ಮಹಾರಾಷ್ಟ್ರದ ಲತೂರ್‌ನಲ್ಲಿ, ಪತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಜಗಳವಾಡಿದ ತಾಯಿಯೊಬ್ಬಳು, ತನ್ನ 18 ತಿಂಗಳ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಗಂಡನ ಮೇಲಿನ ಸಿಟ್ಟಿಗೆ ಈ ಕೃತ್ಯ ಎಸಗಿದ್ದು, ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.
ಪತಿ ಮನೆಗೆ ತಡವಾಗಿ ಆಗಮಿಸಿದ್ದಕ್ಕೆ ಆರಂಭವಾದ ಗಲಾಟೆಯೊಂದು ಪುಟ್ಟ ಮಗುವಿನ ಕೊಲೆಯಲ್ಲಿ ಅಂತ್ಯವಾಗಿದೆ. ಪತಿ ತಡರಾತ್ರಿ ಮನೆಗೆ ಬಂದಿದ್ದಕ್ಕೆ ಆಕ್ಷೇಪವೆತ್ತಿ ಪತ್ನಿ ಗಲಾಟೆ ಮಾಡಿದ್ದು, ಬಳಿಕ ಅದೇ ಸಿಟ್ಟಿನಲ್ಲಿದ್ದ ಆಕೆ ತನ್ನದೇ 18 ತಿಂಗಳ ಪುಟ್ಟ ಮಗುವನ್ನು ಚಾಕುವಿನಿಂದ ಇರಿದು ಭಯಾನಕವಾಗಿ ಕೊಲೆ ಮಾಡಿದ್ದಾಳೆ. ಮಹಾರಾಷ್ಟ್ರದ ಲತೂರ್‌ನಲ್ಲಿ ಈ ಬೀಭತ್ಸ ಘಟನೆ ನಡೆದಿದೆ. ಅಶ್ವಿನಿ ಚೌಗುಲೆ ಎಂಬಾಕೆಯೇ ಗಂಡನ ಮೇಲಿನ ಸಿಟ್ಟಿಗೆ ತನ್ನ 18 ತಿಂಗಳ ಮಗುವನ್ನು ಕೊಲೆ ಮಾಡಿದ ತಾಯಿ. ದಿನಗೂಲಿ ಕೆಲಸ ಮಾಡುತ್ತಿದ್ದ ಈಕೆಯ ಪತಿ ವಿಕ್ರಮ್ ಜಗನ್ನಾಥ ಚೌಗುಲೆ ತಡವಾಗಿ ಮನೆಗೆ ಬಂದಿದ್ದ. ಇದೇ ವಿಚಾರಕ್ಕೆ ಗಲಾಟೆ ಆರಂಭವಾಗಿ ಮಗುವಿನ ಕೊಲೆ ನಡೆದಿದೆ. ಗಂಡ ವಿಕ್ರಮ್ ಚೌಗುಲೆ ನೀಡಿದ ದೂರಿನ ಮೇರೆಗೆ ಈಗ ಪೊಲೀಸರು ಮಗುವನ್ನು ಕೊಂದ ಕ್ರೂರಿ ತಾಯಿ ಅಶ್ವಿನಿ ಚೌಗುಲೆಯನ್ನು ಬಂಧಿಸಿದ್ದಾರೆ.
ಪತಿಗೆ ಕೆಲಸ ಬಿಟ್ಟ ನಂತರ ಬೇಗ ಬರುವಂತೆ ಆಕೆ ಹೇಳಿದ್ದಳು. ಆದರೆ ವಿಕ್ರಮ್ ಚೌಗುಲೆ ತಡವಾಗಿ ಮನೆಗೆ ಬಂದಿದ್ದು, ನಂತರ ಮನೆಯಲ್ಲಿ ಇದೇ ವಿಚಾರಕ್ಕೆ ಜಗಳವಾಗಿದೆ ಎಂದು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ ಅಮೋಲ್ ತಾಂಬೆ ಹೇಳಿದ್ದಾರೆ. ಈ ಚೌಗುಲೆ ಕುಟುಂಬವು ಮೂಲತಃ ಮಹಾರಾಷ್ಟ್ರದ ಧರಶಿವ ಜಿಲ್ಲೆಯ ಕಲಂಬ್ ತಾಲ್ಲೂಕಿನ ಹಸೇಗಾಂವ್ ಗ್ರಾಮದವರಾಗಿದ್ದು, ಲಾತೂರ್ ನಗರದ ಮಂಜರಾ ಗೇಟ್ ಬಳಿಯ ಶ್ಯಾಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ದಂಪತಿಗಳ ಮನೆಯಿಂದ ಕಿರುಚಾಟ ಕೇಳಿ ನೆಹೊರೆಯ ಮನೆಯವವರು ಸ್ಥಳಕ್ಕೆ ಬಂದಿದ್ದಾರೆ. ನಂತರ ಪದೇ ಪದೇ ಹೊರಗಿನಿಂದ ಜನ ಬಾಗಿಲು ಬಡಿದರು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸಮಧಾನ್ ಚಾವರೆ ಹೇಳಿದ್ದಾರೆ.
ನಂತರ ಆತಂಕಗೊಂಡ ನೆರೆಹೊರೆಯ ಮನೆಯವರು ಅಶ್ವಿನಿಯ ಪತಿಗೆ ಮನೆಯಲ್ಲಿ ಗಲಾಟೆಯ ಸದ್ದು ಕೇಳಿದ ಬಗ್ಗೆ ಮಾಹಿತಿ ನೀಡಿದ್ದಾರೆ. ದಿನಗೂಲಿ ಕಾರ್ಮಿಕನಾಗಿದ್ದ ಆತ ಟ್ರ್ಯಾಕ್ಟರ್ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದರು. ಹಾಗೂ ಕಬ್ಬು ಲೋಡನ್ನು ತೆಗೆದುಕೊಂಡು ಕಲಂಬ್‌ಗೆ ಹೋಗಿದ್ದರು. ಇತ್ತ ನೆರೆಮನೆಯವರು ಮಾಹಿತಿ ನೀಡಿದ ನಂತರ ಆತ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾನೆ. ಮನೆಗೆ ತಲುಪಿದ ನಂತರ ಆತ ಪತ್ನಿಯನ್ನು ಕರೆದಾಗ ಬಾಗಿಲು ತೆರೆದ ಆಕೆ ತಮ್ಮ ಮಗಳನ್ನು ಹಲವು ಬಾರಿ ಇರಿದು ಕೊಂದಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಪೊಲೀಸ್ ತನಿಖೆಯಲ್ಲಿ ಅಶ್ವಿನಿ ತನ್ನ ಪುಟ್ಟ ಮಗಳು ನಂದಿನಿಯ ಮೇಲೆ ಅಡುಗೆಮನೆಯಲ್ಲಿ ಬಳಸುವ ಚಾಕುವಿನಿಂದ ಹಲ್ಲೆ ನಡೆಸಿದ್ದು, ಮಗುವಿನ ದೇಹದ ವಿವಿಧ ಭಾಗಗಳಲ್ಲಿ ಇರಿದಿದ್ದಳು. ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ ಚಿಕಿತ್ಸೆಯ ಸಮಯದಲ್ಲಿ ಮಗು ಸಾವನ್ನಪ್ಪಿದೆ. ನಂತರ ಎಂಐಡಿಸಿ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪಂಚನಾಮೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆದು ಕೊಲೆ ಮಾಡಿದ ತಾಯಿ ಅಶ್ವಿನಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 1984 ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆಗೊಳಿಸಿದ ನ್ಯಾಯಾಲಯ
ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಅವರು ಕೌಟುಂಬಿಕ ಕಲಹಗಳ ಸಂದರ್ಭದಲ್ಲಿ ಹಿಂಸಾಚಾರವನ್ನು ತಪ್ಪಿಸುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡರು. ಕೌಟುಂಬಿಕ ಅಥವಾ ಮಾನಸಿಕ ಒತ್ತಡವನ್ನು ಎದುರಿಸುತ್ತಿರುವವರು ಆಪ್ತ ಸಮಾಲೋಚನೆ ಅಥವಾ ಕಾನೂನು ನೆರವು ಪಡೆಯುವಂತೆ ಒತ್ತಾಯಿಸಿದರು. ಒಟ್ಟಿನಲ್ಲಿ ಗಂಡನ ಮೇಲಿನ ಕೋಪಕ್ಕೆ ತಾಯಿಯೊಬ್ಬಳು ತಾನೇ ಹೆತ್ತ ಏನು ಅರಿಯದ ಮುಗ್ಧ ಕಂದಮ್ಮನನ್ನು ಬಲಿ ಪಡೆದಿದ್ದಾಳೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ 12 ಗಂಟೆ ಉಬರ್ ಚಾಲಕನಾಗಿ ಕೆಲಸ ಮಾಡಿದ ಭಾರತೀಯ ಯುವಕ ಗಳಿಸಿದ್ದೆಷ್ಟು?


