ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಮಾವನ ಮರಣದ ನಂತರ ವಿಧವೆಯಾದ ಸೊಸೆಗೂ ಮಾವನ ಆಸ್ತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ, ಕೆಳಹಂತದ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿನ ಕಾನೂನು ಗೊಂದಲಕ್ಕೆ ತೆರೆ ಎಳೆದಿದೆ.
ಆಸ್ತಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪೊಂದು ಪ್ರಕಟಗೊಂಡಿದೆ. ಅದೇನೆಂದರೆ, ಮಾವನ ನಿಧನದ ಬಳಿಕ, ಸೊಸೆ ವಿಧವೆಯಾದರೂ ಆಕೆಯಗೆ ಮಾವನ ಆಸ್ತಿಯಲ್ಲಿ ಜೀವನಾಂಶ ಪಡೆಯುವ ಹಕ್ಕು ಇದೆ ಎನ್ನುವ ತೀರ್ಪನ್ನು ಕೋರ್ಟ್ ನೀಡಿದೆ. ಒಂದು ವೇಳೆ ಮಾವನ ಜೀವಿತಾವಧಿಯಲ್ಲಿ ಸೊಸೆ ವಿಧವೆಯಾದರೆ ಆಕೆಗೆ ಮಾವನಿಂದ ಜೀವನಾಂಶ ಪಡೆಯಬಹುದಾಗಿತ್ತು. ಆದರೆ, ಮಾವ ಸತ್ತ ಬಳಿಕ, ಸೊಸೆ ವಿಧವೆಯಾಗಿದ್ದರೂ ಆಕೆ ಇದಕ್ಕೆ ಅರ್ಹಳು ಹೌದೋ ಅಲ್ಲವೋ ಎನ್ನುವ ಬಹುದೊಡ್ಡ ಕಾನೂನು ಗೊಂದಲಕ್ಕೆ ಸುಪ್ರೀಂಕೋರ್ಟ್ ಇದೀಗ ತೆರೆ ಇಳಿದಿದೆ. ಮಾವನ ನಿಧನದ ಬಳಿಕ, ಆತನ ಸೊಸೆ ವಿಧವೆಯಾದರೆ, ಆಕೆಗೆ ಈ ಹಕ್ಕು ಇಲ್ಲ ಎಂದಿದ್ದ ಕೆಳಹಂತದ ಕೋರ್ಟ್ ಆದೇಶವನ್ನು ವಜಾ ಮಾಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ.
ಮನುಸ್ಮೃತಿಯ ಉಲ್ಲೇಖ
ತನ್ನ ಮಾವನ ಮರಣದ ನಂತರ ವಿಧವೆಯಾದ ಹೆಂಡತಿ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ರ ಪ್ರಕಾರ ತನ್ನ ಮಾವನ ಆಸ್ತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ. ಈ ಬಗ್ಗೆ ಇದ್ದ ಕಾನೂನು ಗೊಂದಲಕ್ಕೆ ಕೋರ್ಟ್ ತೆರೆ ಎಳೆದಿದೆ. ಇದೇ ವೇಳೆ ಮನುಸ್ಮೃತಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನೂ ತೀರ್ಪಿನಲ್ಲಿ ತಿಳಿಸಿರುವ ನ್ಯಾಯಮೂರ್ತಿಗಳು, ಇಂಥ ಒಂದು ಹಕ್ಕು ವಿಧವೆ ಸೊಸೆಗೆ ಇದೆ ಎಂದು ತಿಳಿಸಿದೆ.
ವಿಧವೆಯ ಹಕ್ಕು
ಮಾವ ಜೀವಂತ ಇದ್ದರೆ ಮಾತ್ರ, ಆತನ ಮಗ ಸತ್ತರೆ ವಿಧವೆ ಸೊಸೆಗೆ ಅಧಿಕಾರ ಇದೆ ಎಂದೇ ಹೇಳಲಾಗುತ್ತಿತ್ತು. ಇದನ್ನೇ ವಕೀಲರು ಕೂಡ ವಾದಿಸಿದ್ದರು. ಮಾವನ ನಿಧನದ ಬಳಿಕ ಸೊಸೆ ವಿಧವೆಯಾದರೆ ಆಕೆಗೆ ಮಾವನ ಆಸ್ತಿಯಲ್ಲಿ ಜೀವನಾಂಶದ ಹಕ್ಕು ಇಲ್ಲ ಎನ್ನುವುದು ಅವರ ವಾದವಾಗಿತ್ತು. ಆದರೆ ಇದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ಮಾವನ ನಿಧನದ ಮೊದಲು ಮತ್ತು ನಂತರ ಎನ್ನುವಂಥ ತಾರತಮ್ಯ ಮಾಡುವುದು ತರ್ಕಹೀನವಾದದ್ದು. ಇದು ಸಂವಿಧಾನ ಬಾಹಿರವಾಗಿದೆ ಎಂದಿರುವ ನ್ಯಾಯಮೂರ್ತಿಗಳು, ಮಾವ ಬದುಕಿರಲಿ, ಇಲ್ಲದೇ ಇರಲಿ ವಿಧವೆ ಸೊಸೆಯ ಹಕ್ಕು ಕಸಿದುಕೊಳ್ಳಲಾಗದು ಎಂದಿದ್ದಾರೆ.
ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ
ಇದೇ ವೇಳೆ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ರ ಸೆಕ್ಷನ್ 22 ಅನ್ನು ಕೂಡ ಉಲ್ಲೇಖಿಸಿರುವ ಪೀಠವು, ಈ ನಿಬಂಧನೆಯು ಮೃತ ಹಿಂದುವಿನ ಅವಲಂಬಿತರ ಜೀವನಾಂಶದ ಬಗ್ಗೆ ಉಲ್ಲೇಖಿಸುತ್ತದೆ. ಮೃತರ ಎಲ್ಲಾ ಉತ್ತರಾಧಿಕಾರಿಗಳು ವಿಧವೆಯಾದ ಸೊಸೆ ಸೇರಿದಂತೆ ತಮ್ಮ ಅವಲಂಬಿತರನ್ನು ಮೃತರ ಆಸ್ತಿಯಿಂದ ಬೆಂಬಲಿಸಲು ಬದ್ಧರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.


