರಿದನು. ಅಷ್ಟಕ್ಕೂ ಆಕೆಗೆ ಬೇರೆಯವರ ಜೊತೆ ಸ್ನೇಹವಿದೆ ಎನ್ನುವ ಆರೋಪ ಮಾಡಿದನು. ಇದೇ ಕಾರಣಕ್ಕೆ ಆಕೆ ನನಗೆ ಬೇಡ ಎಂದರು. ಜೊತೆಗೆ ತಾನು ನಿರುದ್ಯೋಗಿಯಾಗಿರುವ ಕಾರಣ, ಮದುವೆಯಾದರೆ ಅದನ್ನು ನಿಭಾಯಿಸಲು ಆಗುವುದಿಲ್ಲ ಎಂದನು.

ಕೋರ್ಟ್​ ಹೇಳಿದ್ದೇನು?

ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಸಿಆರ್‌ಪಿಸಿಯ ಸೆಕ್ಷನ್ 69 ವಂಚನೆಯ ಮೂಲಕ ಲೈಂ*ಗಿಕ ಸಂಭೋಗ ಅ*ತ್ಯಾಚಾರಕ್ಕೆ ಸಮನಾಗಿಲ್ಲದಿದ್ದರೂ ಪ್ರತ್ಯೇಕ ಅಪರಾಧವೆಂದು ಪರಿಗಣಿಬಹುದು ಎಂದಿದ್ದಾರೆ. ಹೊಸ ಕ್ರಿಮಿನಲ್ ಕಾನೂನಿನಡಿಯಲ್ಲಿ, ಸಂಸತ್ತು, ಸುಳ್ಳು ಮದುವೆ ಭರವಸೆ ನೀಡುವ ಮೂಲಕ ಲೈಂ*ಗಿಕ ಸಂಬಂಧವನ್ನು ಪ್ರತ್ಯೇಕ ಅಪರಾಧವೆಂದು ಮಾಡಿರುವುದಾಗಿ ಗಮನಿಸಿದರು. ಆರೋಪಿಯು ಮದುವೆಯಾಗಲು ನಿರಾಕರಿಸಿದ್ದರಿಂದ, ಅಪರಾಧವನ್ನು ಗಮನದಲ್ಲಿ ಇಟ್ಟುಕೊಂಡು ಸೆಕ್ಷನ್ 69 ರ ಅಡಿಯಲ್ಲಿ ಮೊಕದ್ದಮೆ ಹೂಡುವುದು ಕಡ್ಡಾಯವಾಗಿದೆ ಮತ್ತು ಕಸ್ಟಡಿ ವಿಚಾರಣೆ ಅಗತ್ಯ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.