ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಸದನದಲ್ಲಿ ಶಾಲಾ ಶಿಕ್ಷಕರಂತೆ ಸಚಿವರ ಹಾಜರಾತಿ ಕರೆದರು. ಈ ವೇಳೆ ಬಹುತೇಕ ಸಚಿವರು ಗೈರಾಗಿದ್ದರಿಂದ, ಬಿಜೆಪಿ ಶಾಸಕರು ಇದೊಂದು 'ಇಲ್ಲಗಳ ಸರ್ಕಾರ' ಎಂದು ವ್ಯಂಗ್ಯವಾಡಿದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದನದಲ್ಲಿ ಮೇಷ್ಟ್ರಂತೆ ಹಾಜರಿ ಕರೆದ ಸ್ಪೀಕರ್:

ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಷ್ಟ್ರಂತೆ ಯಾವುದೇ ಪಕ್ಷ ಬೇಧವಿಲ್ಲದೇ ಸದನದಲ್ಲಿ ತಪ್ಪು ಮಾಡುವ ಎಲ್ಲಾ ಪಕ್ಷದ ನಾಯಕರಿಗೂ ಕ್ಲಾಸ್ ತೆಗೆದುಕೊಳ್ಳುತ್ತಿರುತ್ತಾರೆ. ಅವರು ವಿಧಾನಸಭೆಯ ಸ್ಪೀಕರ್ ಆದಾಗಿನಿಂದಲೂ ವಿಧಾನಸಭಾ ಕಲಾಪ ನಡೆದಾಗಲೆಲ್ಲಾ ಅವರ ಒಂದಾದರೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಸದನದ ನಿಯಮಗಳ ಬಗ್ಗೆ ಬಹಳ ಶಿಸ್ತುಬದ್ಧರಾಗಿರುವ ಅವರು ನಿಯಮ ಮೀರುವ ಎಲ್ಲರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಹಾಗೆಯೇ ಈ ಬಾರಿಯೂ ಅವರ ವೀಡಿಯೋವೊಂದು ವೈರಲ್ ಆಗಿದ್ದು, ಅನೇಕರಿಗೆ ಬಾಲ್ಯದಲ್ಲಿ ತಾವು ಕಲಿತ ಸರ್ಕಾರಿ ಶಾಲೆಯ ನೆನಪಾಗಿದೆ. ಸ್ಪೀಕರ್ ಯು.ಟಿ ಖಾದರ್ ಅವರು ಮಂಗಳೂರಿನ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರೂ ಕೂಡ ಆಗಿದ್ದು, ಸದನದಲ್ಲಿ ಶಾಲಾ ಶಿಕ್ಷಕರಂತೆ ಶಾಸಕರು ಸಚಿವರ ಹಾಜರಿ ಕರೆದಿದ್ದಾರೆ. ಆದರೆ ಈ ವೇಳೆ ಬಹುತೇಕ ಸಚಿವರು ಸದನಕ್ಕೆ ಗೈರಾಗಿರುವುದು ಕಂಡು ಬಂತು. ಇದನ್ನು ನೋಡಿ ಬಿಜೆಪಿಯ ಸುನೀಲ್ ಕುಮಾರ ಹಾಗೂ ಅಶೋಕ್ ಅವರು ಸ್ಪೀಕರ್ ಖಾದರ್ ಹಾಜರಿ ಕರೆಯುತ್ತಿದ್ದಂತೆ ಇಲ್ಲ ಇಲ್ಲ ಎಂದು ಜೋರಾಗಿ ಕೂಗುವ ಮೂಲಕ ಸದನದ ಗಮನ ಸೆಳೆದರು. ಇದೊಂದು ಇಲ್ಲಗಳ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲೇನಿದೆ?

ಮುನಿಯಪ್ಪ, ಕೆ ಜೆ ಜಾರ್ಜ್, ದಿನೇಶ್ ಗುಂಡುರಾವ್ ಎಂದು ಸ್ಪೀಕರ್ ಯು.ಟಿ ಖಾದರ್ ಅವರು ಒಬ್ಬೊಬ್ಬರ ಹೆಸರನ್ನು ಕರೆಯುತ್ತಾ ಹೋಗಿದ್ದು, ಈ ವೇಳೆ ಬಿಜೆಪಿಯ ಆರ್ ಅಶೋಕ್ ಸೇರಿದಂತೆ ಹಲವು ಶಾಸಕರು ಇಲ್ಲ, ಇಲ್ಲ, ಇಲ್ಲ ಎಂದು ಕೂಗಲು ಶುರು ಮಾಡಿದ್ದಾರೆ. ಈ ವೇಳೆ ಸ್ಫೀಕರ್ ಕೂಗುವುದು ಏಕೆ ನನಗೆ ಕಾಣ್ತದೆ ಅವರು ಇದ್ದಾರೋ ಇಲ್ಲವೋ ಎಂದು ನೀವು ಬೊಬ್ಬೆ ಹಾಕುವುದು ಯಾಕೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್ ಜನರಿಗೆ ಗೊತ್ತಾಗಬೇಕಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಸ್ಪೀಕರ್, ಇದು ಖುಷಿಯಿಂದ ಹೇಳುವುದೋ ಅಥವಾ ಬೇಸರದಿಂದಲೂ ಎಂದು ಪ್ರಶ್ನಿಸಿದ್ದಾರೆ. ಬಿಲ್ ಬಂದಾಗ ಅವರು ಹೌದು ಅನ್ನಲ್ವಾ ಹಾಗೆಯೇ ನಾವು ಹೇಳ್ಬೇಕು ಅವರಿಗೂ ಗೊತ್ತಾಗಬೇಕು ಹೀಗಾದರೂ ಸ್ವಲ್ಪ ಮರ್ಯಾದೆ ಹೋಗೇಬೇಕು ಅಂತ ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಕೆಲಸಕ್ಕೆಂದು ಮಂಗಳೂರಿಗೆ ಕರೆತಂದು ನಾಪತ್ತೆಯಾದ ಗೆಳೆಯ: ಭಯದಿಂದ ಮರವೇರಿ ಕುಳಿತ ಬಾಗಲಕೋಟೆಯ ಭೀಮಾ

ನಂತರ ಸ್ಪೀಕರ್ ಖಾದರ್ ಅವರು ಹಾಜರಿ ಹಾಕುವುದನ್ನು ಮುಂದುವರೆಸಿದ್ದಾರೆ. ಹೆಚ್‌.ಸಿ ಮಹದೇವಪ್ಪ-ಇಲ್ಲ, ಕೃಷ್ಣಬೈರೇಗೌಡ-ಇದ್ದಾರೆ, ಪ್ರಿಯಾಂಕಾ ಖರ್ಗೆ ಇಲ್ಲ, ಜಮೀರ್ ಅಹ್ಮದ್ ಇಲ್ಲ, ಈಶ್ವರ್ ಖಂಡ್ರೆ ಇಲ್ಲ, ಶರಣ್ ಪ್ರಕಾಶ್ ಪಾಟೀಲ್ ಇಲ್ಲ, ಲಕ್ಷ್ಮಿ ಹೆಬ್ಬಾಳ್ಕರ್ ಇಲ್ಲ, ಎಂ.ಸಿ. ಸುಧಾಕರ್ ಇಲ್ಲ ಹೀಗೆ ಕೃಷ್ಣಭೈರೇಗೌಡರೊಬ್ಬರನ್ನು ಹೊರತುಪಡಿಸಿ ಬಹುತೇಕ ಸಚಿವರು ಸದನಕ್ಕೆ ಗೈರಾಗಿದ್ದಾರೆ. ಹೀಗಾಗಿ ಗೈರಾದವರ ಹೆಸರು ಕರೆದಾಗಲೆಲ್ಲಾ ಬಿಜೆಪಿಯ ಶಾಸಕರು ಇಲ್ಲ ಇಲ್ಲ ಎಂದು ಮಕ್ಕಳಂತೆ ಜೋರಾಗಿ ಕೂಗುವುದಕ್ಕೆ ಶುರು ಮಾಡಿದರು. ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಇದೊಂದು ಇಲ್ಲಗಳ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರವಾಹದಂತೆ ಅಪ್ಪಳಿಸಿ ಬಂದು ಮನೆಗಳ ಸಮಾಧಿ ಮಾಡಿದ ಹಿಮಪಾತ: ಕಾಶ್ಮೀರದ ಸೋನಾಮಾರ್ಗ್‌ ವೀಡಿಯೋ

ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಅನೇಕರು ಇದು ಸದನ ಅಲ್ಲ ಹೈಸ್ಕೂಲ್ ಎಂದು ಕಾಮೆಂಟ್ ಮಾಡಿದ್ದಾರೆ. ಗೈರಾದವರಿಗೆಲ್ಲಾ ನೂರು ಸಲ ಬರೆದುಕೊಂಡು ಬರುವ ಶಿಕ್ಷೆ ನೀಡುವಂತೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಬಹುತೇಕ ಸಚಿವರು ಸದನಕ್ಕೆ ಗೈರಾದ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಒಳ್ಳೆಯ ಲಕ್ಷಣವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆದರೂ ವರ್ಷಕ್ಕೆ ಮೂರು ಬಾರಿ ಅದೂ ಬರೀ ಕೆಲವೇ ಕೆಲವು ದಿನ ನಡೆಯುವ ಕಲಾಪದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ಸಚಿವರು ಈ ರೀತಿ ಗೈರಾಗ್ತಿರುವುದು ಮಾತ್ರ ಬೇಸರ ವಿಚಾರ.

ಸ್ಪೀಕರ್ ಈ ರೀತಿ ಮಾತನಾಡುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರು ಸದನದ ನಿಯಮ ಮೀರಿ ಕಪ್ಪು ಶರ್ಟ್ ಧರಿಸಿ ಬಂದ ಹಾಗೂ ಬಹಳ ತಡವಾಗಿ ಸದನಕ್ಕೆ ಬಂದ ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆ ವೀಡಿಯೋ ಕೂಡ ವೈರಲ್ ಆಗಿತ್ತು.

View post on Instagram