ಕೆಲಸ ಅರಸಿ ಸ್ನೇಹಿತನೊಂದಿಗೆ ಮಂಗಳೂರಿಗೆ ಬಂದಿದ್ದ ಬಾಗಲಕೋಟೆಯ ಯುವಕನಿಗೆ ಸ್ನೇಹಿತನೇ ಕೈಕೊಟ್ಟಿದ್ದಾನೆ. ಇದರಿಂದ ದಿಕ್ಕು ತೋಚದೆ ಕರಂಗಲ್ಪಾಡಿಯಲ್ಲಿ ಮರವೊಂದನ್ನು ಏರಿ ಕುಳಿತ ಯುವಕನನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.
ಕೆಲಸಕ್ಕೆಂದು ಮಂಗಳೂರಿಗೆ ಕರೆತಂದು ಕೈಕೊಟ್ಟ ಗೆಳೆಯ
ಮಂಗಳೂರು: ಬೆಂಗಳೂರು ಬಿಟ್ಟರೆ ಮಂಗಳೂರು, ಉತ್ತರ ಕರ್ನಾಟಕದ ಸಾವಿರಾರು ವಲಸೆ ಕಾರ್ಮಿಕರಿಗೆ, ದುಡಿಮೆಗಾರರಿಗೆ ಬದುಕು ನೀಡುವ ಜಾಗವಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕಾರ್ಮಿಕರು ಇಲ್ಲಿ ತಮ್ಮ ದುಡಿಮೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಅನೇಕರಿಗೆ ಇದು ಒಂದು ರೀತಿಯ ಅರಬ್ ಕಂಟ್ರಿ ಇದ್ದಂತೆ ಇಲ್ಲಿನ(ಮಂಗಳೂರಿನ) ಯುವಕರೆಲ್ಲಾ ಕೆಲಸ ಅರಸಿ ದುಬೈ, ಕತಾರ್, ಸೌದಿ ಅಂತ ವಲಸೆ ಹೋಗಿದ್ದರೆ, ಇಲ್ಲಿ ಕೆಲಸ ಮಾಡುವುದಕ್ಕೆ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಬರುತ್ತಾರೆ. ಬಹುತೇಕ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಈ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಉತ್ತಮ ಗಳಿಕೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಪ್ರತಿ ವರ್ಷವೂ ಸಾವಿರಾರು ಜನ ಇಲ್ಲಿ ಬಂದು ಕೆಲಸ ಮಾಡುತ್ತಾರೆ. ಒಮ್ಮೆ ಇಲ್ಲಿ ಕೆಲಸಕ್ಕೆ ಬಂದವರು ಇಲ್ಲಿನ ಗಳಿಕೆ ನೋಡಿ ತಮಗೆ ಪರಿಚಯ ಇರುವವರನ್ನು ಇಲ್ಲಿಗೆ ಕರೆಸಿಕೊಳ್ಳುತ್ತಾರೆ.
ಗೆಳೆಯ ನಾಪತ್ತೆ ದಿಕ್ಕು ತೋಚದೇ ಮರವೇರಿ ಕುಳಿತ ಬಾಗಲಕೋಟೆಯ ಭೀಮಾ
ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಸ್ನೇಹಿತನ ನಂಬಿ ಕೆಲಸ ಅರಸಿ ಆತನ ಜೊತೆಗೆ ಮಂಗಳೂರಿಗೆ ಬಂದಿದ್ದ. ಆದರೆ ಆತನಿಗೆ ಇಲ್ಲಿ ಕೆಲಸ ಸಿಗುವ ಮೊದಲೇ ಆತನ ಕರೆತಂದ ಸ್ನೇಹಿತ ನಾಪತ್ತೆಯಾಗಿದ್ದಾನೆ. ಇದರಿಂದ ಏನೂ ಮಾಡುವುದು ಎಂದು ತಿಳಿಯದೇ ಯುವಕನೋರ್ವ ಮರ ಏರಿ ಕುಳಿತ ಘಟನೆ ಮಂಗಳೂರಿನ ಕರಂಗಲ್ಪಾಡಿ ಸಮೀಪ ನಡೆದಿದ್ದು, ಆತನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆ ಯುವಕನನ್ನು ಬಾಗಲಕೋಟೆಯ 24 ವರ್ಷದ ಭೀಮಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಚುಮು ಚುಮು ಚಳಿಗೆ ಮ್ಯಾಗಿ ತಯಾರಿಸಿ ಮಾರಿದ ಹುಡುಗ ಒಂದೇ ದಿನದಲ್ಲಿ ಗಳಿಸಿದ ಆದಾಯ ಎಷ್ಟು ನೋಡಿ..!
ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಬೃಹತ್ ಅಶ್ವಥ ಮರವನ್ನು ಏರಿ ಈತ ಕುಳಿತಿದ್ದು, ಈತ ಕೆಲ ದಿನಗಳ ಹಿಂದಷ್ಟೇ ತನ್ನ ಸ್ನೇಹಿತನೊಂದಿಗೆ ದೂರದ ಬಾಗಲಕೋಟೆಯಿಂದ ಮಂಗಳೂರಿಗೆ ಬಂದಿದ್ದ. ಆದರೆ ಈತನನ್ನು ಕರೆತಂದ ಸ್ನೇಹಿತ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಇದರಿಂದ ಇತ್ತ ಕೆಲಸನೂ ಇಲ್ಲ, ಅತ್ತ ಕರೆತಂದ ಸ್ನೇಹಿತನೂ ಇಲ್ಲದೆ ಕಂಗಲಾಗಿ ಮರವೇರಿ ಕೂತಿದ್ದಾನೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸುಮಾರು ಒಂದೂವರೆ ಗಂಟೆಯಿಂದ ಈತ ಮರದಲ್ಲೇ ಇರುವುದನ್ನು ನೋಡಿದ ಯಾರೋ ಪೊಲೀಸರಿಗೆ ಕರೆ ಮಾಡಿ ಹೇಳಿದ್ದು, ಬಳಿಕ ಕದ್ರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಆತನನ್ನು ರಕ್ಷಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರವಾಹದಂತೆ ಅಪ್ಪಳಿಸಿ ಬಂದು ಮನೆಗಳ ಸಮಾಧಿ ಮಾಡಿದ ಹಿಮಪಾತ: ಕಾಶ್ಮೀರದ ಸೋನಾಮಾರ್ಗ್ ವೀಡಿಯೋ
ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೀಡಿಯೋ ವೈರಲ್ ಆಗಿದ್ದು, ಅನೇಕರು ಹೀಗೆ ಅಮಾಯಕ ಯುವಕನನ್ನು ಪರಿಚಯ ಇಲ್ಲದ ನಗರದಲ್ಲಿ ಬಿಟ್ಟು ನಾಪತ್ತೆಯಾಗಿರುವ ಸ್ನೇಹಿತನ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.


