ಆಂಬುಲೆನ್ಸ್‌ನ ಹಿಂಬಾಗಿಲು ಜ್ಯಾಮ್ ಆದ ಕಾರಣ 67 ವರ್ಷದ ರೋಗಿಯೊಬ್ಬರು ಒಳಗೆಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಆಸ್ಪತ್ರೆಯ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬಾಗಿಲು ತೆರೆಯುವಷ್ಟರಲ್ಲಿಯೇ ರೋಗಿ ಪ್ರಾಣ ಬಿಟ್ಟಿದ್ದು, ಇದು ಆರೋಗ್ಯ ವ್ಯವಸ್ಥೆಯ ಲೋಪವನ್ನು ಬಹಿರಂಗಪಡಿಸಿದೆ.
ಆಂಬುಲೆನ್ಸ್‌ನ ಹಿಂಭಾಗದ ಬಾಗಿಲು ಜ್ಯಾಮ್ ಆಗಿ ರೋಗಿ ಸಾವು:
ಆಂಬುಲೆನ್ಸ್‌ನ ಹಿಂಭಾಗದ ಬಾಗಿಲು ಜ್ಯಾಮ್ ಆಗಿ ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದ ರೋಗಿಯೊಬ್ಬರು ಒಳಗೆಯೇ ಸಿಲುಕಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ. ಆಂಬುಲೆನ್ಸ್ ತೀವ್ರ ಅಸ್ವಸ್ಥಗೊಂಡಿದ್ದ 67 ವರ್ಷದ ರಾಮ್ ಪ್ರಸಾದ್ ಎಂಬುವವರನ್ನು ಕರೆದುಕೊಂಡು ಸಾತ್ನಾದ ಜಿಲ್ಲಾ ಆಸ್ಪತ್ರೆಯ ಗೇಟ್‌ವರೆಗೆ ಬಂದಿದೆ. ಆದರೆ ನಂತರ ಆಂಬುಲೆನ್ಸ್ ಹಿಂಭಾಗದ ಡೋರ್ ಜ್ಯಾಮ್ ಆಗಿದ್ದು, ಅದನ್ನು ಬಲವಂತವಾಗಿ ತೆಗೆಯುವುದರಲ್ಲೇ ಅಮೂಲ್ಯ ಸಮಯ ಕಳೆದು ಹೋಗಿದ್ದರಿಂದ ಒಳಗಿದ್ದ ರೋಗಿ ರಾಮ್ ಪ್ರಸಾದ್ ಅವರು ಆಂಬುಲೆನ್ಸ್ ಒಳಗೆಯೇ ಪ್ರಾಣ ಬಿಟ್ಟಿದ್ದಾರೆ. ಇದು ಜಿಲ್ಲೆಯ ತುರ್ತು ಆರೋಗ್ಯ ವ್ಯವಸ್ಥೆಯಲ್ಲಿನ ಗಂಭೀರ ಲೋಪವನ್ನು ಬಹಿರಂಗಪಡಿಸಿದೆ.
ರಾಮ್ ಪ್ರಸಾದ್ ಅವರನ್ನು ರಾಮನಗರ ಸಮುದಾಯ ಆರೋಗ್ಯ ಕೇಂದ್ರದಿಂದ ಸತ್ನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಅವರ ಕುಟುಂಬ ಸದಸ್ಯರ ಪ್ರಕಾರ, ಶನಿವಾರ ಬೆಳಗ್ಗೆ ಮನೆಯಲ್ಲಿ ಬೆಂಕಿಯ ಬಳಿ ಚಳಿ ಕಾಯಿಸಿಕೊಳ್ಳಲು ಕುಳಿತಿದ್ದಾಗ ರಾಮ್ ಪ್ರಸಾದ್ ಅವರು ಹಠಾತ್ ಕುಸಿದು ಬಿದ್ದರು. ಕೂಡಲೇ ಕುಟುಂಬದವರು ಅವರನ್ನು ಮೊದಲಿಗೆ ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ನಂತರ ಕುಟುಂಬದವರು 108 ತುರ್ತು ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಮೇಷ್ಟ್ರಂತೆ ಹಾಜರಿ ಕರೆದ ಸ್ಪೀಕರ್ ಖಾದರ್: ಹಲವು ಸಚಿವರ ಗೈರು ಮಕ್ಕಳಂತೆ ಬೊಬ್ಬೆ ಹೊಡೆದವರಾರು?: ವೀಡಿಯೋ
ರಾಮ್ ಪ್ರಸಾದ್ ಅವರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಯ ಗೇಟ್ ತಲುಪಿದೆ ಆದರೆ ಆಂಬುಲೆನ್ಸ್‌ನ ಹಿಂಭಾಗದ ಡೋರ್ ಲಾಕ್ ಆದ ಪರಿಣಾಮ ಅವರನ್ನು ಕೂಡಲೇ ಹೊರಗೆ ತಂದು ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ, ಪರಿಣಾಮ ರಾಮ್ ಪ್ರಸಾದ್ ಅವರು ಒಳಗಿದ್ದಾಗಲೇ ಅಲ್ಲಿನ ಸಿಬ್ಬಂದಿಗಳು ಸಂಬಂಧಿಕರು ಹೊರಗಿನಿಂದ ಒಡೆದು ಬಾಗಿಲನ್ನು ತೆರೆಯುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಅಂಬುಲೆನ್ಸ್‌ನ ಚಾಲಕ ಕಿಟಕಿಯ ಮೂಲಕವೂ ಒಳಗೆ ಹೋಗಿ ಬಾಗಿಲನ್ನು ತೆರೆಯುವುದಕ್ಕೆ ಪ್ರಯತ್ನಿಸಿದ್ದಾರೆ.
ದೀರ್ಘಕಾಲದ ಹೋರಾಟದ ನಂತರ, ಕೊನೆಗೂ ಆಂಬುಲೆನ್ಸ್‌ನ ಬಾಗಿಲನ್ನು ಬಲವಂತವಾಗಿ ತೆರೆದು ರಾಮ್ ಪ್ರಸಾದ್ ಅವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಯೊಳಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯ ವೈದ್ಯರು ಅವರು ಬರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇದನ್ನೂ ಓದಿ: ಕೆಲಸಕ್ಕೆಂದು ಮಂಗಳೂರಿಗೆ ಕರೆತಂದು ನಾಪತ್ತೆಯಾದ ಗೆಳೆಯ: ಭಯದಿಂದ ಮರವೇರಿ ಕುಳಿತ ಬಾಗಲಕೋಟೆಯ ಭೀಮಾ
ಘಟನೆಯ ನಂತರ, ಜಿಲ್ಲಾ ಆರೋಗ್ಯ ಇಲಾಖೆಯು ರೋಗಿಯು ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಸತ್ನಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ಮನೋಜ್ ಶುಕ್ಲಾ ಅವರು, ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಸಮನ್ವಯ ಅಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ವಿಷಯ ಬೆಳಕಿಗೆ ಬಂದ ನಂತರ, ಜಿಲ್ಲಾ ಸಂಯೋಜಕರಿಗೆ ನೋಟಿಸ್ ನೀಡಲಾಗಿದೆ ಮತ್ತು ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಶುಕ್ಲಾ ಹೇಳಿದರು.


